ಸುದ್ದಿ ಕನ್ನಡ ವಾರ್ತೆ
ಶಿರಸಿ: ನದಿ ತಿರುವು ಯೋಜನೆ ಜಾರಿಯಾಗದಂತೆ ದೈವ ಪ್ರೇರಣೆಯ ಉದ್ದೇಶದೊಂದಿಗೆ ಯುಗಾದಿಯಿಂದ ರಾಮನವಮಿವರೆಗೆ ಪ್ರತಿದಿನ ಆಯಾ ಊರಿನ ದೇವಾಲಯಗಳಲ್ಲಿ ಭಜನೆ, ಪ್ರಾರ್ಥನೆಗಳ ಮೂಲಕ ದೈವಸ್ಮರಣೆ ನಡೆಸಬೇಕು ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ಇಟಗುಳಿ ಮಂಡಲ ವ್ಯಾಪ್ತಿಯ ವಡ್ಡಿನಗದ್ದೆ ಮಾರಿಕಾಂಬಾ ದೇವಾಲಯದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ನದಿ ತಿರುವು ಯೋಜನೆಗಳಿಂದ ಪರಿಸರ ನಾಶವಾಗುವುದಲ್ಲದೆ ಸ್ಥಳೀಯ ಜನಜೀವನಕ್ಕೂ ಗಂಭೀರ ಧಕ್ಕೆಯಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿಗೆ ಹಾನಿ ಉಂಟುಮಾಡುವ ಯೋಜನೆಗಳನ್ನು
ಸರ್ಕಾರ ಕೈಬಿಡಬೇಕು. ಈ ಕಾರಣದಿಂದಲೇ ನದಿ ತಿರುವು ಯೋಜನೆಯನ್ನು ವಿರೋಧಿಸುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಮೌಲ್ಯಗಳ ಬೆಳವಣಿಗೆಗೆ ಕುಟುಂಬದ ಪಾತ್ರ ಅತ್ಯಂತ ಮುಖ್ಯ. ಹಿಂದುತ್ವದ ಅರ್ಥವನ್ನು ತಪ್ಪಾಗಿ ಗ್ರಹಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿರುವುದು ವಿಷಾದನೀಯ. ಹಿಂದುತ್ವವು ವಿಭಜನೆಯಲ್ಲ,ಏಕತೆಯ ಸಂದೇಶವನ್ನು ಸಾರುವ ಜೀವನಮಾರ್ಗವಾಗಿದೆ. ಮನೆಗಳಲ್ಲಿ ಮಕ್ಕಳಿಗೆ ಸನಾತನ ಸಂಸ್ಕೃತಿ, ನೀತಿ-ನಿಷ್ಠೆ, ಪರಸ್ಪರ ಗೌರವ ಮತ್ತು ದೇಶಭಕ್ತಿ ಬೋಧನೆಯಾದರೆ ಸಮಾಜ ಸುಸಂಘಟಿತವಾಗುತ್ತದೆ.
ಹಿಂದುತ್ವವು ಯಾವುದೇ ಜಾತಿಯ ಚೌಕಟ್ಟಿಗೆ ಸೀಮಿತವಾಗಿರುವುದಿಲ್ಲ. ಅದು ಮನೆಮನೆಗಳಲ್ಲಿ ನೀಡಲಾಗುವ ಉತ್ತಮ ಸಂಸ್ಕಾರದ ಒಟ್ಟು ಫಲವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿರಸಿ ವಿಭಾಗದ ಬೌದ್ಧಿಕ ಪ್ರಮುಖ ಮಧುಸೂದನ ಕಿರುಗಾರ ದಿಕ್ಕೂಚಿ ಭಾಷಣ ಮಾಡಿ ಇತ್ತೀಚಿನ ವರ್ಷಗಳಲ್ಲಿ ಹಿಂದುಗಳ ಜನಸಂಖ್ಯೆ ಕುಸಿಯುತ್ತಿರುವುದು ಚಿಂತಾಜನಕ ಬೆಳವಣಿಗೆ,ಇದೇ ಸ್ಥಿತಿ ಮುಂದುವರಿದರೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗಳಿಗೆ ಧಕ್ಕೆಯಾಗಬಹುದು. ಹೀಗಾಗಿ ಸಮಾಜ ಸಂಘಟಿತವಾಗಿ ಜಾಗೃತಿ ಮೂಡಿಸಿ ಹಿಂದು ಜನಸಂಖ್ಯೆಹೆಚ್ಚಳದ ಕುರಿತು ಚಿಂತನೆ ನಡೆಸಬೇಕು ಎಂದು ಅವರು ಕರೆ ನೀಡಿದರು.
ಹಿಂದೂ ಸಮಾಜೋತ್ಸವದ ಅಂಗವಾಗಿ ಶಿಕ್ಷಣ, ಕೃಷಿ, ಸಮಾಜಸೇವೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ 25 ಸ್ಥಳೀಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇಡ್ತಳ್ಳಿಯ ಪ್ರಗತಿಪರ ರೈತ ಮಹಿಳೆ ಸುನಂದಾ ನಾಯ್ಕ, ಸಮಾಜೋತ್ಸವ ಸಂಚಾಲನಾ ಸಮಿತಿ ಅಧ್ಯಕ್ಷ ಪರಮೇಶ್ವರ ಹೆಗಡೆ ಹೊಸ್ಮನೆ, ಸಂಚಾಲಕ ರಾಜು ನಾಯ್ಕ ನೀರ್ನಳ್ಳಿ ಹಾಗೂ ಇತರರು ಇದ್ದರು.
