ಸುದ್ದಿ ಕನ್ನಡ ವಾರ್ತೆ

ಶಿರಸಿ:ನಗರದ ದಕ್ಷಿಣ ಭಾರತದ ಸುಪ್ರಸಿದ್ಧ ಅತಿ ದೊಡ್ಡ ಜಾತ್ರೆಗಳಲ್ಲೊಂದಾದ ಶಿರಸಿ ಮಾರಿಕಾಂಬಾ ಜಾತ್ರೆಯ ಗದ್ದುಗೆಗೆ ಭಾನುವಾರ ರಜೆಯ ದಿನವಾದ ಕಾರಣ ಭಕ್ತರಿಂದ ಕಿಕ್ಕಿರಿದು ತುಂಬಿತ್ತು.

ಬೆಳಿಗ್ಗೆ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತರು ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದು, ಬೆಳಿಗ್ಗೆಯಿಂದ ತಡರಾತ್ರಿ 3 ಗಂಟೆಯವರೆಗೆ ನಿರಂತರವಾಗಿ ದೇವಿಯ ದರ್ಶನ ನಡೆಯಿತು. ಒಂದೇ ದಿನ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿರುವುದಾಗಿ ಅಂದಾಜಿಸಲಾಗಿದೆ. ಶನಿವಾರ ರಾತ್ರಿಯಿಡೀ ಭಕ್ತರ ಸಂಚಾರ ಮುಂದುವರಿದ ಹಿನ್ನೆಲೆಯಲ್ಲಿ ಇಡೀ ನಗರವೇ ಹಗಲಿನಂತೆ ಭಾಸವಾಗುತ್ತಿತ್ತು.

ನಗರ ಪ್ರವೇಶಿಸುವ ಸಾವಿರಾರು ವಾಹನಗಳಿಂದ ಮೂರ್ನಾಲ್ಕು ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು. ವಾಹನ ಹಾಗೂ ಜನರ ನಿಯಂತ್ರಣಕ್ಕಾಗಿ ಪೊಲೀಸರು, ಗೃಹರಕ್ಷಕ ದಳ, ಸೌಟ್ಸ್ ಮತ್ತು ಗೈಡ್ಸ್ ಹಾಗೂ ಸ್ವಯಂಸೇವಕರು ಹರಸಾಹಸಪಟ್ಟರು.
ಭಕ್ತರು ಮಾರಿಕಾಂಬೆಯನ್ನು ಕೇವಲ ಶಕ್ತಿದೇವತೆಯಾಗಿ ಮಾತ್ರವಲ್ಲದೆ ಸಂತಾನ ಭಾಗ್ಯ ಕರುಣಿಸುವ ತಾಯಿ ಎಂದು ಪರಮ ನ೦ಬಿಕೆಯಿ೦ದ ಆರಾಧಿಸುತ್ತಾರೆ. ಈ ಹಿನ್ನೆಲೆಯಲ್ಲಿ ದರ್ಶನದ ವೇಳೆ ನೂರಾರು ದಂಪತಿ ದೇವಿಯ ಗದ್ದಿಗೆಯ ಮುಂದೆ ಬೆಳ್ಳಿ ತೊಟ್ಟಿಲುಗಳನ್ನು ಕಾಣಿಕೆಯಾಗಿ ಸಮರ್ಪಿಸಿ ಹರಕೆ ತೀರಿಸಿದರು. ಮಕ್ಕಳಿಲ್ಲದವರಿಗೆ ಮಡಿಲು ತುಂಬುವ ತಾಯಿ ಎಂಬ ಅಚಲ ವಿಶ್ವಾಸದಿಂದ ದೂರದೂರುಗಳಿಂದ ಭಕ್ತರು ಆಗಮಿಸಿರುವುದು ವಿಶೇಷವಾಗಿ ಗಮನ ಸೆಳೆಯಿತು.

ಮೂರು ಕಿಲೋಮೀಟರ್‌ಗಟ್ಟಲೇ ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದ ಲಕ್ಷಾಂತರ ಭಕ್ತರು, ದೇವಿಯ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿರುವ ದೃಶ್ಯ ಮನಸೂರೆಗೊಳಿಸಿತು. ಉರಿ ಬಿಸಿಲಿಲನ್ನೂ ಲೆಕ್ಕಿಸದೇ ಜನರು ದೇವಿಯ ದರ್ಶನ ಪಡೆದರು. ಶ್ರೀ ಮಾರಿಕಾಂಬೆ ದೇವಿಯ ಗದ್ದುಗೆಗೆ ಉತ್ತರಕನ್ನಡ ಜಿಲ್ಲೆಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಮಾಜಿ ಸಂಸದರಾದ ಅನಂತಕುಮಾರ ಹೆಗಡೆಯವರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದರು.