ಸುದ್ದಿ ಕನ್ನಡ ವಾರ್ತೆ
ಶಿರಸಿ:ನಗರದ ದಕ್ಷಿಣ ಭಾರತದ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಗದ್ದುಗೆಗೆ 5 ನೇ ದಿನದಂದು ಶನಿವಾರ ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ಬೆಳಿಗ್ಗೆ 5 ಗಂಟೆಯಿಂದಲೇ ಸೇವಾ ಕಾರ್ಯ ಆರಂಭವಾಗಿದ್ದು, ಭಕ್ತಾದಿಗಳು ಸಾಲಿನಲ್ಲಿ ನಿಂತು ದೇವಿಗೆ ಉಡಿ ತುಂಬುವುದು ಮತ್ತು ಹಣ್ಣು ಕಾಯಿ ಸಲ್ಲಿಸುವುದು ಶ್ರದ್ಧಾ ಭಕ್ತಿಯಿಂದ ನಡೆಯಿತು.
ಹಲವಾರು ಜನ ಭಕ್ತಾದಿಗಳು ದೂರದ ಊರಿನಿಂದ ಬಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ಅನೇಕ ವೃದ್ಧರು, ವಿಕಲಚೇತನರೂ ಸೇರಿದಂತೆ ಹಿರಿಯರು, ಯುವಕ,
ಯುವತಿಯರು ದೇವಿಯ ದರ್ಶನ ಪಡೆಯಲು ರಾಜ್ಯ ಅಂತರರಾಜ್ಯಗಳಿಂದ ಬರುತ್ತಿರುವುದು ವಿಶೇಷವಾಗಿ ಕಂಡು ಬಂದಿತು.
ದೂರದ ಪ್ರದೇಶಗಳಿಂದ ಬಂದಂತಹ ಭಕ್ತಾಧಿಗಳು ಅಮ್ಯೂಸ್ಮೆಂಟ್ ಪಾರ್ಕ್, ಸರ್ಕಸ್ ಹಾಗೂ ನಾಟಕ ಪ್ರದರ್ಶನಗಳನ್ನು ಕುತೂಹಲದಿಂದ ನೋಡಿ, ಪಾಲ್ಗೊಂಡು ಆನಂದಿಸಿದರು.
ಎಂದಿನಂತೆ ಮಾರಿಕಾಂಬೆಯ ಸೀರೆ ಮಾರಾಟ ಜೋರಾಗಿ ಕಂಡು ಬಂದಿತು. ದಿನಕ್ಕೆ 10 ಸಾವಿರದಿಂದ 12 ಸಾವಿರ ಸೀರೆಗಳು ಮಾರಾಟವಾಗುತ್ತಿವೆ.ದಿನಕ್ಕೆ ಸುಮಾರು 50 ಸಾವಿರದಿಂದ 60 ಸಾವಿರ ಉಡಿಗಳು ಮಾರಾಟವಾಗುತ್ತಿವೆ. ತಾಯಿ ಜಗನ್ಮಾತೆಗೆ ಭಕ್ತಾದಿಗಳು ಸೀರೆ ಕುಪ್ಪಸಗಳನ್ನು ತಂದು ಸಲ್ಲಿಸುವುದನ್ನು ಭಕ್ತಾದಿಗಳು ಕಣ್ಣುಂಬಿಕೊಂಡರು. ದಿನಕ್ಕೆ ಸುಮಾರು 15 ಸಾವಿರದಿಂದ 18 ಸಾವಿರ ಲಡ್ಡು ಪ್ರಸಾದವು ಮಾರಾಟವಾಗುತ್ತಿವೆ ಎನ್ನಲಾಗುತ್ತಿದೆ.
ಪ್ರತಿ ಸಲದ ಜಾತ್ರೆಯಂತೆ ಈ ಸಲದ ಜಾತ್ರೆಯಲ್ಲಿ ಭಕ್ತಾದಿಗಳು ಬೆಂಡು ಬೆತ್ತಾಸಗಳನ್ನು ಮಂಡಕ್ಕಿ, ಸೇವುಗಳನ್ನು ಹಾಗೂ ಸಿಹಿ ತಿಂಡಿಗಳನ್ನು ಖರೀದಿಸುವ ಭರಾಟೆ ಜೋರಾಗಿ ಕಂಡು ಬಂದಿತು.
ಮತ್ತು ನಗರದ ಅನೇಕ ಕಡೆಗಳಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಬಂದಂತ ಭಕ್ತಾದಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಅನ್ನಸಂತರ್ಪಣೆಯನ್ನು ಹಲವಾರು ಸಂಘ ಸಂಸ್ಥೆಗಳಿಂದ ಮತ್ತು ಶಿರಸಿಯ ವ್ಯಾಪಾರ ವಹಿವಾಟು ವರ್ತಕರ ಸಂಘಗಳಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಒಟ್ಟಾರೆಯಾಗಿ ದೇವಿಯ ಲಕ್ಷಾಂತರ ಭಕ್ತಗಣ ಹರಿದು ಬಂದು ದೇವಿಗೆ ವಿಶೇಷ ಪೂಜೆ ಸಲ್ಲಿಸುವುದು ಮತ್ತು ಹರಕೆಗಳನ್ನು ತೀರಿಸುವುದು ಮತ್ತು ಪ್ರಸಾದ ಸ್ವೀಕರಿಸಿ ದೇವಸ್ಥಾನದ ವತಿಯಿಂದ ತಯಾರಿಸಿದ ಲಾಡುಗಳನ್ನು ಭಕ್ತಾದಿಗಳು ಖರೀದಿಸುವುದು ಈ ದಿನದ ವಿಶೇಷವಾಗಿತ್ತು. ಶ್ರೀ ಮಾರಿಕಾಂಬೆಯ ದೇವಿಯ ಜಾತ್ರೆಯ ಗದ್ದಗೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ ಗೂಂಡುರಾವ್ ,ಬೆಂಗಳೂರಿನ ಬ್ರಹ್ಮಾಂಡ ಗುರೂಜಿಯವರು, ಕುಮಟಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ, ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ ಶಾಸಕರಾದ ರೂಪಾ ನಾಯ್ಕ ದೇವಿಯ ದರ್ಶನ ಪಡೆದರು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಎಲ್ಲಾ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು.
