ಸುದ್ದಿ ಕನ್ನಡ ವಾರ್ತೆ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಗಳಾದ ಬೇಡ್ತಿ ಮತ್ತು ಅಘನಾಶಿನಿ ನದಿ ತಿರುವು ಯೋಜನೆಗಳನ್ನು ಸರ್ಕಾರ ಕೂಡಲೇ ಕೈಬಿಡಲಿ ಎಂದು ಆಶಿಸಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ಸ್ವರ್ಣವಲ್ಲೀ ಮಹಾಸಂಸ್ಥಾನದ ಪದಾಧಿಕಾರಿಗಳು ಶುಕ್ರವಾರ ಶಿರಸಿ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.
ಶಿರಸಿ ಮಾರಿಕಾಂಬಾ ಜಾತ್ರೆಯ ಶುಭ ಸಂದರ್ಭದಲ್ಲಿ ದೇವಿಯ ಸನ್ನಿಧಿಗೆ ಆಗಮಿಸಿದ ಸಮಿತಿಯ ಸದಸ್ಯರು, ಮಲೆನಾಡಿನ ನಿಸರ್ಗ ದತ್ತ
ನದಿಗಳ ಉಳಿವಿಗೆ ಶಕ್ತಿ ನೀಡುವಂತೆ ಜಗನ್ಮಾತೆಯಲ್ಲಿ ಮೊರೆಹೋದರು.
ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರ ಗೌರವ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಹೋರಾಟವು ಕಳೆದ 40 ವರ್ಷಗಳಿಂದ ನಿರಂತರವಾಗಿದೆ. 1982 ರಿಂದಲೂ ನಿನ್ನ ಆಶೀರ್ವಾದದಿಂದ ಈ ನೆಲ-ಜಲವನ್ನು ಉಳಿಸಿಕೊಂಡು ಬಂದಿದ್ದೇವೆ. ಈಗ ಮತ್ತೆ ಎಂಟು ತಿಂಗಳಿಂದ ಸಿದ್ದಾಪುರ, ಯಲ್ಲಾಪುರ, ಕುಮಟಾ ಹಾಗೂ ಅಂಕೋಲಾ ಭಾಗದ ರೈತರು,ಮೀನುಗಾರರು ಮತ್ತು ವನವಾಸಿಗಳು ನದಿ ತಿರುವು ಯೋಜನೆಯೆಂಬ ಭೂತವನ್ನು ಓಡಿಸಲು ಹರಸಾಹಸ ಪಡುತ್ತಿದ್ದೇವೆ ಎಂದು ಭಕ್ತರು ದೇವಿಯ ಮುಂದೆ ಪ್ರಾರ್ಥನಾ ಪತ್ರ ಮಂಡಿಸಿದರು.
ಮಲೆನಾಡಿನ ನದಿ ಕಣಿವೆಗಳು ನಾಶವಾದರೆ ಮಲೆನಾಡಿಗೂ ನೀರಿಲ್ಲ, ಬಯಲು ಸೀಮೆಗೂ ನೀರಿಲ್ಲದಂತಾಗುತ್ತದೆ. ಈ ಸತ್ಯವನ್ನು ಅರಿತು ರಾಜ್ಯದ ಮುಖ್ಯಮಂತ್ರಿಗಳು, ನೀರಾವರಿ ಸಚಿವರು ಹಾಗೂಕೇಂದ್ರ ಸಚಿವರು ಯೋಜನೆಯನ್ನು ಕೈಬಿಡುವಂತಾಗಲಿ ಎಂದು ಪ್ರಾರ್ಥಿಸಲಾಯಿತು. ಈ ಜನಾಂದೋಲನಕ್ಕೆ ಜಯ ಸಿಗಲು ಆಧ್ಯಾತ್ಮಿಕ ಶಕ್ತಿ ನೀಡುವಂತೆ ದೇವಿಯನ್ನು ಬೇಡಿಕೊಳ್ಳಲಾಯಿತು.
ವಿಶೇಷ ಪೂಜೆ ಮತ್ತು ಆರತಿಯಲ್ಲಿ ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಉಮಾಪತಿ ಭಟ್ ಮತ್ತಿಗಾರ, ದಾಮೋದರ ಭಟ್ ಶಿರಸಿ, ಸಿ.ಎಸ್. ಹೆಗಡೆ, ಮಂಜುನಾಥ ಹೆಗಡೆ ಪಾಲ್ಗೊಂಡಿದ್ದರು. ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಯ್ಕ ಹಾಗೂ ಆಡಳಿತ ಮಂಡಳಿಯವರು ಸಹಕರಿಸಿದರು.
