ಸುದ್ದಿ ಕನ್ನಡ ವಾರ್ತೆ

. ಶಿರಸಿ:ನಗರದ, ದಕ್ಷಿಣ ಭಾರತದ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ಮಾರಿಕಾಂಬೆಯ ರಥರೋಹಣ ಮಾಡಿ ಶ್ರೀ ದೇವಿಯನ್ನು ಗದ್ದುಗೆಯ ಮೇಲೆ ಕೂರಿಸಲು ಭಕ್ತವೃಂದದವರೂ ಕಾತುರದಲ್ಲಿದ್ದಾರೆ.

9 ದಿನಗಳ ಕಾಲ ನಡೆಯುವ ಈ ಜಾತ್ರೆ ಫೆ. 24ರಂದು ದೇವಿ ರಥೋತ್ಸವದ ರಥಕ್ಕೆ ಪೂಜೆ, ಕಲಶಾರೋಹಣ ಅಪರಾಹ್ನ ನಡೆದರೆ, ರಾತ್ರಿ ಭಕ್ತ ಶಿಷ್ಯ, ಮಕ್ಕಳೆದುರು ಶ್ರೀದೇವಿಗೆ ಕಲ್ಯಾಣ ಪ್ರತಿಷ್ಠೆ ಕಾರ್ಯಕ್ರಮಗಳು ನಡೆದವು. ದೇವಸ್ಥಾನದ ಎದುರು ನಿರ್ಮಾಣ ಮಾಡಲಾದ ರಥದ ಪೂಜೆ ಮಧ್ಯಾಹ್ನ 12.30ಕ್ಕೆ ಆರಂಭಗೊಂಡಿತು. ಅರ್ಚಕರು, ಬಾಬುದಾರರು, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ, ಟ್ರಸ್ಟ್ ಸದಸ್ಯರು ಇದ್ದರು. ಮಧ್ಯಾಹ್ನದ ಸುಡು ಬಿಸಿಲಿನಲ್ಲೂ ಭಕ್ತರ ಜಯಕಾರದ ನಡುವೆ 1 ಗಂಟೆ 5 ನಿಮಿಷಕ್ಕೆ ಕಲಶಾರೋಹಣ ನಡೆಸಲಾಯಿತು. ರೈತರು ಕಬ್ಬು, ಅಡಿಕೆ, ತೆಂಗು ಇತರ ಬೆಳೆಗಳನ್ನು ರಥಕ್ಕೆ ಕಟ್ಟಯವ ಮೂಲಕ ಸಮರ್ಪಣೆ ಮಾಡಿದರು. ರಥಕ್ಕೆ ಪತಾಕೆ, ಭಗವಾಧ್ವಜ ಹಚ್ಚಲಾಯಿತು.
ಅಮ್ಮನ ರಥದ ಕಳಶ ಪ್ರತಿಷ್ಠೆಯ ವೀಕ್ಷಣೆಗೆ ಸವದತ್ತಿ, ಬೆಳಗಾವಿ, ಕುಂದಾಪುರದ ಅಸಂಖ್ಯ ಭಕ್ತರು ಆಗಮಿಸಿದ್ದರು. ಕೆಲಭಕ್ತರು ಭಾವೋನ್ಮಾದಲ್ಲಿ ಪುಳಕಿತರಾದರು. ಬುಧವಾರ ಬೆಳಿಗ್ಗೆ ಶೋಭಾಯಾತ್ರೆ ನಡೆದು ಬಿಡಕಿ ಬಯಲಿನಲ್ಲಿ ಮಧ್ಯಾಹ್ನ ದೇವಿ ಪ್ರತಿಷ್ಠಾಪನೆ ಆಗಲಿದೆ ಮೇಟಿ ದೀಪ ಬಂದ ಬಳಿಕ ಆರತಿ ಬೆಳಗಲಾಗುತ್ತದೆ.
ಫೆ. 26ರಿಂದ ಸೇವೆ ಆರಂಭವಾಗಲಿದೆ. ಮಾ.4ರ ತನಕ ಪ್ರತಿ ದಿನ ಬೆಳಿಗ್ಗೆ 5ರಿಂದ ರಾತ್ರಿ 10 ಗಂಟೆಯವರೆಗೆ ದೇವಿಗೆ ಹರಕೆ ಸಲ್ಲಿಸಲು ಅವಕಾಶ ಇದೆ. ಮಾ.4ರಂದು 10.45ರ ಬಳಿಕ ದೇವಿ ವಿಸರ್ಜನಾ ಪ್ರಕ್ರಿಯೆ ಆರಂಭವಾಗಲಿದೆ. ಮಾ. 19ರ ಯುಗಾದಿಯ ಬೆಳಗ್ಗೆ 7.59 ಕ್ಕೆ ದೇವಿಯು ಪುನಾ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದಾಳೆ.
ಈ ವೇಳೆ ದೇವಸ್ಥಾನದ ಮಂಡಳಿಯ ಅಧ್ಯಕ್ಷ ಆರ್‌.ಜಿ. ನಾಯ್ಕ,ಉಪಾಧ್ಯಕ್ಷ ಸುದೇಶ ಜೋಗಳೇಕರ್, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಶಿವಾನಂದ ಶೆಟ್ಟಿ, ವತ್ಸಲಾ ಹೆಗಡೆ, ಬಾಬುದಾರ ಪ್ರಮುಖರು,ಟ್ರಸ್ಟ್ ನ ಸದಸ್ಯರು,ಇನ್ನಿತರ ಪ್ರಮುಖರು ಇದ್ದರು.