ಸುದ್ದಿ ಕನ್ನಡ ವಾರ್ತೆ
ಕಾರವಾರ: ಬಂಗಾಳ ಕೊಲ್ಲಿಯಲ್ಲಿ
ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಹಲವೆಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿದೆ.
ಯಲ್ಲಾಪುರ, ಶಿರಸಿ ತಾಲೂಕುಗಳಲ್ಲಿ ಸುಮಾರು ಅರ್ಧ ತಾಸಿನ ಕಾಲ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಶಿರಸಿ ಶ್ರೀ ಮಾರಿಕಾಂಬೆಯ ದೇವಿಯ ಜಾತ್ರೆಗೆ ಮಳೆಯ ಸಿಂಚನ ಆಗಿದೆ. ಏಕಾಏಕಿ ಸುರಿದ ಮಳೆಯಿಂದ ಹೆದ್ದಾರಿಗಳ ಮೇಲೆ ನೀರು ತುಂಬಿ ಹರಿಯುತ್ತಿರುವ ದೃಶ್ಯ ಕಂಡುಬಂದಿದೆ. ಕೆಲವೆಡೆ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಅಕಾಲಿಕ ಮಳೆಯಿಂದ ವ್ಯಾಪಾರಿಗಳು ಹಾಗೂ ದೈನಂದಿನ ಕೆಲಸಗಳಿಗೆ ತೆರಳಿದ ಜನರು ಸಂಕಷ್ಟ ಅನುಭವಿಸಿದರು. ಅದೇ ರೀತಿಯಾಗಿ ಜೋಯಿಡಾ ತಾಲೂಕಿನ ಅಲ್ಲಲ್ಲಿ ಭಾರಿ-ಗಾಳಿ ಗುಡುಗು ಸಹಿತ ಮಳೆಯಿಂದಾಗಿ ರೈತಾಪಿ ಜನರು ತಮ್ಮ ಅಡಿಕೆಯನ್ನು ರಕ್ಷಿಸಲು ಸಂಕಷ್ಟ ಅನುಭವಿಸಬೇಕಾಯಿತು.
ಗ್ರಾಮೀಣ ಪ್ರದೇಶದ ಜನರು ಕಚ್ಚಾ ರಸ್ತೆಯ ರಾಡಿಯಲ್ಲಿ ವಾಹನ ಸಂಚಾರಕ್ಕೆ ಪರದಾಡಬೇಕಾಯಿತು.ತಾಲೂಕು/ಜಿಲ್ಲಾದ್ಯಂತ ದಿನವಿಡೀ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುಂಚಿತವಾಗಿ ಸೂಚನೆ ನೀಡಿತ್ತು. ಇಲಾಖೆಯ ಮುನ್ಸೂಚನೆ ಅನ್ವಯ ಮಳೆಯ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
