ಸುದ್ದಿ ಕನ್ನಡ ವಾರ್ತೆ

ಕಾರವಾರ: ಮುಂದಿನ ಆಯವ್ಯಯದಲ್ಲಿ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುತ್ತೇನೆ.
ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುವ ಉದ್ದೇಶದಿಂದ 2016 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಲಾಗಿದ್ದು, ಇಂದು 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಮೊದಲು ಇಲ್ಲಿನ ಜನರು ಉನ್ನತ ಮಟ್ಟದ ಚಿಕಿತ್ಸೆಗಾಗಿ ಉಡುಪಿ, ಮಂಗಳೂರು, ಹುಬ್ಬಳ್ಳಿಗೆ ಹೋಗುತ್ತಿದ್ದರು. ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಂದಿನ ಆಯವ್ಯಯದಲ್ಲಿ ಮಂಜೂರು ಮಾಡಿಕೊಡುತ್ತೇನೆ.

ಪ್ರತಿ ಜಿಲ್ಲೆಯಲ್ಲಿಯೂ ಬಡವರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಕ್ಯಾನ್ಸರ್ ಯೂನಿಟ್ ಒಂದನ್ನು ಕಾರವಾರದಲ್ಲಿ ಸ್ಥಾಪಿಸಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿ ಎಲ್ಲಾ ವೈದ್ಯಕೀಯ ವ್ಯವಸ್ಥೆಗಳನ್ನು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಕರ್ನಾಟಕದಲ್ಲಿ ಈಗಾಗಲೇ 22 ಸರ್ಕಾರಿ ಮೆಡಿಕಲ್ ಕಾಲೇಜಿದ್ದು, ಮುಂದಿನ ದಿನಗಳಲ್ಲಿ ಕೋಲಾರ, ಪುತ್ತೂರು, ಬಿಜಾಪುರಗಳಲ್ಲಿ ಕಾಲೇಜು ನಿರ್ಮಿಸಲಾಗುವುದು.

ಗ್ಯಾರಂಟಿಗಳಿಂದ ಸರ್ಕಾರದ ಬಳಿ ಹಣವಿಲ್ಲ ಎಂದು ವಿರೋಧ ಪಕ್ಷದವರು ಟೀಕಿಸುತ್ತಿದ್ದಾರೆ. ಆದರೆ ನಮ್ಮ ಅಭಿವೃದ್ಧಿಯ ಪಯಣ ನಿರಂತರವಾಗಿ ಸಾಗಿದೆ. ಉತ್ತರ ಕನ್ನಡ ಜಿಲ್ಲೆಗೆ 2,954 ಕೋಟಿ ರೂ.ಗಳನ್ನು ಇಲ್ಲಿವರೆಗೆ ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸಲಾಗಿದೆ. ರಾಜ್ಯದಲ್ಲಿ ಸುಮಾರು 1,18,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಬಿಜೆಪಿಯವರು ನಮ್ಮ ಜನಪರ ಯೋಜನೆಗಳನ್ನು ಟೀಕಿಸುತ್ತಾ, ಅಭಿವೃದ್ಧಿಯಾಗುತ್ತಿಲ್ಲವೆಂದು ದೂರುತ್ತಿದ್ದಾರೆ. ಬಿಜೆಪಿಯವರು ತಮ್ಮ ಅವಧಿಯಲ್ಲಿ ಇಲ್ಲಿನ ಸೇತುವೆ ಯೋಜನೆಗಳನ್ನು ಪೂರ್ಣಗೊಳಿಸಲಿಲ್ಲ. ನಮ್ಮ ಸರ್ಕಾರ ಉಳುಗಾ ಕೆರವಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಯೋಜನೆಯನ್ನು ಆದ್ಯತೆ ಮೇಲೆ ಪೂರ್ಣಗೊಳಿಸುತ್ತದೆ.

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದೆ
– ⁠ಸಿದ್ದರಾಮಯ್ಯ