ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನಲ್ಲದೇ ಜಿಲ್ಲೆಯಾದ್ಯಂತ ಜಾತ್ರೆಗಳ ಜಾತ್ರಾ ಮಹೋತ್ಸವ, ಮಹಾರಥೋತ್ಸವಗಳು ವಿಜ್ರಂಭಣೆಯಿಂದ ನಡೆಯುತ್ತಿದ್ದು,ಜಿಲ್ಲೆಯಲ್ಲಿ ಮುಗಿದ ಜಾತ್ರೆಗಳಾದರೆ ಕದ್ರಾ ಶ್ರೀ ಮಹಾಮಾಯಾ ದೇವಿಯ,ಗೋಕರ್ಣ ಮಹಾಬಲೇಶ್ವರ ದೇವರ ಜಾತ್ರೆ,ಇತ್ತೀಚಿನ ಯಲ್ಲಾಪುರದ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಇನ್ನಿತರ ಭಾಗದ ಜಾತ್ರಾ ಮಹೋತ್ಸವಗಳ ಮುಕ್ತಾಯ, ನಡೆಯುತ್ತಿರುವ ಸಂಭ್ರಮಗಳ ನಡುವೆ ಫೆಬ್ರುವರಿ 24 ರಿಂದ ಆರಂಭವಾಗಲಿರುವ ದಕ್ಷಿಣ ಭಾರತದ ವಿಶ್ವವಿಖ್ಯಾತ ಶಿರಸಿ ಶ್ರೀ ಮಾರಿಕಾಂಬೆಯ ದೇವಿಯ ಜಾತ್ರಾ ಮಹೋತ್ಸವ ಭಕ್ತರಲ್ಲಿ ಉತ್ಸಾಹ ಹೆಚ್ಚಿಸಿದೆ. ಇವೆಲ್ಲವೂಗಳ ನಡುವೆ ನಮ್ಮ ಜೋಯಿಡಾ ತಾಲೂಕಿನ ಉತ್ತರ ಕರ್ನಾಟಕ ಭಾಗದ ಶಿವಶರಣರ ಪ್ರಸಿದ್ಧ ಪುಣ್ಯ ಕ್ಷೇತ್ರ ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ,ಮಹಾರಥೋತ್ಸವ ಇತ್ತೀಚಿಗೆ ಅದ್ಧೂರಿಯಾಗಿ ಸಂಪನ್ನಗೊಂಡ ನೆನಪು ಇರುವಾಗಲೇ,ತಾಲೂಕಿನ ಗಡಿಭಾಗ ನೆರೆಯ ಗೋವಾ ರಾಜ್ಯ,ಬೆಳಗಾವಿ ಜಿಲ್ಲೆ,ಅಳ್ಳಾವರ-ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಾನವಾದ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ತಾಲೂಕಿನ ಎರಡನೇಯ ಅತಿ ಜಾತ್ರೆಗಳಲ್ಲಿ ಒಂದಾದ ಶ್ರೀ ರಾಮಲಿಂಗ ದೇವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದು,ಫೆಬ್ರುವರಿ 23 ರ ಸೋಮವಾರದ ಮಹಾರಥೋತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ಕ್ಷಣಗಣನೆ ಆರಂಭವಾಗಿದೆ. ಈ ಹಿಂದೆ ಗಣೇಶಗುಡಿಯಲ್ಲಿ ಕಾಳಿ ನದಿಗೆ ಅಡ್ಡವಾಗಿ ಸೂಪಾ ಆಣೆಕಟ್ಟು ಕಟ್ಟುವ ಮೊದಲು ಸೂಪಾ ಗ್ರಾಮದ ಗ್ರಾಮಸ್ಥರ ಆರಾಧ್ಯ ದೇವರಾಗಿದ್ದ ಶ್ರೀರಾಮಲಿಂಗ ದೇವರು ಪರಿವಾರ ದೇವರುಗಳನ್ನು ಈಗಿನ ನಮ್ಮ ತಾಲೂಕಿನ ಗಡಿ ಭಾಗವಾದ ರಾಮನಗರದಲ್ಲಿ, ವಿದ್ಯುತ್ ಉತ್ಪಾದನೆಯ ದೃಷ್ಟಿಯಿಂದ ನಿರ್ಮಾಣವಾದ ಸೂಪಾ ಜಲಾಶಯದ ಕಾರಣ ಸ್ಥಾಪನೆ ಮಾಡಲಾಯಿತು. ಇಲ್ಲಿನ ಬಹು ಸಂಖ್ಯೆಯ ಗ್ರಾಮಸ್ಥರು ಕೊಂಕಣಿ-ಮರಾಠಿ ಭಾಷೆಯನ್ನು ಮಾತಾನಾಡುವವರು, ಜೊತೆಯಲ್ಲಿ ಎಲ್ಲಾ ಭಾಷೆಯ,ಧರ್ಮಗಳ ಜನರ ಜೊತೆ ಪರಸ್ಪರ ಸಹಬಾಳ್ವೆಯ, ಶಾಂತಿಯುತ ಜೀವನ ನಡೆಸುತ್ತಿರುವುದು ಸರ್ವ ಜನಾಂಗದ ಶಾಂತಿಯ ತೋಟ ಇಲ್ಲಿ ಕಾಣಬಹುದಾಗಿದೆ. ಈಗಾಗಲೇ ಪರ ಊರಿನಲ್ಲಿ ಅನ್ಯ ಕೆಲಸದ,ಉದ್ಯೋಗ,ಇನ್ನಿತರ ಕೆಲಸಗಳಿಂದ ಹೊರ ವಾಸವಿರುವ ಜನರು ತಮ್ಮ ಪರಿವಾರವನ್ನು ಕೂಡಿಕೊಳ್ಳುತ್ತಿದ್ದಾರೆ.ಅದೇ ರೀತಿಯಾಗಿ ತಮ್ಮ ತಮ್ಮ ನೆಂಟರು, ಸಂಬಂಧಿಕರು,ಮಿತ್ರ ವೃಂದದವರಿಗೆ, ಸಹದ್ಯೋಗಿಗಳಿಗೆ,ಖುದ್ದು ಸಂಪರ್ಕ,ದೂರವಾಣಿ, ಜಂಗಮವಾಣಿ(ಮೊಬೈಲ್)ಮೂಲಕ ಸಂಪರ್ಕ ಮಾಡಿ ಫೆಬ್ರುವರಿ 23 ಸೋಮವಾರದ ಮಹಾರಥೋತ್ಸವಕ್ಕೆ ಬರುವಂತೆ ಆಮಂತ್ರಿಸುತ್ತಿದ್ದಾರೆ. ಸುವ್ಯವಸ್ಥಿತ ಜಾತ್ರೆಗೆ ಸಂಬಂಧಿಸಿದಂತೆ ತಾಲೂಕಾ ಆಡಳಿತದ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಸ್ಥಳೀಯ ಗ್ರಾಮ ಪಂಚಾಯತ ಕಾರ್ಯಾಲಯ,ಆರೋಗ್ಯ ಇಲಾಖೆ,ಆರಕ್ಷಕ ಇಲಾಖೆ, ಕುಡಿಯುವ ನೀರಿನ ಇಲಾಖೆ ಇನ್ನಿತರ ಇಲಾಖೆಗಳು, ಸಂಘ,ಸಂಸ್ಥೆಗಳು ಸಹಕಾರವನ್ನು ಶ್ರೀ ರಾಮಲಿಂಗ ದೇವರ ದೇವಸ್ಥಾನ ಸಮಿತಿಯವರಿಗೆ ನೀಡುತ್ತಿವೆ. ಶ್ರೀ ದೇವರ ಮಹಾರಥೋತ್ಸವಕ್ಕೆ ತಾಲೂಕಿನ ಪ್ರಮುಖ ಗಣ್ಯರು, ಅಧಿಕಾರಿ ವರ್ಗದವರು ಅಲ್ಲದೇ ತಾಲೂಕಿನಲ್ಲದೇ,ನೆರೆ ಜಿಲ್ಲೆಯ,ನೆರೆಯ ರಾಜ್ಯದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ. ಜಾತ್ರಾ ಮಹೋತ್ಸವದ ನಿಮಿತ್ತ ಪ್ರತಿನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮನರಂಜನೆಯ ಕಾರ್ಯಕ್ರಮಗಳು ನಡೆಯುತ್ತಿವೆ. ಒಟ್ಟಿನಲ್ಲಿ ಶ್ರೀ ರಾಮಲಿಂಗ ದೇವರ ಜಾತ್ರಾ ಮಹೋತ್ಸವದ ಸಂಭ್ರಮ ರಾಮನಗರದ ಪರಿಸರದಲ್ಲಿನ ಪ್ರತಿ ಮನ-ಮನೆಗಳಲ್ಲಿ ಕಾಣಬಹುದಾಗಿದೆ. (ವರದಿ=ಶ್ರೀ ಧವಳೋ ಗಣೇಶ ಸಾವರ್ಕರ್,ಗುಂದ,ಜೋಯಿಡಾ.)