ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ಪಟ್ಟಣದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕಾಳಮ್ಮ-ದುರ್ಗಮ್ಮ ಗ್ರಾಮ ದೇವಿಯರ ಜಾತ್ರಾ ಮಹೋತ್ಸವವು ಫೆಬ್ರುವರಿ 11ರ ಬುಧವಾರದಿಂದ ಆರಂಭಗೊಂಡು, ಫೆಬ್ರುವರಿ ಫೆಬ್ರುವರಿ 19 ಗುರುವಾರದಂದು ಅದ್ಧೂರಿಯಾಗಿ ಸಂಪನ್ನಗೊಂಡಿತು. ಗುರುವಾರ ಮಧ್ಯಾಹ್ನದ ಸಮಯದಲ್ಲಿ ಗ್ರಾಮದೇವಿಯರು ದೇವಿ ಮೈದಾನದ ಜಾತ್ರಾ ಮಂಟಪದ ಗದ್ದುಗೆಯಿಂದ ಇಳಿಯುವುದರೊಂದಿಗೆ ಮೆರವಣಿಗೆಯು ಆರಂಭಗೊಂಡಿತು.
ಇದಕ್ಕೂ ಪೂರ್ವದಲ್ಲಿ ಮಹಾಪೂಜೆ, ಮಂಗಳಾರತಿ,ಜಾತ್ರಾ ಮಂಟಪದಲ್ಲಿ ವಿವಿಧ ವಿಧಿವಿಧಾನಗಳು ನಡೆದವು. ಜಾತ್ರಾಮಂಟಪದ ಎದುರು ಮಾತಂಗಿ ಚಪ್ಪರಕ್ಕೆ ಬೆಂಕಿಹಾಕಿದ ನಂತರ ಪ್ರದಕ್ಷಿಣಾ ಪಥದಲ್ಲಿ ಸಾಗಿದ ಗ್ರಾಮದೇವಿಯರು ಅಲ್ಲಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಾಗಿಬಂದರು. ಭಕ್ತರ ಜಯಘೋಷದೊಂದಿಗೆ ನಡೆದ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಸ್ತೆಯ ಇಕ್ಕೆಲಗಳಲ್ಲಿನ ಕಟ್ಟಡಗಳಲ್ಲಿ ನಿಂತು ಸಾವಿರಾರು ಜನರು ಮೆರವಣಿಗೆಯನ್ನು ವೀಕ್ಷಿಸಿದರು. ಹುಬ್ಬಳ್ಳಿ ರಸ್ತೆ, ಬಸವೇಶ್ವರ ವೃತ್ತ, ಶಿರಸಿ ರಸ್ತೆ ಬಸ್ ನಿಲ್ದಾಣದ ಆವರಣದಲ್ಲಿ ಗ್ರಾಮದೇವಿಯರು ಪರಸ್ಪರ ಮುಖಾಮುಖಿಯಾದಾಗ ಭಕ್ತರ ಚಪ್ಪಾಳೆಯೊಂದಿಗೆ ಜಯಘೋಷ ಮೊಳಗಿತು.
ನಂತರ ಮುಂಡಗೋಡ ರಸ್ತೆಯ ಮೂಲಕ ಸೀಮಾ ಗಡಿಗೆ ತೆರಳಿದ ಗ್ರಾಮದೇವಿಯರು ಪಾದಗಟ್ಟಿ ಗದ್ದುಗೆಯಲ್ಲಿ ಆಸೀನರಾಗುವುದರೊಂದಿಗೆ ಮೆರವಣಿಗೆಯು ಸಂಜೆಯ ವೇಳೆ ಸಂಪನ್ನಗೊಂಡಿತು.ಮೆರವಣಿಗೆ ಸಾಗಿಬರುವ ಮಾರ್ಗಗಳನ್ನು ತಳಿರು ತೋರಣ,ರಂಗೋಲಿಗಳಿಂದ ಶೃಂಗರಿಸಲಾಗಿತ್ತು. ಮಾರ್ಚ್2ರಂದು ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಗ್ರಾಮದೇವಿಯರ ಪುನರ್ ಪ್ರತಿಷ್ಠಾನ ಕಾರ್ಯಕ್ರಮ ನಡೆಯಲಿದೆ.
