ಸುದ್ದಿ ಕನ್ನಡ ವಾರ್ತೆ
ಶಿರಸಿ:ಅಡಿಕೆಯನ್ನು Group-1 ಕ್ಯಾನ್ಸರ್ ಕಾರಕ ಪಟ್ಟಿಯಿಂದ ಮರುಪರಿಶೀಲನೆ ಮಾಡಲು WHO ಮತ್ತು IARCಗೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕೃತವಾಗಿ ಪತ್ರ ಬರೆದಿದ್ದಾರೆ. ಅಡಿಕೆ ಕ್ಯಾನ್ಸರ್ಕಾರಕವಲ್ಲ, ಹೀಗಾಗಿ ಅಡಿಕೆಯನ್ನು Group-1 ಕ್ಯಾನ್ಸರ್ ಕಾರಕ ಪಟ್ಟಿಯಲ್ಲಿ ಸೇರಿಸಿರುವ ನಿರ್ಧಾರವನ್ನು ಮರುಪರಿಶೀಲಿಸಲು ವಿಶ್ವ ಆರೋಗ್ಯ ಸಂಸ್ಥೆಗೆ (WHO) ಮತ್ತು International Agency for Research on Cancer (IARC) ಗೆ ಉತ್ತರ ಕನ್ನಡ ಲೋಕಸಭಾ ಸದಸ್ಯರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿಕೃತವಾಗಿ ಮನವಿ ಮಾಡಿದ್ದಾರೆ. WHO South-East Asia Regional Office ಗೆ ಬರೆದಿರುವ ಪತ್ರದಲ್ಲಿ, ಅಡಿಕೆಯನ್ನು Group-1 carcin gen ಪಟ್ಟಿಯಲ್ಲಿ ಸೇರಿಸಿರುವ ವರ್ಗೀಕರಣವನ್ನು ವೈಜ್ಞಾನಿಕ ಆಧಾರದ ಮೇಲೆ ಮರುಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಅಡಿಕೆ ಭಾರತ ಸೇರಿದಂತೆ ದಕ್ಷಿಣ ಮತ್ತು ದಕ್ಷಿಣ-ಪೂರ್ವ ಏಷ್ಯಾದ ದೇಶಗಳಲ್ಲಿ ವ್ಯಾಪಕವಾಗಿ ಬೆಳೆದಿದ್ದು, ಲಕ್ಷಾಂತರ ಸಣ್ಣ ಮತ್ತು ಅಂಚಿನ ರೈತರ ಜೀವನಾಧಾರವಾಗಿದೆ ಎಂದು ತಿಳಿಸಿದ್ದಾರೆ. ಅಡಿಕೆ ಗ್ರಾಮೀಣ ಆರ್ಥಿಕತೆ ಮತ್ತು ಸಾಮಾಜಿಕ-ಸಾಂಸ್ಕೃತಿಕ ಜೀವನದ ಪ್ರಮುಖ ಭಾಗವಾಗಿದ್ದು, ಕ್ಯಾನ್ಸರ್ ಕಾರಕ ವರ್ಗೀಕರಣವು ಸಾರ್ವಜನಿಕ ಆರೋಗ್ಯ, ಆರ್ಥಿಕತೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ
ಎಂದು ಉಲ್ಲೇಖಿಸಿದ್ದಾರೆ. ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳು ಮತ್ತು ಸಂಶೋಧನಾ ವರದಿಗಳು, ಅಡಿಕೆಯನ್ನು ಅದರ ನೈಸರ್ಗಿಕ ರೂಪದಲ್ಲಿ ಸೇವಿಸಿದಾಗ ಕ್ಯಾನ್ಸರ್ ಕಾರಕ ಎಂದು ಸ್ಪಷ್ಟವಾಗಿ ದೃಢಪಡಿಸಲು ಸಾಕಷ್ಟು ಸಾಕ್ಷ್ಯಗಳಿಲ್ಲ ಎಂದು ಸೂಚಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ. ಭಾರತ ಸರ್ಕಾರವು ICAR, ICMR ಸೇರಿದಂತೆ ಪ್ರಮುಖ ಸಂಶೋಧನಾ ಸಂಸ್ಥೆಗಳ ಮೂಲಕ ಅಡಿಕೆಯ ಸುರಕ್ಷತೆ ಕುರಿತು ಸಮಗ್ರ ಸಂಶೋಧನೆ ಪ್ರಾರಂಭಿಸಿದ್ದು, ಅಂತಿಮ ವೈಜ್ಞಾನಿಕ ಫಲಿತಾಂಶಗಳು ಲಭ್ಯವಾಗುವವರೆಗೆ ತೀರ್ಮಾನಾತ್ಮಕ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅಡಿಕೆಯ carcinogenic classification ಅನ್ನು ಮರುಪರಿಶೀಲಿಸಿ Group-2 ವಿಭಾಗಕ್ಕೆ ವರ್ಗೀಕರಿಸುವ ಸಾಧ್ಯತೆಯನ್ನು ಪರಿಗಣಿಸಬೇಕು ಎಂದು ಅವರು WHO ಮತ್ತು IARCಗೆ ಮನವಿ ಮಾಡಿದ್ದಾರೆ. ಜೊತೆಗೆ ಭಾರತ ಸೇರಿದಂತೆ ಅಡಿಕೆ ಉತ್ಪಾದಿಸುವ ದೇಶಗಳ ತಜ್ಞರನ್ನು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸೇರಿಸಿ ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
