ಸುದ್ದಿ ಕನ್ನಡ ವಾರ್ತೆ

ಶಿರಸಿ: ತಾಲೂಕಿನ ಹೆಗಡೆಕಟ್ಟಾದ ಯುವ ಪ್ರತಿಭೆ ಸುಮಂತ್ ಮಂಜುನಾಥ ನಾಯ್ಕ ಅವರು ಕಿರಿಯ ವಯಸ್ಸಿನಲ್ಲೇ ಅಪ್ರತಿಮ ಸಾಧನೆ ಮಾಡಿದ್ದಾರೆ. 2025ರ ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ರಾಜ್ಯಕ್ಕೆ 2ನೇ ರಾಂಕ್ ಪಡೆಯುವ ಮೂಲಕ ಸಿವಿಲ್‌ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಸುಮಂತ್ ಅವರು ಬೆಂಗಳೂರು ಲೋಕಾಯುಕ್ತದ ಸರ್ಕಾರಿ ಅಭಿಯೋಜಕರಾದ ಮಂಜುನಾಥ ನಾಯ್ಕ ಹಾಗೂ ವಕೀಲೆ ಸುಜಾತಾ ನಾಯ್ಕ ದಂಪತಿಯ ಪುತ್ರ. ಪೋಷಕರು ಮೂಲತಃ ಶಿರಸಿ ತಾಲೂಕಿನ ಹೆಗಡೆಕಟ್ಟಾ ನಿವಾಸಿಗಳಾಗಿದ್ದು, ಮಗನ ಈ ಸಾಧನೆಯಿಂದ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.

ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸೈ ಎನಿಸಿಕೊಂಡಿರುವ ಸುಮಂತ್, ಚೆಸ್ ಆಟದಲ್ಲಿ ರಾಜ್ಯ ಮಟ್ಟದ ಗಮನ ಸೆಳೆದ ಸಾಧಕರಾಗಿದ್ದಾರೆ. 25ರ ಹರೆಯದಲ್ಲೇ ನ್ಯಾಯಾಧೀಶರ ಪಟ್ಟ ಅಲಂಕರಿಸುವ ಮೂಲಕ ಅವರು ಜಿಲ್ಲೆಯ ಯುವಜನತೆಗೆ ಮಾದರಿಯಾಗಿದ್ದಾರೆ.