ಸುದ್ದಿ ಕನ್ನಡ ವಾರ್ತೆ
ಶಿರಸಿ: ವಿಶ್ವವಿಖ್ಯಾತ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಪೂರ್ವಸಿದ್ಧತೆಗಳು ಕಳೆಗಟ್ಟುತ್ತಿದ್ದು, ಮಂಗಳವಾರ ಜಾತ್ರಾ ರಥದ ನಿರ್ಮಾಣಕ್ಕೆ ಬಳಸುವ ಪವಿತ್ರ ಮರಗಳನ್ನು ಶ್ರದ್ದಾಭಕ್ತಿಯಿಂದ ನಗರಕ್ಕೆ ಬರಮಾಡಿಕೊಳ್ಳಲಾಯಿತು. ಇದರೊಂದಿಗೆ ಸಾಂಪ್ರದಾಯಿಕ ಜಾತ್ರಾ ವಿಧಿವಿಧಾನಗಳಿಗೆ ಚಾಲನೆ ದೊರೆತಂತಾಗಿದೆ.
ಜಾತ್ರೆಯ ಕೇಂದ್ರ ಆಕರ್ಷಣೆಯಾದ ಬೃಹತ್ ರಥದ ನಿರ್ಮಾಣಕ್ಕಾಗಿ ತಾಲೂಕಿನ ಬ್ಯಾಗದ್ದೆಯ ನಿವಾಸಿ ಅಶೋಕ ಶಿವು ನಾಯ್ಕ ಅವರು ಭಕ್ತಿಯಿಂದ ಸಮರ್ಪಿಸಿದ ತಾಳೆ ಮರದ ಬೃಹತ್ ತುಂಡುಗಳನ್ನು ಶುಭ ಮುಹೂರ್ತದಲ್ಲಿ ತರಲಾಯಿತು. ಹೂವುಗಳಿಂದ ಅಲಂಕೃತಗೊಂಡ ಎತ್ತಿನ ಗಾಡಿಗಳಲ್ಲಿ ಮಲೆನಾಡಿನ ವಾದ್ಯಮೇಳಗಳ ಮೆರವಣಿಗೆಯ ಮೂಲಕ ನಗರಕ್ಕೆ ತರಲಾಯಿತು.
ನಗರದ ಗಡಿಗೆ ಮರದ ತುಂಡುಗಳು ಪ್ರವೇಶಿಸುತ್ತಿದ್ದಂತೆ ಕೋಟಿಕೆರೆ ಬಳಿ ಭಕ್ತಾದಿಗಳು ಪೂಜೆ ಹಾಗೂ ಆರತಿ ನೆರವೇರಿಸಿದರು. ನಂತರ ದೇವಸ್ಥಾನದ ಮಹಾದ್ವಾರಕ್ಕೆ ಮರಗಳು ತಲುಪಿದಾಗ, ಆರ್ಚಕರು, ಬಾಬದಾರರು ಹಾಗೂ ಬಾಬದಾರ ಕುಟುಂಬದ ಮಹಿಳೆಯರು ಶಾಸ್ರೋಕ್ತವಾಗಿ ಪೂಜೆ ಸಲ್ಲಿಸಿ ಆರತಿ ಬೆಳಗಿದರು. ಕಳೆದ ಶುಕ್ರವಾರವಷ್ಟೇ ಬ್ಯಾಗದ್ದೆಯಲ್ಲಿ ಮರ ಕಡಿಯುವ ಪೂಜೆ ನೆರವೇರಿಸಲಾಗಿತ್ತು ಎಂಬುದು ಗಮನಾರ್ಹ. ಈ ಮಂಗಳಕರ ಸಂದರ್ಭದಲ್ಲಿ ಶ್ರೀ ಮಾರಿಕಾಂಬಾ ಧರ್ಮದರ್ಶಿ ಮಂಡಳದ ದೇವಸ್ಥಾನದ
ಪದಾಧಿಕಾರಿಗಳು, ಬಾಬದಾರ ಪ್ರಮುಖರಾದ ಜಗದೀಶ ಗೌಡ, ಪಾರುಪತ್ಯೆಗಾರರು ಇದ್ದರು. ಈ ವೇಳೆ ನೂರಾರು ಭಕ್ತಾದಿಗಳು ಸಾಕ್ಷಿಯಾದರು. ರಥದ ಮರಗಳು ಆಗಮಿಸಿರುವುದು ನಗರದಲ್ಲಿ ಜಾತ್ರೆಯ ಕಳೆಯನ್ನು ಇನ್ನಷ್ಟು ಹೆಚ್ಚಿಸಿದೆ.