ಸುದ್ದಿ ಕನ್ನಡ ವಾರ್ತೆ
ಕುಮಟಾ: ಪಟ್ಟಣದ ಬಸ್ತಿಪೇಟೆ ಬಳಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣ ದಾಖಲಾದ ಕೇವಲ 10 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯಡಗೊಪ್ಪ ನಿವಾಸಿ, ಹೋಟೆಲ್ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ @ ಬಸ್ಯಾ (20) ಬಂಧಿತ ಆರೋಪಿ.
ಫೆಬ್ರವರಿ 15ರ ರಾತ್ರಿ ಕುಮಟಾದ ಬಸ್ತಿಪೇಟೆ ಬಳಿಯ ಮನೆಯೊಂದರ ಕಿಟಕಿಯ ಚೀಲಕ ತೆಗೆದು ಒಳನುಗ್ಗಿದ್ದ ಕಳ್ಳ ಕಪಾಟಿನಲ್ಲಿದ್ದ ನಗದು ಹಣವನ್ನು ದೋಚಿದ್ದನು. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಹಾಗೂ ಭಟ್ಕಳ ಡಿವೈಎಸ್ಪಿ ಬಿ. ಗಿರೀಶ್ ಅವರ ಮಾರ್ಗದರ್ಶನದಲ್ಲಿ ಕುಮಟಾ ಸಿಪಿಐ ಯೋಗೇಶ ಕೆ.ಎಂ. ಹಾಗೂ ಪಿಎಸ್‌ಐ ಮಯೂರ ಪಟ್ಟಣಶೆಟ್ಟಿ ನೇತೃತ್ವದ ತಂಡ ಕಾರ್ಯಾಚರಣೆಗಿಳಿದಿತ್ತು. ತಾಂತ್ರಿಕ ಮಾಹಿತಿ ಹಾಗೂ ಖಚಿತ ಬಾತ್ಮಿಯ ಮೇರೆಗೆ ದಾಳಿ ನಡೆಸಿದ ತಂಡ, ಪ್ರಕರಣ ದಾಖಲಾದ ಹತ್ತೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದೆ.
ಬಂಧಿತನಿಂದ ಕಳ್ಳತನ ಮಾಡಿದ್ದ ಸಂಪೂರ್ಣ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಪಿಎಸ್‌ಐಗಳಾದ ರವಿ ಗುಡ್ಡಿ, ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿಗಳಾದ ದಯಾನಂದ ನಾಯ್ಕ, ಗಣೇಶ ನಾಯ್ಕ, ಕಿರಣ ನಾಯ್ಕ ಮತ್ತು ಪ್ರದೀಪ ನಾಯಕ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.
