ಸುದ್ಧಿಕನ್ನಡ ವಾರ್ತೆ
ಶಿರಸಿ:ಬೆಂಗಳೂರಿನಂತಹ ಮಹಾನಗರಗಳು ಸಂಚಾರ ದಟ್ಟಣೆ, ವಾಯಮಾಲಿನ್ಯದ ಕಾರಣಗಳಿಂದ ನರಕವಾಗುತ್ತಿವೆ. ಆ ನರಕದಿಂದ ಹೊರಬರಲು ಹಳ್ಳಿಗೆ ಬರಬೇಕು. ಹಳ್ಳಿಯ ವಾತಾವರಣದಲ್ಲೇ ನೆಮ್ಮದಿ ಇದೆ ಎಂದು ಪ್ರಸಿದ್ಧ ಚಲನಚಿತ್ರ ನಟ ಎಸ್.ದೊಡ್ಡಣ್ಣ ಅಭಿಪ್ರಾಯಪಟ್ಟರು.

ತಾಲೂಕಿನ ಬೆಟ್ಟಕೊಪ್ಪದ ನಮ್ಮನೆ ವೇದಿಕೆಯಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಆಯೋಜಿಸಿದ್ದ ವಿಶ್ವಶಾಂತಿ ಸರಣಿಯ 11ನೇ ಯಕ್ಷನೃತ್ಯ ರೂಪಕ ವಂದೇ ಗೋವಿಂದಮ್ ಲೋಕಾರ್ಪಣೆ, ನಮ್ಮನೆ ಪ್ರಶಸ್ತಿ, ಪುರಸ್ಕಾರ ಪ್ರದಾನ ಕಾರ್ಯಕ್ರಮ ಒಳಗೊಂಡ 14ನೇ ವರ್ಷದ ನಮ್ಮನೆ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನ ಮೂರೇ ಮೂರು ಸರ್ವಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು. ಮಾತನಾಡಿದಂತೆ ಬರೆಯುವ ಲಿಪಿಯುಳ್ಳ, ಬರೆದಿದ್ದನ್ನು ಯಥಾವತ್ತಾಗಿ ಮಾತನಾಡುವ ಶಕ್ತಿಯುಳ್ಳ, ಸಂಧಿ, ಸಮಾಸ, ವ್ಯಾಕರಣ, ಅಲ್ಪಪ್ರಾಣ, ಮಹಾಪ್ರಾಣ ಇರುವ ಶ್ರೀಮಂತ ಭಾಷೆ ಅದುವೇ ಕನ್ನಡ. ಹೀಗಿರುವಾಗ ಇಂಗ್ಲಿಷ ಹಾವಳಿಯಲ್ಲಿ ನಮ್ಮ ಮಾತಿನಲ್ಲಿ ಕನ್ನಡ ಶಬ್ದಗಳನ್ನು ಹುಡುಕಾಡುವ ಸಂದರ್ಭ ಬರಬಾರದು. ಶುದ್ಧ ಪರಿಸರ ಹೊಂದಿರುವ ಹಳ್ಳಿಗಳು, ಇಲ್ಲಿ ನಡೆಯುವ ಸಾಂಸ್ಕøತಿಕ ಹಬ್ಬಗಳು ಸ್ವರ್ಗಕ್ಕೆ ಸಮಾನವಾದ ವಾತಾವರಣ ಸೃಷ್ಟಿಸುತ್ತವೆ ಎಂದು ಪ್ರಸಿದ್ಧ ಚಲನಚಿತ್ರ ನಟ ಎಸ್.ದೊಡ್ಡಣ್ಣ ಬಣ್ಣಿಸಿದರು.

 

ಪ್ರಸಿದ್ಧ ರಂಗಭೂಮಿ ಕಲಾವಿದೆ, ಗಾಯಕಿ ಬಿ.ಜಯಶ್ರೀ ಮಾತನಾಡಿ, ಹಳ್ಳಿಗರಿಗೆ ಟಿವಿನೇ ಬೇಕು ಅಂತಿಲ್ಲ. ಇಂತಹ ಸಂಸ್ಕೃತಿಯುಕ್ತ ಕಾರ್ಯಕ್ರಮ ಸಂಘಟಿಸಿದರೆ ಮನಃಸ್ಪೂರ್ತಿಯಾಗಿ ಪಾಲ್ಗೊಳ್ಳುತ್ತಾರೆ. ಇದಕ್ಕೆ ಬೆಟ್ಟಕೊಪ್ಪದಲ್ಲಿ ಆಯೋಜಿಸಿರುವ ನಮ್ಮನೆ ಹಬ್ಬವೇ ಉದಾಹರಣೆ. ಹಳ್ಳಿಗರನ್ನೆಲ್ಲ ಒಂದೆಡೆ ಸೇರುವಂತಹ ಇಂಥ ನಮ್ಮನೆ ಹಬ್ಬವನ್ನು ನಮ್ಮೂರಿನಲ್ಲೂ ಮಾಡಬೇಕು ಅನಿಸಿದೆ ಎಂದರು.

ತುಳಸಿ ಹೆಗಡೆ ಪ್ರದರ್ಶಿಸಿದ ಯಕ್ಷನೃತ್ಯ ರೂಪಕದಲ್ಲಿ ಮದ್ದಲೆ, ಚಂಡೆ, ಹಾಡುಗಾರಿಕೆ ಜತೆಯಲ್ಲಿ ಅದಕ್ಕಿಂತ ಹೆಚ್ಚಾಗಿ ಸೊಗಸಾದ ಅಭಿನಯ, ಹೆಜ್ಜೆ ಮನಸ್ಸನ್ನು ಹಿಡಿದುಕೊಂಡಿತು ಎಂದು ಶ್ಲಾಘಿಸಿದರು.