ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯಲ್ಲಿ ಅಡಿಕೆಯು ಪ್ರಮುಖ ಬೆಳೆಯಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಕೊಯ್ಲು ಮತ್ತು ಸುಲಿದು ಒಣಗಿಸುವ ಕೆಲಸಕ್ಕೆ ಕಾರ್ಮಿಕರ ಕೊರತೆ ಉಂಟಾಗಿದೆ. ಆದರೆ ಇದೀಗ ಈ ಎಲ್ಲ ಸಮಸ್ಯೆಗಳಿಗೆ ಕೊಂಚ ಪರಿಹಾರ ಎಂಬಂತೆ ಅಡಿಕೆ ಬೆಳೆಗಾರು ಹಸಿ ಅಡಿಕೆ ಟೆಂಡರ್ ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಶೇ 30 ರಷ್ಟು ಜನರು ಹಸಿ ಅಡಿಕೆ ಟೆಂಡರ್ ಮೂಲಕವೇ ತಮ್ಮ ಬೆಳೆಯನ್ನು ಮಾರಾಟ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚುತ್ತಲೇ ಇದ್ದು ಹಸಿ ಅಡಿಕೆ ಟೆಂಡರ್ ಗೆ ಹೆಚ್ಚಿನ ಬೆಳೆಗಾರರು ಆಸಕ್ತಿ ತೋರುತ್ತಿರುವುದು ಕಂಡುಬರುತ್ತಿದೆ.
ಕಳೆದ ಸುಮಾರು 5 ವರ್ಷಗಳಿಂದ ಹಸಿ ಅಡಿಕೆ ಟೆಂಡರ್ ಪದ್ಧತಿ ಆರಂಭಗೊಂಡಿದೆ. ಶಿರಸಿ ,ಸಿದ್ಧಾಪುರ,ಯಲ್ಲಾಪುರ ಮಾರುಕಟ್ಟೆಯಲ್ಲಿ ಪ್ರಸಕ್ತ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಹಸಿ ಅಡಿಕೆ ಟೆಂಟರ್ ನಡೆಯುತ್ತಿದೆ. ಕಳೆದ ವರ್ಷದ ಹಸಿ ಅಡಿಕೆ ಸರಾಸರಿ ಟೆಂಡರ್ ಗೆ ಹೋಲಿಸಿದರೆ ಪ್ರಸಕ್ತ ವರ್ಷ ಸುಮಾರು 2500 ರಷ್ಟು ಅಧಿಕ ಬೆಲೆ ಲಭಿಸುತ್ತಿದೆ.
ಅಡಿಕೆ ಬೆಳೆಗಾರರ ಸಮಸ್ಯೆ ಒಂದಲ್ಲ ಎರಡಲ್ಲ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಳೆಗೆ ರೋಗಬಾಧೆ ಹೆಚ್ಚಾಗಿದೆ. ಎಲೆಚುಕ್ಕಿ ರೋಗ,ಹಳದಿ ರೋಗ, ಕೊಳೆ ರೋಗದ ಹೆಚ್ಚಳದಿಂದಾಗಿ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಈ ಎಲ್ಲ ರೋಗಗಳ ನಂತರ ಉಳಿದ ಅಡಿಕೆ ಯೊಯ್ಯಲು ಮತ್ತು ಸುಲಿದು ಒಣಗಿಸಲು ಕಾರ್ಮಿಕರ ಕೊರತೆಯಿದೆ. ಈ ಎಲ್ಲ ಕಾರಣಗಳಿಂದ ಅಡಿಕೆ ಬೆಳೆಗಾರರು ಹಸಿ ಅಡಿಕೆ ಟೆಂಡರ್ ನತ್ತ ಮುಖ ಮಾಡಿದ್ದಾರೆ.
