ಸುದ್ದಿ ಕನ್ನಡ ವಾರ್ತೆ
. ಹೊನ್ನಾವರ:ಬುಲೆರೋ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಸಾಲ್ಕೋಡ್ ಜನತಾ ಕಾಲೋನಿ ರಸ್ತೆಯಲ್ಲಿ ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಬರುತ್ತಿದ್ದ ಬೊಲೆರೋ ವಾಹನವು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಲೈನ್ ತುಂಡಾಗಿ ವಾಹನದ ಮೇಲೆ ವಿದ್ಯುತ್ ಕಿಡಿ ಬಿದ್ದ ಪರಿಣಾಮ ಕ್ಷಣಾರ್ಧದಲ್ಲೇ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಒಣಹುಲ್ಲು ತುಂಬಿದ್ದ ಕಾರಣ ಬೆಂಕಿ ವೇಗವಾಗಿ ವ್ಯಾಪಿಸಿ ಬುಲೆರೋ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಘಟನೆ ವೇಳೆ ಚಾಲಕ ಹಾಗೂ ವಾಹನದಲ್ಲಿದ್ದ ಮತ್ತೊಬ್ಬ ವ್ಯಕ್ತಿ ತಕ್ಷಣ ವಾಹನದಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಅಗ್ನಿಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಪಕ್ಕದ ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಬೆಂಕಿ ಅನಾಹುತ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
