ಸುದ್ದಿ ಕನ್ನಡ ವಾರ್ತೆ
ಮುಂಡಗೋಡ:ತಾಲೂಕಿನ ನಿವೃತ್ತ ಶಿಕ್ಷಕರೊರ್ವರಿಗೆ ಮುಂಬೈನಲ್ಲಿ ಸಿಕ್ಕಿಬಿದ್ದ ಉಗ್ರನ ಬಳಿ ನಿಮ್ಮ ಎಟಿಎಂ ಕಾರ್ಡ್ ಪತ್ತೆಯಾಗಿದೆ. ನಿಮ್ಮನ್ನು ಈಗಲೇ ಅರೆಸ್ಟ್ ಮಾಡುತ್ತೇವೆ ನಕಲಿ ಪೊಲೀಸ್ ವೇಷಧಾರಿಗಳು ನೀಡಿದ ಬೆದರಿಕೆಗೆ ಹೆದರಿದ ಮುಂಡಗೋಡಿನ ನಿವೃತ್ತ ಶಿಕ್ಷಕರೊಬ್ಬರು ಬರೋಬ್ಬರಿ 1.61 ಕೋಟಿ ರೂಪಾಯಿ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ.

ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ವಾಸವಾಗಿರುವ 72 ವರ್ಷದ ನಿವೃತ್ತ ಶಿಕ್ಷಕ ಪಲ್ದೆನ್ ಚೋದಕ್ ಅವರೇ ವಂಚನೆಗೊಳಗಾದವರು ಕಳೆದ ನವೆಂಬರ್ 29 ರಂದು
ಇವರಿಗೆ ವಾಟ್ಸಾಪ್ ಮೂಲಕ ವೀಡಿಯೋ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ, ತಾನು ಮಹಾರಾಷ್ಟ್ರದ ಕೊಲಬಾ ಪೊಲೀಸ್ ಠಾಣೆಯ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದ. ವೀಡಿಯೋ ಕರೆಯಲ್ಲಿ ಪೊಲೀಸ್ ಸಮವಸ್ತ್ರ ನಂಬಿಕೆ ಹುಟ್ಟಿಸಿದ್ದ ಆತ, ‘ನಾವು ಅಬ್ದುಲ್ ಸಲಾಂ ಎಂಬ ಉಗ್ರಗಾಮಿಯನ್ನು ಬಂಧಿಸಿದ್ದೇವೆ.

ಆತನ ಬಳಿ 242 ಎಟಿಎಂ ಕಾರ್ಡ್‌ಗಳು ಸಿಕ್ಕಿದ್ದು, ಅದರಲ್ಲಿ ನಿಮ್ಮ ಕೆನರಾ ಬ್ಯಾಂಕ್ ಎಟಿಎಂ ಕಾರ್ಡ್ ಕೂಡ ಇದೆ. ಇದರ ಮೂಲಕ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು
ಬೆದರಿಸಿದ್ದ.
ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಶಿಕ್ಷಕ ಎಷ್ಟೇ ಗೋಗರೆದರೂ ಕೇಳದ ವಂಚಕರು ನಿಮ್ಮ ಖಾತೆಯಲ್ಲಿರುವ ಹಣವನ್ನೆಲ್ಲ ಪರಿಶೀಲನೆಗಾಗಿ ಕೂಡಲೇ ನ್ಯಾಶನಲ್ ಫಂಡ್ ಗೆ ವರ್ಗಾಯಿಸಬೇಕು.
ನೀವು ತಪ್ಪು ಮಾಡಿಲ್ಲ ಎಂದಾದಲ್ಲಿ ಪರಿಶೀಲನೆ ನಂತರ ಹಣ ವಾಪಸ್ ನೀಡುತ್ತೇವೆ ಎಂದು ನಂಬಿಸಿದ್ದಾರೆ. ಅಲ್ಲದೇ, ಯಾವುದೇ ಕಾರಣಕ್ಕೂ ಫೋನ್ ಕಟ್ ಮಾಡುವ ಹಾಗಿಲ್ಲ. ಪ್ರತಿ 2 ಗಂಟೆಗೊಮ್ಮೆ ಮೆಸೇಜ್ ಮಾಡುತ್ತಿರಬೇಕು ಮತ್ತು ಈ ವಿಷಯವನ್ನು ಯಾರಿಗೂ
ಹೇಳಬಾರದು ಗೃಹಬಂಧನದಲ್ಲಿ ಎಂದು ಇರಿಸುವಂತೆ ಮಾನಸಿಕವಾಗಿ ಒತ್ತಡ ಹೇರಿದ್ದಾರೆ. ಇದರಿಂದ ತೀವ್ರ ಆತಂಕಕ್ಕೊಳಗಾದ ಪಲ್ದೆನ್ ಚೋದಕ್, ತಮ್ಮಲ್ಲಿದ್ದ ಫಿಕ್ಸ್ ಡೆಪಾಸಿಟ್ ಮುರಿದು ಹಾಗೂ ಸ್ನೇಹಿತರಿಂದ ಸಾಲ ಪಡೆದು ಹಂತ ಹಂತವಾಗಿ 1,61,00,047 ರೂ ಒಟ್ಟು ಹಣವನ್ನು ವಂಚಕರು ಸೂಚಿಸಿದ ಖಾತೆಗಳಿಗೆ ವರ್ಗಾಯಿಸಿದ್ದಾರೆ.

ಹಣ ಕಳೆದುಕೊಂಡ ನಂತರವಷ್ಟೇ ತಮಗೆ ಮೋಸವಾಗಿರುವುದು ಅರಿವಿಗೆ ಬಂದಿದೆ. ಕೂಡಲೇ ತನ್ನ ಸ್ನೇಹಿತನ ಸಲಹೆಯಂತೆ ಅವರು ಕಾರವಾರದ ಸೈಬರ್ ಕೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.