ಸುದ್ಧಿಕನ್ನಡ ವಾರ್ತೆ
ಜೊಯಿಡಾ: ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದರೆ ಎಂತಯ್ಯಾ…? ಎನ್ನುವ ದಾಸರ ವಾಣಿಯಂತೆ ದಾಂಡೇಲಿ ಕೆಟಿಆರ್ ಪ್ರದೇಶದ ಜನರು ತಲತಲಾಂತರದಿಂದಲೂ ಅರಣ್ಯವಾಸಿಗರಾಗಿಯೇ ಬದುಕು ಸಾಗಿಸಿದವರು. ಸ್ವಾತಂತ್ರ್ಯಾ ಪೂರ್ವದಿಂದಲೂ ಅರಣ್ಯ ಹಕ್ಕಿನಿಂದ ವಂಚಿತರಶಾದ ನಾವುಗಳು ನ್ಯಾಶನಲ್ ಪಾರ್ಕುಗಳ ಕಾನೂನಿಂದ ಇನ್ನಷ್ಟು ಅನ್ಯಾಯಕ್ಕೆ ಗುರಿಯಾದೆವು.

ಮಾನವ ಮತ್ತು ಪ್ರಾಣಿಗಳ ಸಂಘರ್ಷ ಕಡಿಮೆ ಮಾಡುವಲ್ಲಿ ನಾವುಗಳು ಎಷ್ಟೇ ಸಹಕರಿಸಿದರೂ ಅಧಿಕಾರಿಗಳಿಗೆ ಸರ್ಕಾರಕ್ಕೆ ನಾವು ಅಪರಾಧಿಗಳಂತೆ ಕಾಣುತ್ತಿದ್ದೇವೆ. ಹಳ್ಳಿಗಳಲ್ಲಿ ಸರ್ವಋತು ಸಂಪರ್ಕ ರಸ್ತೆಯು ಇಲ್ಲದ ಕಾರಣವಾದ ಪ್ರದೇಶಗಳಲ್ಲಿ ಹಗಲಿರುಳೂ ನಡೆದಾಡುವ ರಸ್ತೆಗಳಲ್ಲಿ ಐದರಿಂದ ಹತ್ತು ಕಿಲೋಮೀಟರ್ ನಡೆದುಕೊಂಡು ಹೋಗುವಾಗ ಕಾಡುಪ್ರಾಣಿಗಳಾದ ಚಿರತೆ,ಕಾಡುಕೋಣ, ಕರಡಿ, ಕಾಡುಹಂದಿ, ಹುಲಿ, ಹಾವು,ಚೇಳು, ಕಾಡಾನೆಗಳ ಧಾಳಿಯಿಂದ ತಪ್ಪಿಸಿಕೊಳ್ಳಲು ಅಸಾಧ್ಯವಾಗಿದೆ.

ಎಲ್ಲ ಹಳ್ಳಿಗಳಲ್ಲಿ ಕಂದಾಯ ಭೂಮಿಯನ್ನು ಕಠಿಣ ಕಾನೂನಿನಿಂದ ಹೊರತುಪಡಿಸಲಾಗಿದೆ ನಿಜ. ಆದರೆ ಪ್ರಾಣಿಗಳಿಗೆ ನಮ್ಮ ನಮ್ಮ ಸರ್ವೆಗಡಿ ಕಲ್ಲಿನ ಅರಿವಿರುವುದೇ..? ಎಂದು ಹಿರೇಗಾಳಿ ಸುಬ್ರಾಯ ಭಾಗ್ವತ್ ರವರ ಮಾತು ನೆನಪಿಗೆ ಬರುತ್ತದೆ. ಸದ್ಯದಲ್ಲಿ ಬಾಳೆಕಾಯಿಗೆ ಮಂಗ-ನವಿಲು, ತೆಂಗು ಅಡಿಕೆ ಸಸಿಗಳಿಗೆ ಹಂದಿ- ಮುಳ್ಳಂದಿ , ಜೇನು ಹಲವು ಹಣ್ಣುಗಳಿಗೆ ಕರಡಿ, ಬಾಳೆಗಿಡಕ್ಕೆ ಆನೆ,ಕಬ್ಬೆಕ್ಕು ಕಾಡುಹಂದಿ, ಜಿಂಕೆ ,ಮಂಗ, ಅಡಿಕೆ ಹಣ್ಣಾದಾಗ ಹಕ್ಕಿ ಮಂಗಗಳು, ಗದ್ದೆಗೆ ಹಂದಿ,ಕಾಡುಕೋಣ,ಆನೆ ಗಿಳಿಹಕ್ಕಿ, ಕೆಂಪುಮಂಗ, ಕಡವೆ, ಇನ್ನತರೆ ತರಕಾರಿ ಗಿಡ ಬಳ್ಳಿ ಹೂವುಗಳಿಗೆ ಅನೇಕ ಹಕ್ಕಿ ಪಕ್ಷಿ ಪ್ರಾಣಿಗಳೇ ಮುಂತಾದವು ಬಂದು ಕಾಟಕೊಡುವಾಗ ಮನುಷ್ಯರ ಪರಿವೆಯೇ ಇಲ್ಲದ ಮೂಕ ಪ್ರಾಣಿಗಳ ಧಾಳಿಯಿಂದ ಮನುಷ್ಯ ಜರ್ಜರಿತನಾಗಿ ಹೋಗುವಾಗ ಈ ಸಂಬಂಧದ ಅಧಿಕಾರಿಗಳು ಕಾಡು ಜನರನ್ನು ವೈರಿಗಳಂತೆ ನೋಡಿಕೊಳ್ಳುವುದು ಸರಿಯಾದ ಕ್ರಮವಲ್ಲ.

ನ್ಯಾಶನಲ್ ಪಾರ್ಕನಂತಹ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಕೊಳ್ಳುವಾಗ ಇಲ್ಲಿಯ ಜನರ ಪರಿಸ್ಥಿತಿ ಹೀಗೆಯೇ ಆಗುತ್ತದೆ ಅಂತ ಗೊತ್ತಿದ್ದೂ ನಾವುಗಳು ನಿರಾಶ್ರಿತರಂತೆ ಪರಿಗಣಿಸಲು ಒಪ್ಪುತ್ತಿಲ್ಲ. ಮೂಲಭೂತ ಸೌಕರ್ಯ ಒದಗಿಸಲು ಮುಂದಾಗದೆಯೇ ಕಾನೂನಿನ ಕಠಿಣ ನಿಯಮವನ್ನೇ ಹೇರುವುದು ಸಮಂಜಸವಲ್ಲ. ಪರಿಹಾರ ಪುನರ್ವಸತಿಯನ್ನು 2013 ಮಾರ್ಗಸೂಚಿ ಅಂದರೆ ಈಗಿನ ಮಾರುಕಟ್ಟೆ ದರದ 4 ಪಟ್ಟು ಹಣ ಕೊಡಲು ಒಪ್ಪದೇ ಇರುವುದು ಬಡ ರೈತರಿಗೆ ಬರೆ ಎಳೆದಂತೆ.

ಜಗತ್ತಿಗೇ ಉಸಿರುಕೊಟ್ಟು ತಾನೂ ತನ್ನವರನ್ನು ಸಂಕಷ್ಟಕ್ಕೆ ದೂಡಿದ ಪಶ್ಚಾತ್ತಾಪ ಹಿರಿಯರ ಆತ್ಮಕ್ಕೆ ಆನ್ನಿಸಿದರೆ ತಪ್ಪಿಲ್ಲ. ಸರ್ಕಾರಗಳು ಜನರ ಸಂಕಷ್ಟಕ್ಕೆ ಬೀಳದೆಯೇ ನಡು ನೀರಿನಲ್ಲಿ ಕೈಬಿಟ್ಟರೆ ಪರಿಸ್ಥಿತಿ ಏನಾಗುತ್ತದೆ…? ಕಾನೂನಿನ ಪ್ರಕಾರವೇ ನಮಗೆ ನ್ಯಾಯ ಸಿಗಬೇಕಾಗಿದ್ದ 2006 ರ ಅರಣ್ಯ ಹಕ್ಕುಗಳು ಸಿಗದೇ ಹೋಗಲು ಪ್ರಾರಂಭಿಸಿದಂತೆ ಭಾಸವಾಗುತ್ತದೆ. ಕಾನೂನು ಮುಂದಿಟ್ಟು ಅಧಿಕಾರಿಗಳನ್ನು ಛೂ ಬಿಟ್ಟು ಅತ್ತ ಧರಿ ಇತ್ತ ಹುಲಿ ಎನ್ನುವ ಹಾಗೆ ಅಧಿಕಾರಿಗಳ ಮತ್ತು ಜನರ ಪರಿಸ್ಥಿತಿ. ಇದನ್ನು ಮನಗಂಡು ಸರ್ಕಾರ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ.

ಮೂಲಭೂತ ಸೌಕರ್ಯಕ್ಕೆ 2006 ಮತ್ತು 2008 ರ ಕಾನೂನು 3/2 ರ ಬಳಕೆ ಮತ್ತು ಪರಿಹಾರ ಪುನರ್ವಸತಿ ಗಳಿಗೆ 2013 ರ ಕಾನೂನಿನಂತೆ 4 ಪಟ್ಟು ಮತ್ತು ಬೆಳೆಹಾನಿಗೆ ಇನ್ನಷ್ಟು ಬೆಲೆ ಹೆಚ್ಚಿಸುವುದು. ಸದ್ಯಕ್ಕೆ 2023 ರ ಮಾನದಂಡ ಬೇಡ 2026 ರ ಮಾನದಂಡ ಇರಲಿ. ಜಗತ್ತಿಗೇ ಉಸಿರು ಕೊಡುತ್ತಿರುವವರ ಪ್ರಾಮಾಣಿಕ ಬೇಡಿಕೆ ತೆಗೆದುಕೊಂಡರೆ ಎಲ್ಲರಿಗೂ ಒಳಿತು. ನಿರಾಶಾದಾಯಕ ಭಾವನೆಯಿಂದ ಜೈ ಹಿಂದ್ ಜೈ ಕರ್ನಾಟಕ…..!

ಗೋಪಾಲ ಭಟ್ ಶಿವಪುರ
(ಉಪಾಧ್ಯಕ್ಷರು ಉ.ಕ ಜಿಲ್ಲಾ ಭಾರತೀಯ ಕಿಸಾನ ಸಂಘ).