ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಲವಳ್ಳಿಯ ಡಾ. ನಾರಾಯಣ ಹುಳಸೆ ರವರು ಕೀಲು ಜೋಡಣೆಯಲ್ಲಿ ಪರಿಣಿತಿ ಪಡೆದು ಬೆಂಗಳೂರಿನಲ್ಲಿಯೇ 10,000 ಕ್ಕೂ ಹೆಚ್ಚು ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ. ವಿಶೇಷವಾಗಿ ಇವರು ಮಂಡಿಚಿಪ್ಪು ಅಳವಡಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ. ಬೆಂಗಳೂರಿನಲ್ಲಿ ರೋಬೋಟಿಕ್ ತಂತ್ರಜ್ಞಾನ ಬಳಸಿ ಯಶಸ್ವೀ ಶಸ್ತ್ರಚಿಕಿತ್ಸೆ ನಡೆಸಿದ ಮೊದಲ ವೈದ್ಯ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.


ಡಾ. ನಾರಾಯಣ ಹುಳಸೆ ರವರು ಬೆಂಗಳೂರು ಹಾಗೂ ಮದ್ರಾಸಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಪೂರ್ಣಗೊಳಿಸಿ ಉನ್ನತ ವಿದ್ಯಾಭ್ಯಾಸವನ್ನು ಇಂಗ್ಲೆಂಡ್ ಮತ್ತು ಕೆನಡಾದಲ್ಲಿ ಪಡೆದುಕೊಂಡಿದ್ದಾರೆ. ಹತ್ತು ವರ್ಷ ವಿದೇಶದಲ್ಲಿದ್ದು ಕಳೆದ ಸುಮಾರು ಹದಿನೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ರೋಬೋಟಿಕ್ ಮೂಲಕ ಕೀಲು ಜೋಡಿಸಿದ ಮೊದಲ ವೈದ್ಯ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ರೋಬೋಟಿಕ್ ತಂತ್ರಜ್ಞಾನ ಬಳಸಿ 2000 ಕ್ಕೂ ಹೆಚ್ಚು ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿರುವ ಕೀರ್ತಿ ಇವರದ್ದು.

ಡಾ.ನಾರಾಯಣ ಹುಳಸೆ ರವರು ತಮ್ಮ ಇಡೀ ಜೀವನವನ್ನೇ ವೈದ್ಯ ಲೋಕಕ್ಕೆ ಮುಡಿಪಾಗಿಟ್ಟಿದ್ದಾರೆ. ಇವರು ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಯ ಮೂಳೆ ಮತ್ತು ಕೀಲು ವಿಭಾಗದ ಪ್ರಧಾನ ನಿರ್ದೇಶಕರಾಗಿದ್ದಾರೆ. ಇವರು ಬರೆದಿರುವ ಜೊಯಿಂಟ್ ರಿಪ್ಲೆಸ್ಮೆಂಟ್ ಎಂಬ ಪುಸ್ತಕದಲ್ಲಿ ರೋಗಿಗಳ ಹಲವು ಪ್ರಶ್ನೆಗಳಿಗೆ ಇವರು ಉತ್ತರಿಸಿದ್ದಾರೆ, ಅಗತ್ಯ ಮಾಹಿತಿ ನೀಡಿದ್ದಾರೆ.

ಡಾ.ನಾರಾಯಣ ಹುಳಸೆ ರವರು ಮೂಲತಃ ಕೃಷಿ ಕುಟುಂಬದಿಂದ ಬಂದವರು. ಇವರಿಗೆ ಕೃಷಿ ಕೂಡ ಅಷ್ಟೇ ಪ್ರೀತಿ. ಯಲ್ಲಾಪುರ ಮಲವಳ್ಳಿಯಲ್ಲಿರುವ ಇವರ ಮನೆಗೆ ಬಂದಾಗ ಮೊದಲು ತೋಟ ಸುತ್ತಾಡಿ ಬರುವ ಇವರಿಗೆ ಹಸಿರು ಎಂದರೆ ಅಷ್ಟೇ ಪ್ರೀತಿ. ಊರಿಗೆ ಇವರು ಬರುತ್ತಾರೆ ಎಂಬ ಸುದ್ಧಿ ಸಿಕ್ಕರೆ ಹಲವು ರೋಗಿಗಳು ಇವರ ಭೇಟಿಗಾಗಿ ಕಾಯುತ್ತಿರುತ್ತಾರೆ. ಊರಿಗೆ ಬಂದಾಗಲೂ ಕೂಡ ಯಾರಾದರೂ ಇವರನ್ನು ಆರೋಗ್ಯ ಸಮಸ್ಯೆಯ ಬಗ್ಗೆ ಕೇಳಲು ಬಂದರೆ ಇವರು ರೋಗಿಗಳಿಗೆ ಯಾವುದೇ ಬೇಸರವಿಲ್ಲದೆಯೇ ಪ್ರೀತಿಯಿಂದ ಒಂದು ರೂಪಾಯನ್ನೂ ಪಡೆಯದೆಯೇ ವೈದ್ಯಕೀಯ ಸಲಹೆ ಸೂಚನೆ ನೀಡುತ್ತಾರೆ.

ತಮ್ಮ ಆಸ್ಪತ್ರೆಗೆ ಬಂದ ರೋಗಿಗಳನ್ನು ಕೂಡ ಮಕ್ಕಳಂತೆಯೇ ಕಂಡು ಪ್ರೀತಿಯಿಂದ ಮಾತನಾಡಿಸುವ ಇವರು ತಮ್ಮ ಮೃದು ವರ್ತನೆಯಿಂದಲೇ ರೋಗಿಗಳನ್ನು ಕಾಣುವುದು ವಿಶೇಷ. ವಿದೇಶದಲ್ಲಿ ಓದಿ ಅಲ್ಲಿಯೇ ಸರ್ವಿಸ್ ಆಗಿದ್ದರೂ ಕೂಡ ತಮ್ಮ ಈ ಅಮೂಲ್ಯ ವೈದ್ಯಕೀಯ ಸೇವೆಯನ್ನು ಕರ್ನಾಟಕದಲ್ಲಿಯೇ ಮಾಡುತ್ತಿರುವುದು ಕೂಡ ಹೆಮ್ಮೆ ಪಡುವಂತದ್ದು. ಇವರ ಸಾಧನೆಗೆ ಹತ್ತು ಹಲವು ಪ್ರಶಸ್ತಿಗಳು ಕೂಡ ಇವರಿಗೆ ಲಭಿಸಿದೆ. ಇದಕ್ಕೆ ಸುದ್ಧಿಕನ್ನಡ ವಾಹಿನಿ ಅಭಿನಂದನೆ ಸಲ್ಲಿಸುತ್ತದೆ.