ಸುದ್ದಿ ಕನ್ನಡ ವಾರ್ತೆ

(Goa )ಕಾಣಕೋಣ:ರಾಷ್ಟ್ರೀಯ ಹೆದ್ದಾರಿ ಮಾಷೆಂ ಹತ್ತಿರ ಕಾರವಾರ ಕ್ರಿಮ್ಸ್ ಮೇಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಬೈಕ್ ನಲ್ಲಿ ಮಂಗಳವಾರ ರಾತ್ರಿಯ ವೇಳೆ ಹೋಗುತ್ತಿದ್ದಾಗ ಎಮ್ಮೆ ಅಡ್ಡ ಬಂದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ,ಇನ್ನೋರ್ವ ವೈದ್ಯಕೀಯ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾನೆ.

ಸಾವನ್ನಪ್ಪಿದ ಸವಾರ ಕಾರವಾರ ಕ್ರಿಮ್ಸ್ ಮೇಡಿಕಲ್ ಕಾಲೇಜಿನ ವಿದ್ಯಾರ್ಥಿ ಆದರ್ಶ ಪೂಜಾರಿಯಾಗಿದ್ದು,ಇನ್ನೋರ್ವ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ರೌನಕ್ ಚಾವ್ಲಾ ಎಂದು ಗುರುತಿಸಲಾಗಿದ್ದು,ಇಬ್ಬರು ಎಂಬಿಬಿಎಸ್ ಕೋರ್ಸ್ ನ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಮಂಗಳವಾರ ರಾತ್ರಿಯ ವೇಳೆ ಕಾಣಕೋಣದಲ್ಲಿ ಊಟಕ್ಕೆ ಇಬ್ಬರೂ ಹೋಗಿ ವಾಪಸ್ ರಾಯಲ್ ಎನಫೀಲ್ಡ್ ಬೈಕಿನಲ್ಲಿ ಕಾರವಾರಕ್ಕೆ ಬರುತ್ತಿದ್ದ ಸಮಯದಲ್ಲಿ ಮಾಷೆಂ ಹತ್ತಿರದ ಹೆದ್ದಾರಿ ರಸ್ತೆಯ ಮೇಲೆ ಎಮ್ಮೆಯೊಂದು ಅಡ್ಡ ಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಗಂಭೀರ ಸ್ವರೂಪದ ಗಾಯಗೊಂಡಿದ್ದರು.

ಸ್ಥಳೀಯರ ಸಹಕಾರದಿಂದ ತಕ್ಷಣ ಅವರನ್ನು ಕಾಣಕೋಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು,ಆದರೆ ಗಂಭೀರ ಸ್ವರೂಪದ ಗಾಯಗೊಂಡ ಬೈಕ್ ಸವಾರ ಆದರ್ಶ ಪೂಜಾರಿ ಸಾವನ್ನಪ್ಪಿದ ಮಾಹಿತಿ ನೀಡಿದರು.ಗಾಯಗೊಂಡ ಇನ್ನೋರ್ವ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ರೌನಕ್ ಚಾವ್ಲಾರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಸಾವನ್ನಪ್ಪಿದ ವಿದ್ಯಾರ್ಥಿಯ ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ಅವರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.ಬೆಳಗಾವಿಯ ಗೋಕಾಕ ಮೂಲದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ಅಪಘಾತ ಸಂಭವಿಸಿದ ಸ್ಥಳದ ರಸ್ತೆಯ ಪಕ್ಕದಲ್ಲಿ ಸತ್ತ ಎಮ್ಮೆ ಹಾಗೂ ಬೈಕ್ ಪತ್ತೆಯಾಗಿದ್ದು ಕಾಣಕೋಣ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.