ಸುದ್ದಿ ಕನ್ನಡ ವಾರ್ತೆ
ಕನಕಗಿರಿ : ಇಲ್ಲಿನ ನವಲಿ ರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ಹಣ ಜಮಾ ಮಾಡಲು ಬಂದಿದ್ದ ವೃದ್ಧ ಗ್ರಾಹಕನ ಚಲನ ವಲನ ಗಮನಿಸಿದ ಖದಿಮರು ಬ್ಯಾಂಕ್ ನಲ್ಲಿಯೇ ಆತನ ಗಮನ ಬೇರೆಡೆ ಸೆಳೆದು ಹಣ ಎಗರಿಸಿರುವ ಘಟನೆ ಸೋಮವಾರ ನಡೆದಿದೆ.
ತಾಲೂಕಿನ ಕಲಕೇರಿ ಗ್ರಾಮದ ಬಸವರಾಜ್ ಕುಂಬಾರ ಎನ್ನುವ ಗ್ರಾಹಕ 30 ಸಾವಿರ ರೂ.,ಗಳನ್ನು ಜಮಾ ಮಾಡಲು ಸೋಮವಾರ ಬೆಳಗ್ಗೆ ಬ್ಯಾಂಕಿಗೆ ಆಗಮಿಸಿದ್ದಾನೆ. ಇದನ್ನು ಗಮನಿಸಿರುವ ಖದಿಮರ ತಂಡ ಆತನು ವಿಶ್ರಾಂತಿ ಗಾಗಿ ಹಾಕಲಾಗಿರುವ ಚೇರ್ ಮೇಲೆ ಕುಳಿತು ಹಣವನ್ನು ಎಣಿಸಿ ಇಟ್ಟಾಗ ಓರ್ವ ಖದೀಮ ಆ ಗ್ರಾಹಕನ ಗಮನ ಬೇರೆಡೆ ಸೆಳೆಯುತ್ತಾನೆ. ಇನ್ನೊರ್ವ ಸರತಿ ಸಾಲಿನಲ್ಲಿ ನಿಲ್ಲುವ ನಾಟಕವಾಡಿ ಕಳ್ಳರು ನಡುವೆ ಕತ್ತರಿಸಿದ ಕೈ ಚೀಲ ಹಿಡಿದು ಅದರೊಳಗಿಂದ ಗ್ರಾಹಕ ಎಣಿಸಿ ಇಟ್ಟಿದ್ದ ಹಣವನ್ನು ಎಗರಿಸುತ್ತಾನೆ. ನಂತರ ಒಬ್ಬಬ್ಬರೇ ಅಲ್ಲಿಂದ ಕಾಲಕಿತ್ತಿದ್ದೂ ಬ್ಯಾಂಕಿನಲ್ಲಿನ ಸಿ ಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಈ ಕುರಿತು ಸ್ಥಳೀಯ ಪೊಲೀಸರು ಮಾಹಿತಿ ಪಡೆದಿದ್ದು, ಕಳ್ಳರ ಪತ್ತೆಗಾಗಿ ಬಲೆ ಬಿಸಿದ್ದಾರೆ. ಹಾಡುಹಗಲೇ ಹತ್ತಾರು ಜನರ ಸಮ್ಮುಖದಲ್ಲಿಯೇ ಸಿ ಸಿ ಕ್ಯಾಮರಾವಿದ್ದರೂ ಖದಿಮರು ಹಣ ದೋಚಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.