ಸುದ್ದಿ ಕನ್ನಡ ವಾರ್ತೆ

ಕಾರವಾರ :ಉತ್ತರ ಕನ್ನಡ ಜಿಲ್ಲೆಯಲ್ಲಿ ಫೆಬ್ರುವರಿ 14 ಮತ್ತು 15 ರಂದು ತೀವ್ರ ಶಾಖದ ಅಲೆಯ ವಾತಾವರಣ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷೆ ಕೆ.ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.

ವಿಪತ್ತು ನಿರ್ವಹಣಾ ಘಟಕದಿಂದ ಈ ಬಗ್ಗೆ ಹಲವು ಮುನ್ನೆಚ್ಚರಿಕೆ ಕ್ರಮ ಜಾರಿ ಮಾಡಿದ್ದು, ದಿನಪೂರ್ತಿ ಸಾಕಷ್ಟು ನೀರು ಕುಡಿಯಬೇಕು. ಓ.ಆರ್.ಎಸ್ ನಿಂಬೆ ನೀರು, ಮಜ್ಜಿಗೆ, ತೆಂಗಿನ ನೀರು ಮುಂತಾದ ದ್ರವ ವಸ್ತುಗಳನ್ನು ಸೇವಿಸಬೇಕು. ಹಗುರವಾದ, ತೆಳುವಾದ ಬಣ್ಣದ ಮತ್ತು ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ತಲೆ ಮತ್ತು ಮುಖವನ್ನು ಟೋಪಿ, ಛತ್ರಿ, ಗಮಚಾ ಅಥವಾ ರುಮಾಲಿನಿಂದ ಮುಚ್ಚಿಕೊಳ್ಳಬೇಕು. ಸಾಧ್ಯವಾದಷ್ಟು ತೀವ್ರ ಬಿಸಿಲಿನ ಸಮಯದಲ್ಲಿ (ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ) ಹೊರಗೆ ಹೋಗುವುದನ್ನು ತಪ್ಪಿಸಬೇಕು. ಹೊರಗೆ ಕೆಲಸ ಮಾಡುವಾಗ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು. ಮಕ್ಕಳು, ವೃದ್ಧರು, ಗರ್ಭಿಣಿಯರು ಮತ್ತು ಅಸ್ವಸ್ಥರಿಗೆ ವಿಶೇಷ ಕಾಳಜಿವಹಿಸಬೇಕು. ದೇಹದಲ್ಲಿ ತಲೆಸುತ್ತು, ಅತಿಯಾದ ದೌರ್ಬಲ್ಯ, ವಾಂತಿ, ಜ್ವರದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅಲ್ಲದೇ, ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ಗಾಳಿ ಹರಿವಿಗೆ ಅವಕಾಶ ಕಲ್ಪಿಸುವಂತೆ ತಿಳಿಸಲಾಗಿದೆ.ಉಷ್ಣ ಅಲೆ ಸಂದರ್ಭದಲ್ಲಿ, ತೀವ್ರ ಬಿಸಿಲಿನ ಸಮಯದಲ್ಲಿ ಅನಾವಶ್ಯಕವಾಗಿ ಹೊರಗೆ ಹೋಗಬಾರದು. ಮದ್ಯಪಾನ, ಹೆಚ್ಚು ಕಾಫಿ ಅಥವಾ ಸಿಹಿ ಪಾನೀಯಗಳನ್ನು ಸೇವಿಸಬಾರದು. ಕಠಿಣ ಶಾರೀರಿಕ ಕೆಲಸಗಳನ್ನು ಬಿಸಿಲಿನ ಸಮಯದಲ್ಲಿ ಮಾಡಬಾರದು. ಮಕ್ಕಳನ್ನು ಅಥವಾ ಪ್ರಾಣಿಗಳನ್ನು ಮುಚ್ಚಿದ ವಾಹನಗಳಲ್ಲಿ ಬಿಟ್ಟು ಹೋಗಬಾರದು.

ಅತಿಯಾದ ಮಸಾಲೆ ಮತ್ತು ಎಣ್ಣೆ ಪದಾರ್ಥಗಳನ್ನು ಸೇವಿಸಬಾರದು. ಉಷ್ಣಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ತಲೆ ಮುಚ್ಚಿಕೊಳ್ಳದೇ ಬಿಸಿಲಿಗೆ ನೇರವಾಗಿ ಒಡ್ಡಿ ಕೊಳ್ಳಬಾರದು ಎಂದು ಸಲಹೆ ನೀಡಲಾಗಿದೆ.