ಸುದ್ದಿ ಕನ್ನಡ ವಾರ್ತೆ

ಅಂಕೋಲಾ: ಸಾರ್ವಜನಿಕ ಹಣವನ್ನು ಸ್ವಂತಕ್ಕೆ ಉಪಯೋಗಿಸುವವರನ್ನು ನಾವು ನೋಡಿದ್ದೇವೆ. ಆದರೆ ಇನ್ನೊಬ್ಬ ಮಹಿಳೆ ತನಗೆ ಬಂದ ಹಣವನ್ನೇ ಸಾರ್ವಜನಿಕ ಉಪಯೋಗಕ್ಕಾಗಿ ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.

ಹೌದು ಅಂಕೋಲಾ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಧ್ವಜಸ್ತಂಭ ನಿರ್ಮಾಣಕ್ಕಾಗಿ ಗ್ರಾಮದ ಶ್ಯಾಮಲಾ ತಿಮ್ಮಪ್ಪ ಗೌಡ ಅವರು ‘ಗೃಹಲಕ್ಷ್ಮೀ’ ಯೋಜನೆಯಿಂದ ಲಭಿಸಿದ ಹಣವನ್ನು ದೇಣಿಗೆಯಾಗಿ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಪ್ರತಿ ವರ್ಷ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯುವಾಗ ಶಾಶ್ವತ ಧ್ವಜಸ್ತಂಭದ ಅಗತ್ಯತೆಯನ್ನು ಗಮನಿಸಿದ ಶ್ಯಾಮಲಾ ಕಿಮ್ಮಪ್ಪ ಗೌಡ, ತಮ್ಮ ಕೈಗೆ ಬಂದ ಸರ್ಕಾರಿ ನೆರವನ್ನು ಸಮಾಜಮುಖಿ ಕಾರ್ಯಕ್ಕೆ ಬಳಸುವ ನಿರ್ಧಾರ ಕೈಗೊಂಡರು. ಈ ಹಿನ್ನೆಲೆಯಲ್ಲಿ ‘ಗೃಹಲಕ್ಷ್ಮೀ’ ಯೋಜನೆಯಿಂದ ಪಡೆದ ₹20,000 ಮೊತ್ತವನ್ನು ಅವರು ಸಂಪೂರ್ಣವಾಗಿ ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ. ಈ ಹಣದಿಂದ ಶಾಲಾ ಆವರಣದಲ್ಲಿ ನೂತನ ಧ್ವಜಸ್ತಂಭ ನಿರ್ಮಾಣಕ್ಕೆ ಸಹಾಯವಾಗಲಿದೆ.

ಮಹಿಳೆಯ ಈ ಆದರ್ಶ ಕಾರ್ಯಕ್ಕೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಸರ್ಕಾರದ ಸಹಾಯಧನವನ್ನು ಸಾರ್ವಜನಿಕ ಹಿತಕ್ಕಾಗಿ ಬಳಸಿರುವುದು ಶ್ಲಾಘನೀಯ. ಇಂತಹ ಮನೋಭಾವ ಇತರರಿಗೂ ಪ್ರೇರಣೆಯಾಗಬೇಕು” ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಸಹಕಾರ ಅತ್ಯಂತ ಅಗತ್ಯ. ಸೀಮಿತ ಸಂಪನ್ಮೂಲಗಳ ನಡುವೆಯೂ ಶಿಕ್ಷಣ ಸಂಸ್ಥೆಗಳಿಗೆ ನೆರವಾಗುವ ಇಂತಹ ಕಾರ್ಯಗಳು ಮಕ್ಕಳ ಭವಿಷ್ಯಕ್ಕೆ ಬಲ ನೀಡುತ್ತವೆ. ತಮ್ಮ ಕುಟುಂಬದ ಅಗತ್ಯಗಳ ನಡುವೆಯೂ ಸಮಾಜದ ಹಿತವನ್ನು ಮುಂದಿಟ್ಟ ಶ್ಯಾಮಲಾ ತಿಮ್ಮಪ್ಪ ಗೌಡ ಅವರ ನಡೆ ಎಲ್ಲರಿಗೂ ಮಾದರಿಯಾಗಿದೆ.