ಸುದ್ದಿ ಕನ್ನಡ ವಾರ್ತೆ
ಬೆಂಗಳೂರು: ಬ್ರಾಹ್ಮಣರು ಅತೀ ಬುದ್ಧಿವಂತರು, ಸೇವಾಭಾವದ ಜೊತೆಗೆ ತ್ಯಾಗಮಯಿಗಳು. ವಿದ್ಯೆಯೇ ಇವರ ಆಸ್ತಿ. ಯಾರ ಬಗ್ಗೆಯೂ ದ್ವೇಷ, ಅಸೂಯೆ ಹೊಂದದೇ ಎಲ್ಲರ ಹಿತವೇ ಬಯಸುತ್ತಾರೆ. ಆದರೆ ಸಮಾಜ ಸಂಘಟನೆಯ ಕೊರತೆ ಎದುರಿಸುತ್ತಿದೆ. ಇದೇ ಸಮಾಜದ ದೌರ್ಬಲ್ಯವಾಗಿದೆ. ಸಂಘಟನೆ ಇಲ್ಲದೆ ಶಕ್ತಿ ಬರಲು ಸಾಧ್ಯವಿಲ್ಲ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಬಸವನಗುಡಿಯ ಗಾಯನ ಸಮಾಜ ಭವನದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಜ್ಯ ಘಟಕ ಭಾನುವಾರ ಆಯೋಜಿಸಿದ್ದ ವಿಪ್ರೋತ್ಸವ-2026 ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಸರ್ವಾಂಗೀಣ ವಿಕಾಸಕ್ಕೆ ಒಗ್ಗಟ್ಟು ಅನಿವಾರ್ಯವಾಗಿದೆ. ಇನ್ನಾದರೂ ಸಮಾಜದವರು ವಿಘಟಿತ ಮನಸ್ಥಿತಿಯಿಂದ ಹೊರಬಂದು ಸಂಘಟಿತರಾಗುವ ಅಗತ್ಯವಿದೆ ಎಂದು ಹೇಳಿದರು.
ನಮ್ಮ ಸಮಾಜ ಬಹಳ ಸುಶಿಕ್ಷಿತ, ಬುದ್ಧಿವಂತ, ಚಾರಿತ್ರ್ಯವಂತ, ಕ್ರಿಯಾಶೀಲವಾಗಿದೆ. ಸಮಾಜದಲ್ಲಿ ನಮಗೆ ಗೌರವವೂ ಇದೆ. ತ್ಯಾಗ, ಬಲಿದಾನದ ಇತಿಹಾಸ ನಮಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಕೆಲಸ ಮಾಡಿದ ಹೆಮ್ಮೆ ಸಮಾಜಕ್ಕಿದೆ. ಆದರೆ ಒಗ್ಗಟ್ಟಿಲ್ಲ. ಏಕೆ ಹೀಗೆ? ಎಂಬ ಚಿಂತನೆ ಅಗತ್ಯ. ಯಾವುದೋ ಹೋರಾಟ ಅಥವಾ ಯಾರಿಗೋ ಟೀಕಿಸಲು, ದ್ವೇಷಿಸಲು ಸಂಘಟನೆ ಮಾಡಬೇಕಿಲ್ಲ. ಬದಲಾಗಿ ನಮ್ಮ ಹಿತ, ಅಭಿವೃದ್ಧಿಗೆ ಸಂಘಟನೆ ಬೇಕು ಎಂದರು.
ಸ್ವಾಭಿಮಾನಿ ಸಮಾಜದಲ್ಲಿ ನಾವು ನಂಬರ್ ಒನ್ ಇದ್ದೇವೆ ಎಂಬುದು ಹೆಮ್ಮೆಯ ಸಂಗತಿ. ಸಮಾಜದ ಆರ್ಥಿಕ ಸಬಲರು ತನ್ನ ಸಮಾಜದ ಅಗತ್ಯವಿದ್ದವರಿಗೆ ಮೇಲೆತ್ತಲು ಪ್ರಯತ್ನಿಸಬೇಕು. ಉತ್ತರ ಭಾರತದಲ್ಲಿ ಬ್ರಾಹ್ಮಣರಿಗೆ ರಾಜಕೀಯದಲ್ಲಿ ಹೆಚ್ಚು ಸ್ಥಾನಮಾನ, ಪ್ರಾತಿನಿಧ್ಯವಿದೆ. ನಮ್ಮಲ್ಲೂ ಇದು ಹೆಚ್ಚಾಗಬೇಕು. ಇದರಿಂದ ಸಮಾಜಕ್ಕೆ ಹೆಚ್ಚು ಶಕ್ತಿ ಬರಲಿದೆ ಎಂದರು.
ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಬ್ರಾಹ್ಮಣ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಗೋವಿಂದ ಕುಲಕರ್ಣಿ
ಅಧ್ಯಕ್ಷತೆ ವಹಿಸಿದ್ದರು. ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ, ಬ್ರಾಹ್ಮಣ ಮಹಾಸಂಘದ ರಾಜ್ಯಾಧ್ಯಕ್ಷ ಜಿ.ಆರ್.ಪ್ರದೀಪ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಜೋಶಿ, ಪ್ರಮುಖರಾದ ರೇವತಿ ಕಾಮತ್, ತ್ರಿವಿಕ್ರಮ್ ಜೋಶಿ ಇತರರಿದ್ದರು.
—–
ಪಂಚ ಬ್ರಾಹ್ಮಣ ಸಾಧಕರಿಗೆ ಭಾರ್ಗವ ಭೂಷಣ ಪ್ರಶಸ್ತಿ
—
ಕಾರ್ಯಕ್ರಮದಲ್ಲಿ ವಿಪ್ರ ಸಮಾಜದ ಸಾಧಕರಾದ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಕನ್ನಡದ ಖ್ಯಾತ ಹಿರಿಯ ಚಲನಚಿತ್ರ ನಟ ಡಾ.ಶ್ರೀನಾಥ್, ಹಿರಿಯ ದಾಸ ಸಾಹಿತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಹಿರಿಯ ಉದ್ಯಮಿ ಆಶಾ ದಿನೇಶ್ ಹಾಗೂ ಹೋಟೆಲ್ ಉದ್ಯಮಿ ಗೋಪಾಡಿ ಶ್ರೀನಿವಾಸ ರಾವ್ ಅವರಿಗೆ ಸಂಘದಿಂದ ಭಾರ್ಗವ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಕು.ರಚಿತಾ ಹತ್ವಾರ್ ಅವರಿಗೆ ವಿಶೇಷ ಸನ್ಮಾನ ನೀಡಲಾಯಿತು. ಶಾಸಕ ದೇಶಪಾಂಡೆ ಸಾಧಕರಿಗೆ ಪ್ರಶಸ್ತಿ ವಿತರಿಸಿ, ಇವರೆಲ್ಲರೂ ಸಮಾಜದ ರತ್ನಗಳು ಎಂದು ಬಣ್ಣಿಸಿ, ಹೆಮ್ಮೆಪಟ್ಟರು.
——
—-
ವಿವಿಧ ತಂಡಗಳಿಂದ ಜರುಗಿದ ಭಜನೆ ಭಕ್ತಿ ಸುಧೆಯನ್ನೇ ಹರಿಸಿತು. 15ಕ್ಕೂ ಹೆಚ್ಚು ಮಹಿಳಾ ತಂಡಗಳು ಸುಮಾರು ಒಂದು ಗಂಟೆಗಳ ಕಾಲ ಸುಮಧುರ, ಸುಶ್ರಾವ್ಯವಾಗಿ ಭಜನಾ ಹಾಡುಗಳನ್ನು ಹಾಡಿದರು. ದೇವರ, ದಾಸರ ಸ್ತುತಿಗಳ ಕುರಿತಾದ ಹಾಡುಗಳ ಭಜನೆಗೆ ಭಕ್ತಿಯ ಸ್ಪರ್ಶ ನೀಡಿತು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿದ್ದ ಜನರು ಭಜನೆ ಹಾಡುಗಳು ಕೇಳಿ ತಲೆದೂಗಿದರು. ಅನೇಕರು ಚಪ್ಪಾಳೆ ತಟ್ಟುತ್ತ, ಭಗವತ್ ಸ್ಮರಣೆ ಮಾಡುತ್ತ ಭಕ್ತಿಯಲ್ಲಿ ತೇಲಾಡಿದರು.
ಬ್ರಾಹ್ಮಣರಲ್ಲಿ ಒಗ್ಗಟ್ಟಿಲ್ಲ ಎಂಬ ನಕಾರಾತ್ಮಕ ಮನಸ್ಥಿತಿಯಿಂದ ನಾವೆಲ್ಲ ಹೊರಬರಬೇಕಿದೆ. ಸಹಸ್ರಾರು ವರ್ಷಗಳಿಂದ ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ ಉಳಿಸಿಕೊಂಡು ಬಂದಿದ್ದೇ ನಮ್ಮ ಒಗ್ಗಟ್ಟಿಗೆ ಸಾಕ್ಷಿ. ನಮ್ಮೊಳಗಡೆಯ ಒಂದಿಷ್ಟು ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಉತ್ತರಾಧಿ ಹಾಗೂ ಮಂತ್ರಾಲಯ ಮಠದ ಯತಿಗಳ ಸಮ್ಮಿಲನ ನಮ್ಮ ಒಗ್ಗಟ್ಟಿಗೆ ತಾಜಾ ಉದಾಹರಣೆ.-ವಿಶ್ವೇಶ್ವರ ಭಟ್
ಹಿರಿಯ ಪತ್ರಕರ್ತರು
ನನಗೆ ನೀಡಿರುವ ಪ್ರಶಸ್ತಿ ಇಡೀ ಸಮುದಾಯದ ಆಶೀರ್ವಾದವಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಚಿಂತಿಸಿ, ದುಡಿಯುವ ಬ್ರಾಹ್ಮಣ ಸಮಾಜವು ಸದಾ ನೆಮ್ಮದಿ, ಸಂತೋಷದಿಂದ ಇರಬೇಕು. ಇದಕ್ಕಾಗಿ ನಾವೆಲ್ಲರೂ ಸಾಮೂಹಿಕ ಪ್ರಯತ್ನ ಮಾಡಬೇಕು.
-ಡಾ.ಶ್ರೀನಾಥ್
ಹಿರಿಯ ನಟ, ಭಾರ್ಗವ ಭೂಷಣ ಪ್ರಶಸ್ತಿ ಪುರಸ್ಕೃತ
===
