ಸುದ್ದಿ ಕನ್ನಡ ವಾರ್ತೆ
ಶಿರಸಿ: ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ತುರ್ತಾಗಿ ವೈದ್ಯಕೀಯ ಉಪಕರಣ ಖರೀದಿಗೆ ಟೆಂಡರ್ ಕರೆಯಲು ಆರೋಗ್ಯ ಇಲಾಖೆಗೆ ಸೂಚಿಸುತ್ತೇವೆ ಹಾಗು ತಜ್ಞ ವೈದ್ಯರ ನೇಮಕಾತಿಗೆ ಕೂಡಲೇ ಆದೇಶಿಸಲು ಸೂಕ್ತ ಸಚಿವಾಲಯಕ್ಕೆ ಮಾಹಿತಿ ನೀಡುವುದಾಗಿ ಮುಖ್ಯ ಮಂತ್ರಿಗಳ ಪರವಾಗಿ ಆಗಮಿಸಿದ್ದ ರಾಜ್ಯ ಸರಕಾರದ ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಮಂಗಳವಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಬೆಳಗಾವಿ ಸುವರ್ಣಸೌಧದ ಆವರಣದಲ್ಲಿ ಚಳಿಗಾಲದ ಅಧಿವೇಶನದ ವೇಳೆ ನಡೆದ ಪ್ರತಿಭಟನಾ ನಿರತ ಸ್ಥಳಕ್ಕೆ ಬಂದು, ಹೋರಾಟಗಾರರ ಆಗ್ರಹವನ್ನು ಕೇಳಿ ಭರವಸೆ ನೀಡಿದರು. ಈ ವೇಳೆ ಬಿಜೆಪಿ ಮುಖಂಡ, ಹೋರಾಟಗಾರ ಅನಂತಮೂರ್ತಿ ಹೆಗಡೆ ಮಾತನಾಡಿ, ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿಯು ಕಳೆದ 5 ವರ್ಷಗಳಿಂದ ಕುಂಟುತ್ತಾ ಸಾಗಿದೆ. ತಜ್ಞ ವೈದ್ಯರ ನೇಮಕಾತಿ, ವೈದ್ಯಕೀಯ ಯಂತ್ರೋಪಕರಣ ಟೆಂಡರ್ ನಡೆಯದೆ ಇರುವ ಕಾರಣಕ್ಕಾಗಿ ಹೋರಾಟವನ್ನು ನಡೆಸುತ್ತಿದ್ದೇವೆ. ಶೇಕಡಾ 80 ರಷ್ಟು ಕಾಮಗಾರಿ ಮುಗಿದ ನಂತರ ಟೆಂಡರ್ ಕರೆಯುತ್ತೇವೆ ಎಂದು ಸರ್ಕಾರ ಹೇಳಿತ್ತು. ಆದರೆ ಇದುವರೆಗೂ ಟೆಂಡರ್ ಕರೆಯಲಿಲ್ಲ, ವೈದ್ಯರ ನೇಮಕಾತಿಯನ್ನೂ ಮಾಡಿಲ್ಲ. ಇದನ್ನು ಖಂಡಿಸಿ ಸರ್ಕಾರಕ್ಕೆ ಆಗ್ರಹಿಸಿವುದರ ಜತೆಗೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಶೀಘ್ರವಾಗಿ ಮೇಲ್ದರ್ಜೆಗೇರಿರುವ 250 ಹಾಸಿಗೆಯ ಆಸ್ಪತೆಗೆ ತಜ್ಞ ವೈದ್ಯರ ನೇಮಕಾತಿಯಾಗಬೇಕೆಂದು ಅವರು ಆಗ್ರಹಿಸಿದರು.
ಮಾಜಿ ಜಿಪಂ ಸದಸ್ಯೆ ಉಷಾ ಹೆಗಡೆ ಮಾತನಾಡಿ, ನಾವು ಆಯ್ಕೆ ಮಾಡಿದಂತಹ ಸರ್ಕಾರ ನಮ್ಮ ಎದುರು ಸಭೆ ಮಾಡುತ್ತಿದ್ದರೆ, ಅವರನ್ನು ಆರಿಸಿದ ನಾವೆಲ್ಲರೂ ರಸ್ತೆ ಮಧ್ಯದಲ್ಲಿ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಒಂದು ಆಸ್ಪತೆಯ ಸಲುವಾಗಿ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕಿನ ಜನ ಇಲ್ಲಿಯ ವರೆಗೂ ಬಂದಿದ್ದೇವೆ. ಉತ್ತರಕನ್ನಡ ಜಿಲ್ಲೆಯಲ್ಲಿ ಹೃದಯ, ನರ ಹಾಗೆಯೆ ಮೊದಲಾದ ಖಾಯಿಲೆಗಳು ಬಂದಾಗ ಜನ ಚಿಕಿತ್ಸೆಗಾಗ ಬೇರೆ ಜಿಲ್ಲೆಯ ಆಸ್ಪತ್ರೆಗಳಿಗೆ ಹೋಗುವ ಪರಿಸ್ಥಿತಿ ಇದೆ. ಶಿರಸಿ ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಆಸ್ಪತೆಗೆ ವೈದ್ಯರ ನೇಮಕಾತಿ ಆಗಬೇಕು. ಇಷ್ಟೆಲ್ಲಾ ಪ್ರತಿಭಟನೆ ಮಾಡಿದರೂ ಸರ್ಕಾರ ಮಾತ್ರ ಕಣ್ಣು, ಕಿವಿ, ಬಾಯಿಯನ್ನು ಮುಚ್ಚುಕೊಂಡಿದೆ ಎಂದು ಆಕ್ರೋಶ ಹೊರಹಾಕಿದರು.
ಪ್ರಮುಖರಾದ ಮತ್ತೀಘಟ್ಟ ಭಾಗದ ಪಂಚಾಯತ ಸದಸ್ಯ ನಾರಾಯಣ ಹೆಗಡೆ ಮಾತನಾಡಿ, ರಾಜ್ಯ ಸರ್ಕಾರದ ಈ ಅವಧಿಯಲ್ಲಿ ಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಶಿರಸಿಯಲ್ಲಿ ಆಸ್ಪತ್ರೆ ಮೇಲ್ದರ್ಜೆಗೇರಿ, ಸುವ್ಯವಸ್ಥಿತವಾದರೆ ಸುತ್ತಲಿನ ಏಳೆಂಟು ತಾಲೂಕಿನ ಜನರಿಗೆ ಅನುಕೂಲವಾಗುತ್ತದೆ. ಈ ಕೂಡಲೇ ಮುಖ್ಯಮಂತ್ರಿಗಳು ನಮ್ಮ ಆಗ್ರಹವನ್ನು ತುರ್ತು ಪರಿಗಣಿಸಿ ಆದೇಶ ಹೊರಡಿಸಬೇಕೆಂದರು.
ಪ್ರತಿಭಟನೆಯಲ್ಲಿ ಹಿರಿಯ ಹೋರಾಟಗಾರ ಚಿದಾನಂದ ಹರಿಜನ ಮುಂಡಗೋಡು, ಮಂಜುನಾಥ ಕುಪ್ಪಗಡ್ಡೆ, ಅಂಕಿತ್ ಶಿರಸಿ, ಭೀಮಶಿ ವಾಲ್ಮೀಕಿ, ಬಸವರಾಜ ಹಸ್ಲರ್, ಶಂಕರಪ್ಪ, ರೈತ ಸಂಘದ ನೂರ್ ಅಹಮದ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಸರಕಾರಕ್ಕೆ ಕೊಟ್ಟ ಮನವಿಯಲ್ಲೇನಿದೆ ?
ಶಿರಸಿ ನಗರದಲ್ಲಿರುವ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು13-11-2020 ರಲ್ಲಿ 250 ಹಾಸಿಗೆಗಳಿಗೆ ಮೇಲ್ದರ್ಜೆಗೊಳಿಸಿ ಸರ್ಕಾರದಿಂದ ಅಅದೇಶ ಹೊರಡಿಸಲಾಗಿತ್ತು. ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ 112 ಕೋಟಿ ರೂಪಾಯಿ ಹಾಗು ವೈದ್ಯಕೀಯ ಉಪಕರಣಗಳ ಖರೀದಿಗಾಗಿ 30 ಕೋಟಿ ರೂಪಾಯಿ ಒಳಗೊಂಡು ಒಟ್ಟೂ 142 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆ ಆದೇಶದ ಪ್ರಕಾರ ಆಸ್ಪತ್ರೆಯ 80% ಕಾಮಗಾರಿ ಮುಗಿದ ಕೂಡಲೇ ವೈದ್ಯಕೀಯ ಉಪಕರಣಗಳಿಗೆ ಟೆಂಡರ್ ಕರೆಯಬೇಕು ಮತ್ತು ತಜ್ಞ ವೈದ್ಯರ ನೇಮಕಾತಿ ನಡೆಸಬೇಕಿತ್ತು. ಆದರೆ ಹಣ ಬಿಡುಗಡೆಯಾಗಿ ಈಗಾಗಲೇ 5 ವರ್ಷಗಳು ಕಳೆದಿವೆ. ಪ್ರಸ್ತುತ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿಯ ಶೇಕಡಾ 80% ರಷ್ಟು ಪೂರ್ಣಗೊಂಡು ಒಂದು ವರ್ಷಕ್ಕಿಂತಲೂ ಅಧಿಕ ಸಮಯ ಆದರೂ ಸಹ, ಇದುವರೆಗೂ ಆಸ್ಪತ್ರೆಗೆ ಸಂಬಂಧಿಸಿ ವೈದ್ಯಕೀಯ ಉಪಕರಣ, ತಜ್ಞ ವೈದ್ಯರ ನೇಮಕಾತಿ ಸಂಬಂಧಿಸಿ ಯಾವುದೇ ಪ್ರಕ್ರಿಯೆ ಆರಂಭಗೊಂಡಿಲ್ಲ. ಈ ಕುರಿತು ಈಗಾಗಲೇ ಪ್ರಸ್ತಾವನೆಯನ್ನು ರಾಜ್ಯ ಸರಕಾರದ ಆರೋಗ್ಯ ಇಲಾಖೆಗೆ ಕಳಿಸಲಾಗಿದೆ. ಬಡವರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗುವ ಎಂ.ಆರ್.ಐ. ಸ್ಕ್ಯಾನಿಂಗ್, ಸಿಟಿ ಸ್ಕ್ಯಾನಿಂಗ್, ಕಾರ್ಡಿಯೋಲಾಜಿ, ನ್ಯುರೋಲೊಜಿ ಸೇರಿದಂತೆ ಇನ್ನಿತರ ಸೌಲಭ್ಯಗಳು ಈ ಆಸ್ಪತ್ರೆಯಿಂದ ದೊರೆಯಲಿದೆ. ಪ್ರಸ್ತುತ ಆಸ್ಪತ್ರೆ ಪೂರ್ಣಗೊಳ್ಳದೇ ಇರುವುದರಿಂದ ನಮ್ಮ ಭಾಗದ ಜನರಿಗೆ ತೀವ್ರತರವಾದ ಸಮಸ್ಯೆಯಾಗುತ್ತಿದೆ.
ಜಿಲ್ಲೆಯಲ್ಲಿ ಅಪಘಾತಗಳಿಗೆ ಒಳಗಾಗಿ ಮಾರ್ಗಮಧ್ಯೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಒಬ್ಬರೇ ಒಬ್ಬ ನ್ಯೂರೋ ಸರ್ಜನ್ ವೈದ್ಯರು ಇಲ್ಲ. ಹಾರ್ಟ್ ಆಪರೇಷನ್ ಮಾಡುವ ಆಸ್ಪತ್ರೆಗಳೂ ಇಲ್ಲ. ನಮ್ಮ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಇಲ್ಲದಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಯ ಉತ್ತಮ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಹ ಆತಂಕದ ಸಂಗತಿಯಾಗಿದೆ. ಹೀಗಾಗಿ ಮಾನ್ಯ ಸರಕಾರದಿಂದ ಮೇಲ್ದರ್ಜೆಗೇರಿಸಿದ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ತುರ್ತಾಗಿ ವೈದ್ಯಕೀಯ ಉಪಕರಣ, ತಜ್ಞ ವೈದ್ಯರ ನೇಮಕಾತಿ ಮಾಡಬೇಕೆಂದು ಸಮಸ್ತ ಸಾರ್ವಜನಿಕರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಅನಂತಮೂರ್ತಿ ಹೆಗಡೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
