ಮಾನ್ಯರೆ
ನಿಮ್ಮ ಮನೆ, ನಿಮ್ಮ ಮೂಲ, ನಿಮ ಜಲ ರಕ್ಷಣೆ ಬೇಡ್ತಿ ಅಘನಾಶಿನಿ ನದಿ ತಿರುವು ವಿರೋಧಿ ದೊಡ್ಡ ಚಿಂತನ ಸಭೆ
Dec 13 ಬೆಂಗಳೂರು –
ನಿಮಗೆ ಆಹ್ವಾನ, ,
ವಿವರ, ಬನ್ನಿ, ಓದಿ,
ಹಂಚಿಕೊಳ್ಳಿ –
ಬೆಂಗಳೂರಿನ ಉತ್ತರಕನ್ನಡಿಗರೇ, ಊರನ್ನು ಉಳಿಸಿಕೊಳ್ಳಲು ಎದ್ದು ಬನ್ನಿ
ಎಲ್ಲಿ ಸಮೃದ್ಧಿ ಇರುವುದೋ ಅಲ್ಲಿ ಎಲ್ಲರ ಕಣ್ಣು ಬೀಳುತ್ತದೆ ಎನ್ನುವುದಕ್ಕೆ ಉತ್ತರಕನ್ನಡವೇ ಒಂದು ದೃಷ್ಟಾಂತ. ಸರ್ಕಾರ ಯಾವುದೇ ಬಂದರೂ ನಮ್ಮ ಅಸ್ತಿತ್ವವನ್ನು ಬುಡಮೇಲು ಮಾಡುವ ಯಾವುದಾದರೊಂದು ಯೋಜನೆಯನ್ನು ಉತ್ತರಕನ್ನಡಕ್ಕೆ ತಂದುಹಾಕಲು ನೋಡುತ್ತಲೇ ಇರುತ್ತದೆ. ಮೂವತ್ತೈದು ವರ್ಷಗಳಿಂದಲೂ ಇಲ್ಲಿಯ ನದಿಗಳಿಗೆ ಅಣೆಕಟ್ಟು ಕಟ್ಟಿ ಫಲವತ್ತಾದ ಭೂಮಿಯನ್ನೆಲ್ಲ ಮುಳುಗಿಸುವ ಹೊಂಚು ಹಾಕುತ್ತಿದ್ದ ಸರ್ಕಾರಗಳನ್ನು ಹಸಿರು ಸ್ವಾಮೀಜಿ ಗಳೆಂದೇ ಪ್ರಸಿದ್ಧರಾದ ಸ್ವರ್ಣವಲ್ಲಿಯ ಶ್ರೀಶ್ರೀಮದ್ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳ ನೇತೃತ್ವದಲ್ಲಿ ನಮ್ಮ ಹಿರಿಯರು ಸಂಘಟಿತ ಹೋರಾಟದಿಂದ ಹಿಮ್ಮೆಟ್ಟಿಸುತ್ತಲೇ ಬಂದಿದ್ದಾರೆ. ಪರಿಸರಕ್ಕೆ ಹಾನಿಯಾಗುತ್ತದೆಂಬುದು ಗೊತ್ತಿದ್ದೂ ಸರ್ಕಾರಗಳು ಯಾವ್ಯಾವುದೋ ಲಾಭಕ್ಕೋಸ್ಕರ ಹೊಸ ಹೊಸ ಹೆಸರಲ್ಲಿ ಅದೇ ಯೋಜನೆಗಳನ್ನು ನಮ್ಮ ಜಿಲ್ಲೆಯ ಮೇಲೆ ಹೇರುತ್ತಲೇ ಬಂದಿದ್ದಾರೆ. ಈಗಾಗಲೇ ಕೈಗಾದಂಥ ಯೋಜನೆಗಳಿಂದಾಗಿ ಯಾವತ್ತು ಬೇಕಾದರೂ, ಏನು ಬೇಕಾದರೂ ಆಗಬಹುದು ಎಂಬ ಭಯದಲ್ಲೇ ಉತ್ತರಕನ್ನಡದ ಜನತೆ ಜೀವನ ನಡೆಸಿಕೊಂಡು ಬರುತ್ತಿದ್ದಾರೆ.
ಮುಖ್ಯವಾಗಿ ಕೃಷಿಯನ್ನು ಅವಲಂಬಿಸಿದ ಇಲ್ಲಿನ ಸಭ್ಯ ಜನತೆಗಾಗಿ ಸರ್ಕಾರವು ಒಂದು ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯ ಸೌಲಭ್ಯವನ್ನು ಕೂಡ ಕೊಡದೇ ನಿರ್ಲಕ್ಷಿಸಿದೆ. ಆದರೆ ‘ಅಭಿವೃದ್ಧಿ’ಯ ಹೆಸರಿನಲ್ಲಿ ನಾನಾ ಯೋಜನೆಗಳನ್ನು ತಂದು ಇಲ್ಲಿನ ಜನತೆಯನ್ನು, ಇಲ್ಲಿನ ಪರಿಸರವನ್ನು ಇನ್ನಿಲ್ಲದಂತೆ ಶೋಷಿಸುತ್ತಲೇ ಇವೆ. ದೇಶದಲ್ಲೇ ಅತ್ಯಂತ ದಟ್ಟವಾದ ಕಾಡನ್ನು ಹೊಂದಿರುವ, ಸೂಕ್ಷ್ಮಜೀವಿಗಳ ಆವಾಸಸ್ಥಾನವೂ, ಭತ್ತ-ತೆಂಗು-ಅಡಿಕೆ ಮೊದಲಾದವುಗಳಿಂದ ಸದಾ ಹಸಿರಾಗಿ ಕಂಗೊಳಿಸುತ್ತಲೂ ಇರುವ, ನಮ್ಮ ಹಿರಿಯರು ಕಾಳಜಿಯಿಂದ ಉಳಿಸಿಕೊಂಡು ಬಂದಿರುವ ಪಶ್ಚಿಮಘಟ್ಟವನ್ನು ಬೋಳುಗುಡ್ಡೆಯಾಗಿ ನೋಡುವ ದೌರ್ಭಾಗ್ಯ ನಮಗೆ ಬೇಕೇ?
ವಿಶ್ವದಾದ್ಯಂತ ಹರಡಿರುವ ಉತ್ತರಕನ್ನಡಿಗರು ಹೆಮ್ಮೆಯಿಂದ ತಮ್ಮ ಊರನ್ನು ನೆನಪಿಸಿಕೊಳ್ಳುತ್ತಾರೆ. ಯಾವಾಗ ಊರಿಗೆ ಹೋಗುತ್ತೇನೆಂದು ಅವರೆಲ್ಲರ ಮನಸ್ಸು ಕಾಯುತ್ತಿರುತ್ತದೆ. ಅಲ್ಲಿ ನಮ್ಮ ಅಪ್ಪ-ಅಮ್ಮ, ಬಂಧುಗಳು, ನಮ್ಮ ಮನೆ, ನಮ್ಮ ತೋಟ, ನಮ್ಮ ಬಾಲ್ಯದ ಹೆಜ್ಜೆ ಗುರುತುಗಳು, ನಮ್ಮ ಮನಸ್ಸು ಎಲ್ಲವೂ ಅಲ್ಲೇ ಇವೆ. ನಮ್ಮ ಗುರುತೇ ಆಗಿರುವ ಊರೇ ನಾಶವಾಗಿ ಬಿಟ್ಟರೆ ನಮ್ಮ ಬದುಕಿಗೆ ಯಾವ ಅರ್ಥ ಹೇಳಿ?
ಉದ್ಯೋಗಕ್ಕಾಗಿ ನಾವು ಊರನ್ನು ತೊರೆದಿರಬಹುದು. ಆದರೆ ಊರಿನ ಋಣವನ್ನು ಕಳಚಿಕೊಂಡು ಹೊರಬಂದಿಲ್ಲವಲ್ಲ. ಹಾಗಾಗಿ ನಮ್ಮ ಊರನ್ನು, ನಮ್ಮ ಜಿಲ್ಲೆಯನ್ನು ಉಳಿಸಿಕೊಳ್ಳುವುದು ನಮ್ಮದೇ ಜವಾಬ್ದಾರಿ. ಜಿಲ್ಲೆಯ ನಮ್ಮ ಹಿರಿಯರು ಮತ್ತು ಊರಿನ ಜನರೆಲ್ಲ ಸೇರಿ ಈಗಾಗಲೇ ಬಹಳ ದೊಡ್ಡ ಸಮಾವೇಶಗಳನ್ನು ನಡೆಸಿ ಸರ್ಕಾರದ ಇಂಥ ಅಸಮರ್ಪಕ ಯೋಜನೆಗಳ ವಿರುದ್ಧ ಶ್ರೀಶ್ರೀಗಳ ಮುಂದಾಳತ್ವದಲ್ಲಿ ಈಗಾಗಲೇ ಘಟ್ಟಿ ಧ್ವನಿ ಎತ್ತಿದ್ದಾರೆ. ಇನ್ನೂ ಎಷ್ಟು ದಿನ ಗುರುಗಳೇ ನಮ್ಮನ್ನು ಕರೆಯಬೇಕು? ಎಷ್ಟು ಸಲ ನಮ್ಮ ಊರಿನಲ್ಲಿ ಉಳಿದಿರುವ ಕೆಲವೇ ಕೆಲವು ಜನ ಹೋರಾಡಬೇಕು?
ಬೆಂಗಳೂರಿನಂಥ ನಗರಗಳಲ್ಲಿರುವ ನಾವೂ ನಮ್ಮ ಊರಿನ ಮತ್ತು ಜಿಲ್ಲೆಯ ಉಳಿವಿಗಾಗಿ ಸ್ವಲ್ಪವಾದರೂ ಧ್ವನಿ ಎತ್ತಬೇಡವೇ? ವಿವೇಕಿಗಳಾಗಿ, ಸುಶಿಕ್ಷಿತರಾಗಿ ನಾವೇ ಒಂದಾಗದಿದ್ದರೆ ಯೋಜನೆಯೆಂಬ ರಾಕ್ಷಸನ ಪ್ರವೇಶವಾದ ಮೇಲೆ ಪರಿತಪಿಸಿಕೊಂಡು ಪ್ರಯೋಜನವಿಲ್ಲ.
ಬಂಧುಗಳೇ,
ಈಗಾಗಲೇ ಪರಮಪೂಜ್ಯ ಸ್ವರ್ಣವಲ್ಲಿ ಶ್ರೀ ಶ್ರೀಗಳು ಜಿಲ್ಲೆಯ ಆದ್ಯಂತ ನದಿಜೋಡಣೆಯಂಥ ಅನಾಹುತಕಾರಿ ಯೋಜನೆಯ ಬಗ್ಗೆ ಜನರಲ್ಲಿ ಜಾಗರಣೆಯನ್ನು ಮೂಡಿಸುತ್ತಿರುವುದಷ್ಟೇ ಅಲ್ಲ, ಎಲ್ಲ ರೀತಿಯಲ್ಲೂ ಈ ಯೋಜನೆಯ ಕರಾಳ ಮುಖವನ್ನು ಪರಿಚಯಿಸಿ, ಈ ಯೋಜನೆಯ ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ಇದೇ ಬರುವ ಡಿಸೆಂಬರ್ ೧೩ನೆಯ ತಾರೀಕು ಭಾರತೀಯ ವಿದ್ಯಾಭವನದಲ್ಲಿ ಜನಜಾಗೃತಿ ಚಿಂತನ-ಮಂಥನ ವೆಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇದರಲ್ಲಿ ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿತಿರುವು ಯೋಜನೆಗಳ ಬಗ್ಗೆ ಅನೇಕ ತಜ್ಞರು ವಿಷಯಗಳನ್ನು ಮಂಡಿಸಲಿದ್ದಾರೆ. ಆ ಮೂಲಕ ಸರ್ಕಾರಕ್ಕೆ ನಮ್ಮ ಧ್ವನಿಯನ್ನು ಮುಟ್ಟಿಸುವ ಕೆಲಸವಾಗಲಿದೆ.
ಈಗಾಗಲೇ ನದಿತಿರುವಿನಂಥ ಯೋಜನೆಯಿಂದ ಎಷ್ಟೆಲ್ಲ ಅನಾಹುತಗಳಾಗಿವೆ ಮತ್ತು ಅದೆಷ್ಟು ಅನರ್ಥಕಾರಿ ಯೋಜನೆ ಇದು ಎಂಬುದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ನಾವೆಲ್ಲ ನೋಡಿಯೇ ಇದ್ದೇವೆ. ಈಗ ನಮ್ಮ ಕಾಲಬುಡಕ್ಕೇ ಬಂದು ನಿಂತಿರುವ ಈ ನದಿತಿರುವು ಯೋಜನೆಯ ವಿರುದ್ಧ ಘಟ್ಟಿಯಾದ ಧ್ವನಿಯನ್ನು ನಾವೆಲ್ಲರೂ ಸೇರಿ ಮೊಳಗಿಸಬೇಕಿದೆ. ಊರಿನಲ್ಲಿ ಸಮಾವೇಶಗಳಾದಾಗ ದೂರದಲ್ಲಿ ಇದ್ದು ಅಲ್ಲಿ ಭಾಗವಹಿಸಲಾಗದ ಅಸಾಹಯಕತೆಯಲ್ಲಿ ಇದ್ದ ನಾವುಗಳು ಈಗ, ನಾವಿದ್ದಲ್ಲಿಯೇ ಅಂಥ ಅವಕಾಶವನ್ನು ಮಾಡಿಕೊಡುತ್ತಿರುವ ಶ್ರೀಮಠದ ನೇತೃತ್ವದ ಈ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇದ್ದರೆ ಅದು ಖಂಡಿತ ಆತ್ಮವಂಚನೆಯಾಗಲಿದೆ.
ಶನಿವಾರದ ಭೋಜನಾನಂತರದ ಒಂದು ಹೊತ್ತನ್ನು ನಾವಿದಕ್ಕೆ ಮೀಸಲಾಗಿಡೋಣ. ಅವತ್ತು ಹೇಗೂ ರಜೆಯೂ ಇದೆ. ನಮಗೆ ಹಾಗೂ ಮುಂದಿನ ತಲೆಮಾರಿಗೆ ನಮ್ಮ ಊರನ್ನು, ನಮ್ಮ ಜಿಲ್ಲೆಯನ್ನು ಉಳಿಸಿಕೊಳ್ಳಲು ಇಷ್ಟೂ ಮಾಡದೇ ಇದ್ದರೆ ಹೇಗೆ ಅಲ್ಲವೇ? ದಯವಿಟ್ಟು ಈ ವಿಷಯವನ್ನು ಹೆಚ್ಚು ಹೆಚ್ಚು ಜನರಿಗೆ ತಿಳಿಸಿ ನಾವೇ ಸಂಘಟನೆಯನ್ನು ಮಾಡೋಣ. ನಮ್ಮ ಪರವಾಗಿ ಯಾರೋ ಹೋರಾಡಲಿ ಎಂಬ ಭಾವದಿಂದ ಹೊರಬಂದು ನಮ್ಮ ಊರು-ಕೇರಿಯನ್ನು ಉಳಿಸಿಕೊಳ್ಳಲು ಊರು-ಕೇರಿ ಬಂಧುಗಳೆಲ್ಲ ಒಟ್ಟಾಗೋಣ.
ಸಾಗರೋಪಾಧಿಯಲ್ಲಿ ಅವತ್ತು ನಾವೆಲ್ಲ ಸೇರಿ ಘಟ್ಟಿಯಾದ ಸಂದೇಶವನ್ನು ಸರ್ಕಾರಕ್ಕೆ ಕೊಡೋಣ. ಶ್ರೀಗಳ ಕಾಳಜಿಯ ಈ ಹೋರಾಟ ನಮ್ಮೆಲ್ಲರದಾಗಲಿ.
(ಸುದ್ದಿ ಕನ್ನಡ ಸಂಗ್ರಹಿಸಿದ್ದು) ಡಾ. ವಿಶ್ವನಾಥ ಸುಂಕನಾಳ, ಅವರ ಮೌಲಿಕ ಬರಹ …
ಬರ್ತೀರಿ ಅಲ್ಲವೇ
