ಸುದ್ದಿ ಕನ್ನಡ ವಾರ್ತೆ
ಮನೆಯಲ್ಲಿ ಒಬ್ಬರಿಗೆ ಗಂಭೀರ ಆರೋಗ್ಯ ಸಮಸ್ಯೆಯಿದೆಯೆಂದರೆ ಆರೋಗ್ಯ ವಿಚಾರಿಸಲು ಸ್ನೇಹಿತರು,ಸಂಬಂಧಿಕರು,ಒಡನಾಡಿಗಳು ಬರ್ತಾರೆ. ಮಂಗಳೂರು ಆಸ್ಪತ್ರೆಗೆ ಹೋಗಿ, ಮುಂಬೈ ನೋಡಬಹುದಿತ್ತು, ಆ ಡಾಕ್ಟರ್ ಬದಲು ಇಲ್ಲಿ ಹೋಗಿ ಮಾತು ಕೇಳುತ್ತದೆ. ಸೊಲ್ಲಾಪುರದಲ್ಲಿ ಒಂದು ನಾಟಿ ಔಷಧಿ ಕೊಡ್ತಾರೆ, ನೀವು ತಕ್ಷಣ ಇಂಥ ಕಷಾಯ ಕುಡಿಯಿರಿ, ಈ ಬೇರು ಕೊಡಿರಿ ….ಹೀಗೆ ನಿತ್ಯ ಸಲಹೆಗಳು ಬರುತ್ತವೆ.
ಎಲ್ಲರಿಗೂ ಹೇಗಾದರೂ ರೋಗ ಕಡಿಮೆಯಾಗಲಿ ಎಂಬ ಆಸೆಯಿದೆ.
ಈಗ ಎಲೆ ಚುಕ್ಕಿ ರೋಗದ ತೋಟದ ಕೃಷಿಕರಿಗೆ ಹೊಸ ಹೊಸ ಸಲಹೆ ಬರುತ್ತದೆ. ಈ ವರ್ಷದ ಬೆಳೆ ಹೋಯಿತು, ಅಡಿಕೆ ಮರವಾದರೂ ಉಳಿಯಲೆಂದು ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳದೇ ಪ್ರಯೋಗ ಮಾಡಿದ್ದೇ ಮಾಡಿದ್ದು. ಇಷ್ಟೇಲ್ಲಾ ಮಾಡಿದ ಮೇಲೆ ಒಮ್ಮೆ ಹಸಿರಾದ ತೋಟ ನೋಡಿದರೆ ಖುಷಿ, ಆದರೆ ಪುನಃ ರೋಗ ಉಲ್ಬಣ ಕಾಣಿಸುವುದು ಕೃಷಿಕರ ರಕ್ತದೊತ್ತಡ ಹೆಚ್ಚಿಸಿದೆ. ಅಕಾಲಿಕ ಮಳೆ, ಇಬ್ಬನಿ, ಚಳಿ ಹವಾಮಾನ ಆದ್ರೂ ತೋಟದ ರೋಗದ ತೀವ್ರತೆ ಕೂಡ ಕಾಣಿಸುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕೃಷಿಕರಿಗೆ ಮುಂದಿನ ದಾರಿ ಕಾಣಿಸುತ್ತಿಲ್ಲ.
ಬೆಳೆ ರೋಗದ ಇಂಥದೇ ತೀವ್ರತೆಯನ್ನು ದ್ರಾಕ್ಷಿ ತೋಟ ಓಡಾಡಿದವರಿಗೆ ಗೊತ್ತಾಗುತ್ತದೆ. ದ್ರಾಕ್ಷಿಗೆ ಎಷ್ಟು ಸಾರಿ ಸಿಂಪರಣೆ ಮಾಡ್ತೀರಾ? ಎಂದು ಕೇಳಿದರೆ ಬೆಳೆಗಾರರಿಗೆ ಉತ್ತರ ಕಷ್ಟ. ಮೋಡ ಕವಿದರೆ ಸಿಂಪರಣೆಗೆ ಓಡಬೇಕು, ಎಲೆ ಚಿಗುರಲು,ಉದುರಿಸಲು, ಹೂ ಆಗಲು, ಕಾಯಿ ಕೊಳೆ ತಡೆಯಲು ಹೀಗೆ ಹತ್ತಾರು ಕಾರಣಗಳಿಗೆ ಸಿಂಪರಣೆ ನಡೆಯಬೇಕು. ಈಗ ಟ್ರ್ಯಾಕ್ಟರ್ ಚಾಲಿತ ಯಂತ್ರ ಅನುಕೂಲತೆಯಿಂದ ದ್ರಾಕ್ಷಿ ತೋಟ ನಿರ್ವಹಣೆ ಅನುಕೂಲವಿದೆ. ಆದರೆ 70 ರಿಂದ 80 ಅಡಿ ಎತ್ತರದ ಅಡಿಕೆ ಮರದ ರೋಗಕ್ಕೆ ನಿರಂತರ ಸಿಂಪರಣೆ ಕಷ್ಟವಿದೆ. ತೋಟದ ಸರಣಿಯಲ್ಲಿ ಪ್ರತೀ ಕೃಷಿಕರದ್ದೂ ನಿರ್ವಹಣಾ ವಿಧಾನ ಬೇರೆಯೇ ಇದೆ. ಹೀಗಿರುವಾಗ ಎಲೆ ಚುಕ್ಕಿ ನಿಯಂತ್ರಣ ಮಾಡಲು ಹತ್ತಾರು ತೊಡಕುಗಳಿವೆ . ಒಬ್ಬ ಕೃಷಿಕ ರೋಗ ಗೆದ್ದಿದ್ದು ಅಳವಡಿಸಿ ಗೆಲ್ಲಲು ಎಲ್ಲರಿಗೂ ಅಸಾಧ್ಯ. ಇಷ್ಟು ಕಾಲದಿಂದಲೂ ತೋಟ ಕೃಷಿಕರ ಇಷ್ಟೊಂದು ಕಾಳಜಿ ಬಯಸಿರಲಿಲ್ಲ. ಶಾಹಿ ಕ್ರಾಪ್ (ರಾಜ ಬೆಳೆ) ಆಗಿ ನಮ್ಮನ್ನು ಸಲಹಿದ್ದ ತೋಟ ಇಂದು ಸವಾಲು ಹಿಡಿದು ನಿಂತಿದೆ.
(ಸಂಗ್ರಹ ಸುದ್ದಿ)
