ಸುದ್ದಿ ಕನ್ನಡ ವಾರ್ತೆ

. ಯಲ್ಲಾಪುರ:ಪಟ್ಟಣದ ಗಾಂಧಿ ಕುಟಿರದಲ್ಲಿ 39 ನೇಯ ವರ್ಷದ ಸಂಕಲ್ಪ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಸಂಕಲ್ಪ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀ ಜಿಯವರು ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ಶ್ರೇಷ್ಠ ಸಂಸ್ಕೃತಿ ಮತ್ತು ಪರಂಪರೆಯನ್ನು ಮಕ್ಕಳಿಗೆ ಹಸ್ತಾಂತರ ಮಾಡುವಲ್ಲಿ ಪಾಲಕರು ಹಿಂದೆ ಬೀಳುತ್ತಿದ್ದಾರೆ.ಇದರಿಂದ ಕೃಷಿ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳು ಮತ್ತು ವೈವಾಹಿಕ ಸಮಸ್ಯೆಗಳು ತಲೆದೊರುತ್ತಿವೆ. ಪಾಲಕರು ತಮ್ಮ ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡಬೇಕಿದೆ.ಕೃಷಿ ಅವಗಣನೆಯಿಂದಾಗಿ ಕೃಷಿ ಕಾಯಕಕ್ಕೆ ಹಿನ್ನಡೆ ಉಂಟಾಗುತ್ತಿದೆ.ಕೃಷಿ ಜಮೀನುಗಳು ಪರಭಾರೆಯಾಗುತ್ತಿವೆ.ನಗರ ಆಕರ್ಷಣೆ ಮತ್ತು ಹಣದ ವ್ಯಾಮೋಹದಿಂದ ವಿದೇಶಿ ಹಿನ್ನೆಲೆಯವರಿಗೆ ನಮ್ಮ ಕೃಷಿ ಫಲವತ್ತಾದ ಭೂಮಿ ಸೇರುತ್ತಿದೆ,ನಮ್ಮ ಸಂಸ್ಕೃತಿ ನಶಿಸುತ್ತಿದೆ. ಯಕ್ಷಗಾನವನ್ನೇ ಪ್ರಧಾನವಾಗಿಟ್ಟುಕೊಂಡು ಸಂಕಲ್ಪ ಉತ್ಸವ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಎಡನೀರು ಮಠದ ಶ್ರೀಮದ್ ಸಚ್ಚಿದಾನಂದ ಭಾರತೀ ಶ್ರೀಗಳು ಮಾತನಾಡಿ ಯಕ್ಷಗಾನದಂತಹ ಶ್ರೀಮಂತ ಕಲೆಗಳು ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾಗಿವೆ.ಇಂತಹ ಕಲಾರಾಧನೆಯಿಂದ ಸ್ವಾಸ್ಥ್ಯ ಜೀವನ ನಡೆಸಲು ಸಾಧ್ಯವಿದೆ.ಇಂತಹ ಉತ್ಸವಗಳಿಂದ ಕಲೆಯ ಸತ್ವಗಳು ಉಳಿಯುತ್ತವೆ.ನಾನಾ ಕಾರಣಗಳಿಂದ ಇಂದು ಮಕ್ಕಳಲ್ಲಿ ಧಾರ್ಮಿಕ ನಂಬಿಕೆ ಕಡಿಮೆಯಾಗುತ್ತಿದೆ.ಮಕ್ಕಳಲ್ಲಿ ಧಾರ್ಮಿಕ,ಸಾಂಸ್ಕೃತಿಕ ಭಾವನೆಯನ್ನು ಬೆಳೆಸಬೇಕು.ಭಗವದ್ಗೀತಾ ಅಭಿಯಾನದ ಮೂಲಕ ಸ್ವರ್ಣವಲ್ಲೀ ಶ್ರೀಗಳು ಮಹತ್ವದ ಕಾರ್ಯ ಮಾಡುತ್ತಿದ್ದು,ಈ ಅಭಿಯಾನವು ನೆರೆಯ ಕಾಸರಗೋಡು ಜಿಲ್ಲೆಯಲ್ಲಿಯೂ ನಡೆಯುವಂತಾಗಲಿ ಎಂದು ಹೇಳಿದರು.

ವೇದಿಕೆಯಲ್ಲಿ ಪ್ರಮುಖರಾದ ರಾಮನಾಥ ಭಟ್ಟ, ಎಮ್.ಆರ್.ಹೆಗಡೆ ಕುಂಬ್ರಿಗುಡ್ಡೆ, ಸುಬ್ರಹ್ಮಣ್ಯ ಹೆಗಡೆ,ಮುರಳಿ ಹೆಗಡೆ,ಸುಬ್ರಹ್ಮಣ್ಯ ಚಿಟ್ಟಾಣಿ,ಶಂಕರ ಭಟ್ಟ,ಬೀರಣ್ಣ ನಾಯಕ ಮೊಗಟಾ,ವೆಂಕಟೇಶ ಹೆಗಡೆ ಹೊಸಬಾಳೆ,ವನರಾಗ ಶರ್ಮಾ ಮುಂತಾದವರು ಇದ್ದರು.ಪದ್ಮಾ ಹೆಗಡೆ ಪ್ರಾರ್ಥಿಸಿದರು,ಸಿ.ಜೆ.ಹೆಗಡೆ ಸ್ವಾಗತಿಸಿದರು,ಪ್ರಸಾದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಚಂದ್ರಕಲಾ ಭಟ್ಟ ನಿರೂಪಿಸಿದರು.