ಸುದ್ದಿ ಕನ್ನಡ ವಾರ್ತೆ

ಬೆಂಗಳೂರು:  ಸಂಸದ ವಿಶ್ವೇಶ್ವರ ಹೆಗಡೆ  ಕಾಗೇರಿ ಯವರು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು   ನಿಯೋಗದೊಂದಿಗೆ ಭೇಟಿ ಮಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ಮತ್ತು ಜನಜೀವನಕ್ಕೆ ತೀವ್ರ ಆತಂಕವನ್ನು ಸೃಷ್ಟಿಸಿರುವ ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ ನದಿತಿರುವು ಯೋಜನೆಗಳು ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ನಿಲ್ಲಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಇದರ ಜೊತೆಗೆ, ಈ ಯೋಜನೆಗಳ ಕುರಿತು ವಿಜ್ಞಾನಿಗಳ ಸಭೆ ನಡೆಸಬೇಕು ಮತ್ತು ಜಿಲ್ಲೆಯ ಧಾರಣಾ ಸಾಮರ್ಥ್ಯದ (Carrying Capacity) ಅಧ್ಯಯನ ನಡೆಸಬೇಕೆಂದು ಸಹ ಮನವಿ ಮಾಡಿದರು, ಈ ನಿಯೋಗದಲ್ಲಿ ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯರಾದ ಶಾಂತರಾಮ ಸಿದ್ದಿ, ಅಘನಾಶಿನಿ ಕೊಳ್ಳ ಸಮಿತಿಯ ಅಧ್ಯಕ್ಷರಾದ ಅನಂತ ಹೆಗಡೆ ಅಶಿಸರ, ಸ್ವರ್ಣವಲ್ಲೀ ಮಠದ ಅಧ್ಯಕ್ಷರಾದ ವಿ. ಎನ್. ಹೆಗಡೆ ಸೇರಿದಂತೆ ಪ್ರಮುಖರು ಮತ್ತು ಪರಿಸರ ಹೋರಾಟಗಾರರು ನಿಯೋಗದಲ್ಲಿದ್ದರು.

ಈ ಸಂದರ್ಭದಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ರೈತ ಸಮುದಾಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇವರ ನೆರವಿಗಾಗಿ ಬೆಳೆ ನಷ್ಟ ಪರಿಹಾರದ ಹಣವನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ಅಲ್ಲದೆ, ಹವಾಮಾನ ಆಧಾರಿತ ಬೆಳೆ ವಿಮೆಯು ಸಕಾಲದಲ್ಲಿ ದೊರಕುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಸರಿಯಾಗಿ ಕಾರ್ಯನಿರ್ವಹಿಸದ ಹವಾಮಾನ ಮಾಪನ ಯಂತ್ರಗಳನ್ನು ತುರ್ತಾಗಿ ದುರಸ್ತಿಗೊಳಿಸಿ, ವಿಮಾ ಪರಿಹಾರ ಸಕಾಲದಲ್ಲಿ ದೊರಕಲು ಅಗತ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸಿ ಅತಿವೃಷ್ಟಿಯಿಂದಾಗಿ ಜಿಲ್ಲೆಯಾದ್ಯಂತ ರಸ್ತೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಸಾರ್ವಜನಿಕ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಜನರ ಹಿತದೃಷ್ಟಿಯಿಂದ, ಈ ಹಾನಿಗೊಳಗಾದ ರಸ್ತೆಗಳ ದುರಸ್ತಿಗಾಗಿ ತಕ್ಷಣವೇ ಅಗತ್ಯ ಹಣವನ್ನು ಬಿಡುಗಡೆಗೊಳಿಸಿ, ದುರಸ್ತಿ ಕಾರ್ಯಗಳನ್ನು ಶೀಘ್ರವಾಗಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು