ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನಲ್ಲಿ ಹಾದು ಹೋಗಿರುವ ಮುಂಡಗೋಡ – ಅಣಶಿ ರಾಜ್ಯ ಹೆದ್ದಾರಿ 46ರ ರಸ್ತೆಯು ಅಲ್ಲಲ್ಲಿ ಹದಗೆಟ್ಟು ರಸ್ತೆಯ ಮೇಲೆ ಕೆಸರು ನೀರು ಮತ್ತು ಹೊಂಡಗಳ ರಾಶಿಯಿಂದ ವಾಹನ ಸವಾರರು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುವ ಅಪಾಯಕಾರಿ ದುಸ್ಥಿತಿ ಎದುರಿಸುವಂತಾಗಿದೆ. ಮಂದುರ್ಲಿ ಕ್ರಾಸ್ ನಿಂದ ಕಂಡಾಕುಂಡಿಯವರೆಗೆ, ಕಾನೇರಿಯಿಂದ ಗುಂದ ಕ್ರಾಸ್ ಮಾರ್ಗವಾಗಿ ಉಳವಿಗೆ ಹೋಗುವಾಗ ಸಿಗುವ ಚಾಪೇರ ತನಕ,ಅಂಬೋಳಿ ಕ್ರಾಸ್ ನಿಂದ ಕೊಡುಗಾಳಿ ಕ್ರಾಸ್ ವರೆಗೆ ಹೆದ್ದಾರಿ ರಸ್ತೆ ಹಾಳಾಗಿರುತ್ತದೆ.

ಬೇಸಿಗೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುತ್ತದೆ,ಮಳೆಗಾಲ ಪ್ರಾರಂಭವಾದ ನಂತರ ರಸ್ತೆಯ ಗುಂಡಿಗಳ ದರ್ಶನವಾಗುತ್ತದೆ. ಈ ರಸ್ತೆಯ ಮಾರ್ಗವಾಗಿ ವರ್ಷಾನುಗಟ್ಟಲೇ ದಿನನಿತ್ಯ ವಾಹನಗಳು ಉಳವಿ ದೇವಸ್ಥಾನಕ್ಕೆ, ಪ್ರವಾಸಿ ತಾಣಗಳಿಗೆ ಸಂಚರಿಸುತ್ತವೆ.ಈ ರಸ್ತೆಯ ದುಸ್ಥಿತಿಗೆ ಜನಪ್ರತಿನಿಧಿಗಳಿಗೆ,ಅಧಿಕಾರಿ ವರ್ಗಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಮಳೆಗಾಲದಲ್ಲಿ ಚಾಲಕರು ವಾಹನ ಚಲಾಯಿಸುವ ಸಂದರ್ಭದಲ್ಲಿ ಕಾರು,ಬೈಕ್ ಗಳು ಗುಂಡಿಗೆ ಬಿದ್ದು ಜಖಂಗೊಳ್ಳುವುದು, ಕೆಟ್ಟು ನಿಲ್ಲುವುದು,ಬೈಕ್ ಗಳ ಪದೇ ಪದೇ ನಿರ್ವಹಣೆಯ ಖರ್ಚು,ಹಾಳಾದ ರಸ್ತೆಗಳಲ್ಲಿ ವಾಹನ ಚಲಾಯಿಸುವಲ್ಲಿ ಕೊಂಚ ಮೈ ಮರೆತರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.ಹೀಗಾಗಿ ಈ ರಸ್ತೆಯ ಮೇಲೆ ಹೋಗುವವರು ಮೈ ತುಂಬಾ ಕಣ್ಣಾಗಿಸಿಕೊಂಡು ಹೋಗಬೇಕಾಗಿದೆ. ತಾಲೂಕಿನಲ್ಲಿನ ರಾಜ್ಯ ಹೆದ್ದಾರಿ,ಜಿಲ್ಲಾ ಮುಖ್ಯ ರಸ್ತೆಗಳು,ಜಿಪಂ ರಸ್ತೆಗಳು,ಗ್ರಾಮೀಣ ಮತ್ತು ರೈತ ಸಂಪರ್ಕ ಗಳೆಲ್ಲವೂ ಹದಗೆಟ್ಟು ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ.ಪ್ರತಿವರ್ಷ ರಸ್ತೆಗಳ ಗುಂಡಿ ಮುಚ್ಚಲು,ದುರಸ್ತಿಗಾಗಿ ಲಕ್ಷಾಂತರ ರೂಪಾಯಿ ಹಣ ವ್ಯರ್ಥವಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂಬುದು ಸಾರ್ವಜನಿಕರ ದೂರಾಗಿದೆ.ಈಗಲಾದರೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಮಳೆಗಾಲ ಮುಗಿದ ಮೇಲೆ ಎಚ್ಚೆತ್ತುಕೊಂಡು ಹಾಳಾದ ರಸ್ತೆಗಳ ದುರಸ್ತಿಗೆ ಮುಂದಾಗಬೇಕೆಂಬುದು ವಾಹನ ಸವಾರರ ಹಾಗೂ ಸಾರ್ವಜನಿಕರ ಆಗ್ರಹವಾಗಿದೆ. ಬೇಸಿಗೆಯಲ್ಲಿ ರಸ್ತೆಗಳ ಗುಂಡಿಗಳನ್ನು ಮುಚ್ಚಲು ತೇಪೆ ಹಚ್ಚುವ ಕೆಲಸ ಮಾಡುತ್ತಾರೆ,ಇದರಿಂದ ಲಕ್ಷಾಂತರ ರೂಪಾಯಿ ಹಣ ಖರ್ಚು ತೆರಿಗೆ ಹಣ ವ್ಯರ್ಥ,ಸಂಬಂಧ ಪಟ್ಟ ಇಲಾಖೆಯವರು ಶಾಶ್ವತ ಪರಿಹಾರದ ಕ್ರಮ ಕೈಗೊಳ್ಳಬೇಕು. (ಪಿ.ಗಣೇಶ ವಾಹನ ಸವಾರ).