ಸುದ್ಧಿಕನ್ನಡ ವಾರ್ತೆ
ಗೋವಾದ ಸಾಂಸಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಗಣೇಶ ಚತುರ್ಥಿಯು ಪ್ರತಿಯೊಂದು ಕುಟುಂಬದ ಪುನರ್ಮಿಲನ, ಸಾಮಾಜಿಕ ಕೂಟಗಳಿಗೆ ಒಗ್ಗೂಡಿಸುವ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಭಾರತದ ಇತರ ಭಾಗಗಳಿಗಿಂತ ಕೊಂಚ ಭಿನ್ನವಾಗಿ ಗೋವಾದಲ್ಲಿ ಗಣೇಶ ಹಬ್ಬದ ಆಚರಣೆಗಳು ಸಂಪ್ರದಾಯಗಳು ಆಳವಾಗಿ ಬೇರೂರಿದೆ.
ಗೋವಾದಲ್ಲಿ ಗಣೇಶ ಚತುರ್ಥಿಗೆ ಸಿದ್ಧತೆಗಳು ಹಲವು ದಿನಗಳ ಮುಂಚಿತವಾಗಿಯೇ ಆರಂಭಗೊಳ್ಳುತ್ತದೆ. ಪ್ರತಿಯೊಂದು ಕುಟುಂಬಗಳು ತಮ್ಮ ಮನೆಗಳಿಗೆ ಸುಣ್ಣ ಬಣ್ಣ ಬಡಿದು ಗಣೇಶನನ್ನು ಬರಮಾಡಿಕೊಳ್ಳಲು ಸಿದ್ಧತೆ ಆರಂಭಿಸುತ್ತಾರೆ. ರಾಜ್ಯಾದ್ಯಂತ ಸಂಭ್ರಮದ ವಾತಾವರಣ ಸೃಷ್ಠಿಯಾಗುತ್ತದೆ.
ಗೋವಾದಲ್ಲಿ ಗಣೇಶನ ಪ್ರತಿಷ್ಠಾಪಿಸುವ ಮೇಲ್ಭಾಗದಲ್ಲಿ ಫಲಾವಳಿಗಳನ್ನು ಆಕರ್ಷಣೀಯವಾಗಿ ಕಟ್ಟುವ ಪದ್ಧತಿಯಿದೆ. ಫಲಾವಳಿ ಸ್ಫರ್ಧೆಯೂ ಕೂಡ ನಡೆಯುತ್ತದೆ. ಬಗೆ ಬಗೆಯ ಹಣ್ಣು ಹಂಪಲುಗಳನ್ನು ಫಲಾವಳಿಯಾಗಿ ಕಟ್ಟಲಾಗುತ್ತದೆ. ಗಣೇಶನ ಆಗಮನದಿಂದ ಹಿಡಿದು ವಿಸರ್ಜನೆಯ ವರೆಗೂ ಕುಟುಂಬದವರೆಲ್ಲರೂ ಒಗ್ಗೂಡಿ ಪೂಜೆ ನೆರವೇರಿಸುವುದು ವಿಶೇಷ. ಗಣೇಶನಿಗೆ ಭಜನೆ, ಆರತಿ ಸೇವೆಯಂತೂ ಖಡ್ಡಾಯವಾಗಿ ನಡೆಸುವ ಸಂಪ್ರದಾಯವೇ ಇದೆ.
ಗೋವಾದಲ್ಲಿ ಗಣೇಶ ಪೂಜೆಯಲ್ಲಿ ಕರ್ನಾಟಕದ ವೈದಿಕರು…
ಗೋವಾದಲ್ಲಿ ಗೌರಿ ಗಣೇಶ ಹಬ್ಬ ಬಂತೆಂದರೆ ಸಂಭ್ರಮವೋ ಸಂಭ್ರಮ. ಗೋವಾದಲ್ಲಿ ಹಿಂದೂಗಳು ಮನೆ ಮನೆಗಳಲ್ಲಿ ಮಣ್ಣಿನ ಗಣಪನನ್ನು ತಂದು ಪೂಜಿಸಿ ವಿಸರ್ಜಿಸಲಾಗುತ್ತದೆ. ಗೋವಾದಲ್ಲಿ ಗಣೇಶನ ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಅದರಲ್ಲೂ ಮುಖ್ಯವಾಗಿ ಉತ್ತರಕನ್ನಡ ಜಿಲ್ಲೆಯಿಂದಲೇ ವೈದಿಕರು ಗೋವಾಕ್ಕೆ ಬರುವುದು ವಿಶೇಷವಾಗಿದೆ. ಪ್ರತಿ ವರ್ಷ ಗಣೇಶನ ಪೂಜೆಗೆ ಗೋವಾಕ್ಕೆ ಉತ್ತರಕನ್ನಡ ಜಿಲ್ಲೆಯಿಂದಲೇ ಸುಮಾರು 500 ಕ್ಕೂ ಹೆಚ್ಚು ಜನ ವೈದಿಕರು ಗೋವಾಕ್ಕೆ ಬರುತ್ತಾರೆ. ಗೋವಾದಲ್ಲಿ ಗಣೇಶನ ಪೂಜೆಗೆ ಮತ್ತು ವಿಸರ್ಜನೆಗೆ ಪ್ರತಿಯೊಂದೂ ಮನೆಯಲ್ಲಿ ವೈದಿಕರಿಂದಲೇ ಪೂಜೆ ನೆರವೇರಿಸುತ್ತಾರೆ. ಇದರಿಂದಾಗಿ ಗೋವಾದಲ್ಲಿ ಸ್ಥಳೀಯವಾಗಿ ಇಷ್ಟೊಂದು ಸಂಖ್ಯೆಯಲ್ಲಿ ವೈದಿಕರು ಇಲ್ಲದ ಕಾರಣ ಕರ್ನಾಟಕದ ವಿವಿಧ ಭಾಗಗಳಿಂದ ಅದರಲ್ಲೂ ವಬಹು ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ವೈದಿಕರು ಗೋವಾಕ್ಕೆ ಆಗಮಿಸುತ್ತಾರೆ.
ಕಳೆದ ಅನೇಕ ವರ್ಷಗಳಿಂದ ಕರ್ನಾಟಕದಿಂದಲೇ ಗೋವಾಕ್ಕೆ ಬಂದು ವೈದಿಕರು ಗೌರಿ ಗಣೇಶ ಚತುರ್ಥಿಯನ್ನು ಸಾಂಗವಾಗಿ ಸೆರವೇರಿಸಿ ಕೊಡುತ್ತಾ ಬಂದಿರುವುದು ಹೆಮ್ಮೆಯ ಸಂಗತಿ. ಗೋವಾದ ಬಹುತೇಕ ದೇವಸ್ಥಾನಗಳಲ್ಲಿ ಕರ್ನಾಟಕದ ವೈದಿಕರನ್ನೇ ಹೆಚ್ಚಾಗಿ ಕಾಣಬಹುದಾಗಿದೆ. ಈ ವೈದಿಕರು ತಮ್ಮ ತಮ್ಮ ಊರು ಮತ್ತು ಪೂಜಾ ಕಾರ್ಯಕ್ರಮಕ್ಕೆ ಅಗತ್ಯವಿರುವಂತೆ ತಮ್ಮ ಊರಿನಿಂದ ವೈದಿಕರನ್ನು ಕರೆಯಿಸಿಕೊಳ್ಳುತ್ತಾರೆ. ಈ ಮೂಲಕವಾಗಿ ಗೋವಾದಲ್ಲಿ ಗಣೇಶನ ಪೂಜೆಯನ್ನು ವೈದಿಕರ ಮೂಲಕವೇ ನೆರವೇರಿಸಲಾಗುತ್ತದೆ.
ಇದೀಗ ಗಣೇಶ ಹಬ್ಬಕ್ಕೆ ಕೆಲವೇದಿನಗಳು ಬಾಕಿ ಇದ್ದು, ಗೋವಾದಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಗಣೇಶನ ಬರಮಾಡಿಕೊಳ್ಳಲು ಮನೆ ಮನೆಯಲ್ಲೂ ಸಿದ್ಧತೆ ನಡೆಯುತ್ತಿದೆ