ಸುದ್ಧಿಕನ್ನಡ ವಾರ್ತೆ
ಶಿರಸಿ: ದೇಹದಲ್ಲಿ ಹೃದಯವು ರಕ್ತದ ಕಲ್ಮಶಗಳನ್ನು ಶುಧ್ಧೀಕರಿಸಿ ಕಳುಹಿಸುತ್ತದೆ. ಹಾಗೆಯೇ ದೇವಸ್ಥಾನಗಳು ಕೂಡ ಕೆಟ್ಟ ಮನಸ್ಸುಗಳನ್ನು ಶುದ್ಧೀಕರಿಸಿ ಕಳುಹಿಸುತ್ತದೆ. ದೇವಸ್ಥಾನಗಳು ಸಮಾಜದ ಹೃದಯವಿದ್ದಂತೆ ಎಂದು ಶಿರಸಿಯಲ್ಲಿ ಸೋಂದಾ ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ದೇವಾಲಯ ಸಂವರ್ಧನಾ ಸಮೀತಿ ಹಮ್ಮಿಕೊಂಡ ದೇವಾಲಯ ಆಡಳಿತ ಮಂಡಳಿ ಚಿಂತನಾ ಸಭೆಯ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.
ಹೃದಯ ಕೆಟ್ಟರೆ ಉಳಿದ ಭಾಗಗಳಿಗೆ ತೊಂದರೆ, ಹಾಗೆಯೇ ದೇವಸ್ಥಾನ ಹಾಳಾದರೂ ಸಮಾಜದಲ್ಲಿ ಸಮಸ್ಯೆಯಾಗುತ್ತದೆ. ದೇವಸ್ಥಾನಗಳು ಸಮಾಜದ ಹೃದಯವಿದ್ದಂತೆ.ದೇವಸ್ಥಾನದಲ್ಲಿ ಭಗವಧ್ಗೀತೆ ಅಳವಡಿಸಿಕೊಳ್ಳಬೇಕು. ಗೀತಾ ಜಂಯಂತಿಯಂದು ಆರಂಭಿಸಿ ನಂತರ ನಿರಂತರತೆ ಇಟ್ಟುಕೊಳ್ಳಬೇಕು. ದೇವಸ್ಥಾನಗಳಲ್ಲಿ ಶಾಂತತೆ ಸ್ವಚ್ಛತೆ ತರಬೇಕು. ಧರ್ಮಗೃಂಥದ ಪಠಣ ಆಗಬೇಕು. ಅದು ದೇವಸ್ಥಾನದ ಶಕ್ತಿಗೆ ಪೂರಕವಾಗುತ್ತದೆ ಎಂದು ಸ್ವರ್ಣವಲ್ಲೀ ಶ್ರೀಗಳು ನುಡಿದರು.
ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಧ್ಯಾನ,ಯೋಗ ದಿನಾಚರಣೆ ಸಹಿತ ಜನರ ಹಿತದ ಚಿಂತನೆ ದೇವಾಲಯದಲ್ಲಿ ಆಗಬೇಕು. ದೇವಸ್ಥಾನಗಳು ಒಂದಷ್ಟು ಕಾರ್ಯ ಯೋಜನೆ ಹಾಕಿಕೊಳ್ಳಬೇಕು. ದೇವಸ್ಥಾನ ಸರ್ಕಾರೀಕರಣ ಆಗದಂತೆ ನೋಡಿಕೊಳ್ಳಬೇಕು. ದೇವಸ್ಥಾನಗಳಿಗೆ ಸ್ವಯತ್ತತೆ ಕೊಡುವ ಕಾನೂನು ಇಲ್ಲವಾಗಿದೆ. ಕಾನೂನು ಅತಂತ್ರತೆ ಇದ್ಧಾಗಲೇ ಸರ್ಕಾರೀಕರಣ ಆಗುವಂತಾಗಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ಪ್ರಾಂತ ಕಾರ್ಯವಾಹಕ ರಾಘವೇಂದ್ರ ಕವಾಡ ಮುಖ್ಯ ವಕ್ತಾರರಾಗಿ ಮಾತನಾಡಿದರು. ಮಾರಿಕಾಂಬಾ ಧರ್ಮದರ್ಶಿ ಮಂಡಳದ ಅಧ್ಯಕ್ಷ ಆರ್.ಜಿ. ನಾಯಕ, ಜಿಲ್ಲಾ ಸಂಯೋಜಕ ವಿಲ್ ಹೆಗಡೆ ಬೊಮ್ನಳ್ಳಿ, ಶ್ರೀಕಾಂತ ಅಗಸಾಲ, ಸತ್ಯನಾರಾಯಣ ಭಟ್, ಸಂಘಟನಾ ಮಂತ್ರ ಹೇಳಿದರು. ಶ್ರೀನಿವಾಸ್ ಹೆಬ್ಬಾರ್ ಮತ್ತು ಹೇಮಾ ಹೆಬ್ಬಾರ್ ದಂಪತಿಗಳು ಫಲ ಸಮರ್ಪಿಸಿದರು.
ಇದೇ ವೇಳೆ ಶ್ರೀ ರಾಘವೇಂದ್ರ ಮಠದಲ್ಲಿ ನೂತನವಾಗಿ ಜೀವಜಲ ಕಾರ್ಯಪಡೆ ಅಧ್ಯಕ್ಷರಾದ ಶ್ರೀನಿವಾಸ್ ಹೆಬ್ಬಾರ್ ನಿರ್ಮಿಸಿರುವ ಮಠದ ನೂತನ ಕಾರ್ಯಾಲಯವನ್ನು ಶ್ರೀ ಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿ ನೆರವೇರಿಸಿದರು.