ಸುದ್ಧಿಕನ್ನಡ ವಾರ್ತೆ

ಮುದ್ದೇಬಿಹಾಳ: ತಾಲೂಕಿನ ಚೊಂಡಿ ಗ್ರಾಮದ ಖಾಸೀಂಸಾಬ್ ಎನ್ನುವವರ ಜಮೀನಿನಲ್ಲಿರುವ 50 ಅಡಿ ಆಳವಾದ ತೆರೆದ ಬಾವಿಯಲ್ಲಿ ಕಾಲು ಜಾರಿ ಬಿದ್ದಿದ್ದ ಹಸುವನ್ನು ಮುದ್ದೇಬಿಹಾಳದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಪರಿಶ್ರಮದಿಂದ ಮೇಲೆತ್ತುವ ಮೂಲಕ ಹಸುವಿಗೆ ಜೀವದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಬಾವಿಯಲ್ಲಿರುವ ನೀರಿನಲ್ಲಿ ಬಿದ್ದಿದ್ದ ಹಸು ಉಸಿರಾಡಲು ಸಾಕಷ್ಟು ಹೆಣಗುತ್ತಿತ್ತು. ಮಾಹಿತಿ ದೊರೆತ ಕೂಡಲೇ ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಸ್ಥಳೀಯರ ನೆರವಿನೊಂದಿಗೆ ಬಾವಿಯೊಳಗೆ ಇಳಿದು, ಹಗ್ಗ ಮತ್ತು ಪಟ್ಟಿ ಬಳಸಿ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿದರು.

ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಮೇಶ್ ಚಾಳಣ್ಣನವರ, ಪ್ರಮುಖ ಅಗ್ನಿಶಾಮಾಕ ಸುಭಾಸ ರಾಠೋಡ, ಅಗ್ನಿಶಾಮಕ ವಾಹನ ಚಾಲಕ ಸಿದ್ದಣ್ಣ ಪೋಲೇಶಿ, ಅಗ್ನಿಶಾಮಕ ಸಿಬ್ಬಂದಿ, ಸ್ಥಳಿಯರು ಪಾಲ್ಗೊಂಡಿದ್ದರು.