ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹನುಮಾನಲೇನ್ ಶಾಲೆಯಲ್ಲಿ ಸಡಗರ ಸಂಭ್ರಮದಿಂದ 77 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಗಣರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಚಿಕುಮಾರ ನಾಯರ ನೆರವೇರಿಸಿ ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು,ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನರವರು ಭಾರತದ ಸಂವಿಧಾನವು ಜಾರಿಗೆ ಬಂದು,ದೇಶವು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಬದಲಾಯಿತು.ಡಾ ಬಿ ಆರ್ ಅಂಬೇಡ್ಕರ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನವು ಪ್ರಜೆಗಳಿಗೆ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ನೀಡಿದೆ.ಅಗಸ್ಟ್ 15,1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ,ಸ್ವಂತ ಕಾನೂನು ವ್ಯವಸ್ಥೆ ಅಸ್ತಿತ್ವಕ್ಕೆ ಬಂದದ್ದು ಜನವರಿ 26, 1950 ರಂದು.ರಾಜಪ್ರಭುತ್ವವನ್ನು ತ್ಯಜಿಸಿ,ಪ್ರಜೆಗಳೇ ಪ್ರಭುಗಳಾಗುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಣರಾಜ್ಯೋತ್ಸವ ಪ್ರತಿನಿಧಿಸುತ್ತದೆ.ದೇಶದ ವೈವಿಧ್ಯತೆಯಲ್ಲಿ ಏಕತೆಯನ್ನು ಎತ್ತಿಹಿಡಿಯುತ್ತದೆ. ಸಂವಿಧಾನ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ದೇಶದ ಪ್ರಗತಿಯನ್ನು ಸ್ಮರಿಸುವ ದಿನವಾಗಿದೆ.ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ದೇಶದ ಅಭಿವೃದ್ಧಿಗೆ ಕೈ ಜೋಡಿಸುವುದು ಈ ದಿನದ ನಿಜವಾದ ಮಹತ್ವ ಎಂದು ಹೇಳಿದರು.

ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿ ಮಾತನಾಡಿ ಭಾರತದ ಗಣರಾಜ್ಯೋತ್ಸವವು ಪ್ರತಿವರ್ಷ ಜನವರಿ 26 ರಂದು ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಹಬ್ಬವಾಗಿದೆ.1950 ರ ಇದೇ ದಿನದಂದು ಭಾರತದ ಸಂವಿಧಾನ ಜಾರಿಗೆ ಬಂದು ದೇಶವು ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವಾಯಿತು.ಈ ದಿನವು ಸ್ವಾತಂತ್ರ್ಯ ಹೋರಾಟಗಾರನ್ನು ಸ್ಮರಿಸುತ್ತಾ ಸಂವಿಧಾನದ ಮೌಲ್ಯಗಳಾದ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ,ದೇಶದ ಏಕತೆ ಹಾಗೂ ಪ್ರಗತಿಯನ್ನು ಸಂಭ್ರಮಿಸುವ ವಿಶೇಷ ದಿನ ಎಂದು ಹೇಳಿದರು. ಶಾಲೆಯ ಸಹ ಶಿಕ್ಷಕಿಯರಾದ ನಾಗರತ್ನಾ ಮೊಗೇರ,ಸುನಿತಾ ಆರ್,ಅನಿಸ್ ಫಾತಿಮಾ,ಸಂಜನಾ ಮಿರಾಶಿ ಇವರುಗಳ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳಿಗೆ ಸಿಹಿಯನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿಯಾದ ಶಕುಂತಲಾ ಕುಡ್ತರಕರ,ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ವಿನಂತಿ ಸೋಲೆಕರ,ಸದಸ್ಯರುಗಳು, ಹಿರಿಯರಾದ ಅನಂತ ನಾಯ್ಕ ಇನ್ನಿತರ ಪ್ರಮುಖರು, ಪಾಲಕರು,ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿರವರು ನಿರ್ವಹಿಸಿದರೆ,ನಿರೂಪಣೆ, ವಂದನಾರ್ಪಣೆಯನ್ನು ಸಹ ಶಿಕ್ಷಕಿಯಾದ ನಾಗರತ್ನಾ ಮೊಗೇರ ನಡೆಸಿಕೊಟ್ಟರು.