ಸುದ್ದಿ ಕನ್ನಡ ವಾರ್ತೆ
​ಬೆಂಗಳೂರು: ಶನಿವಾರ ನಡೆದಿದ್ದ ಐಪಿಎಲ್ 2026 ರ ಆರಂಭಿಕ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಮೋಘ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸುವ ಮೂಲಕ ಐಪಿಎಲ್‌ನಲ್ಲಿ ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಿದರು.
​ಪಂದ್ಯದಲ್ಲಿ 69 ರನ್ ಗಳಿಸುವ ಮೂಲಕ, ಐಪಿಎಲ್ ಇತಿಹಾಸದಲ್ಲಿ ಚೇಸಿಂಗ್ ಮಾಡುವಾಗ 4000 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡರು. ಮಾಜಿ ಆಟಗಾರ ಡೇವಿಡ್ ವಾರ್ನರ್ (3285) ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ (3285) ಮೂರನೇ ಸ್ಥಾನದಲ್ಲಿದ್ದಾರೆ.

​ಐಪಿಎಲ್ ರನ್-ಚೇಸ್‌ನಲ್ಲಿ ಅತಿ ಹೆಚ್ಚು ರನ್‌ಗಳು: ವಿರಾಟ್ ಕೊಹ್ಲಿ: 125 ಇನಿಂಗ್ಸ್ ಗಳಲ್ಲಿ 4027 ರನ್‌ಗಳು, ಡೇವಿಡ್ ವಾರ್ನರ್: 97 ಇನಿಂಗ್ಸ್ ಗಳಲ್ಲಿ 3285 ರನ್ ಗಳು, ರೋಹಿತ್ ಶರ್ಮಾ: 129 ಇನಿಂಗ್ಸ್ ಗಳಲ್ಲಿ 3238 ರನ್‌ಗಳು, ಶಿಖರ್ ಧವನ್: 94 ಇನಿಂಗ್ಸ್ ಗಳಲ್ಲಿ 2843 ರನ್‌ಗಳು, ರಾಬಿನ್ ಉತ್ತಪ್ಪ: 115 ಇನ್ನಿಂಗ್ಸ್ ಗಳಲ್ಲಿ 2832 ರನ್‌ಗಳು.
​ಇದು ಮಾತ್ರವಲ್ಲದೆ ಐಪಿಎಲ್ ಟೂರ್ನಿಯಲ್ಲಿ ಎಸ್‌ಆರ್‌ಎಚ್ ತಂಡದ ವಿರುದ್ಧ ವಿರಾಟ್ ಕೊಹ್ಲಿ 874 ರನ್ ಬಾರಿಸುವ ಮೂಲಕ ಸಂಜು ಸ್ಯಾಮ್ಸನ್ ಅವರ ದಾಖಲೆಯನ್ನು ಮುರಿದರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಖ್ಯಾತಿ ಹೊಂದಿರುವ ವಿರಾಟ್ ಕೊಹ್ಲಿ ಒಟ್ಟು 64 ಅರ್ಧಶತಕಗಳನ್ನು ಗಳಿಸಿದ್ದಾರೆ. ಎಂಟು ಶತಕಗಳು ಅವರ ಹೆಸರಿನಲ್ಲಿವೆ. ಎರಡನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ 62 ಅರ್ಧಶತಕಗಳನ್ನು ಗಳಿಸಿದ್ದರು.
​ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸನ್ ರೈಸರ್ಸ್ ತಂಡ ನಾಯಕ ಇಶಾನ್ ಕಿಶನ್ ಅವರ ಅರ್ಧಶತಕ ಬಲದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 201 ರನ್ ಗಳಿಸಿತು. ಈ ಸವಾಲಿನ ಮೊತ್ತವನ್ನು ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಬಾರಿಸಿ ಸುಲಭವಾದ ಗೆಲುವು ತನ್ನದಾಗಿಸಿಕೊಂಡಿತು.
​ಪಂದ್ಯದಲ್ಲಿ ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ 202 ರನ್ ಚೇಸ್ ಮಾಡುವ ಮೂಲಕ ಗೆಲುವು ಸಾಧಿಸಿತು. 15.4 ಓವರ್‌ಗಳಲ್ಲಿ 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟುವ ಮೂಲಕ, ಆರ್‌ಸಿಬಿ ದಾಖಲೆ ಬರೆದಿದೆ.