ಸುದ್ದಿ ಕನ್ನಡ ವಾರ್ತೆ

. ಮುಂಬೈ:ಮಹಾರಾಷ್ಟ್ರ ರಾಜ್ಯದ ಜನಪ್ರಿಯ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾ‌ರ್ ಅವರ ಅಂತ್ಯಕ್ರಿಯೆಯು ಗುರುವಾರ ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಅವರ ಕುಟುಂಬಸ್ಥರು, ಬೆಂಬಲಿಗರು ಮತ್ತು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಹಿರಿಯ ನಾಯಕನಿಗೆ ಕಣ್ಣೀರಿನ ವಿದಾಯ ಹೇಳಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ ಶಿಂಧೆ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಕೇಂದ್ರ ಸಚಿವರಾದ ಅಮಿತ್ ಶಾ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸೇರಿದಂತೆ ಹಲವು ಪ್ರಮುಖ ನಾಯಕರು ಅಜಿತ್ ಪವಾರ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.

ನಂತರ ಪವಾ‌ರ್ ಅವರ ಪುತ್ರರಾದ ಪಾರ್ಥ ಮತ್ತು ಜಯ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.ಅಜಿತ್‌ ಪವಾ‌ರ್ ಅವರ ಪತ್ನಿ ಸುನೇತ್ರಾ ಪವಾ‌ರ್ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬೆಂಬಲಿಗರು “ಅಜಿತ್ ದಾದಾ ಅಮರ್ ರಹೇ” ಮತ್ತು “ಅಜಿತ್‌ ದಾದಾ ಮರಳಿ ಬನ್ನಿ” ಎಂದು ಘೋಷಣೆಗಳನ್ನು ಕೂಗಿದರು.”ಈಗಾಗಲೇ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ವಿಮಾನದ ‘ಬ್ಲ್ಯಾಕ್ ಬಾಕ್ಸ್’ ಪತ್ತೆಯಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.