ಸುದ್ದಿ ಕನ್ನಡ ವಾರ್ತೆ
ಬಂಡಿಪುರ: ಮೇವಿನ ಬೀಜ ಸಂಗ್ರಹಿಸಲು ತೆರಳಿದ್ದ ವೇಳೆ ಹುಲಿ ದಾಳಿಗೆ ಅರಣ್ಯ ಇಲಾಖೆ ನೌಕರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮರಳಳ್ಳ ಕಳ್ಳಬೇಟೆ ಶಿಬಿರದ ಬಳಿ ನಡೆದಿದೆ.
ಹುಣಸೂರು ತಾಲೂಕು ನೇರಳೆಕುಪ್ಪೆ ಗ್ರಾಮ ನಿವಾಸಿ, ಬಂಡೀಪುರ ಅರಣ್ಯ ವಲಯ ವ್ಯಾಪ್ತಿಯ ಮರಳಳ್ಳ ಕಳ್ಳಬೇಟೆ ಶಿಬಿರದ ನೌಕರ ಸಣ್ಣಹೈದ(56) ಮೃತಪಟ್ಟ ನೌಕರ.
ಈತ ಸಹದ್ಯೋಗಿಗಳೊಂದಿಗೆ ಮೇವಿನ ಬೀಜ ಸಂಗ್ರಹಿಸಲು ತೆರಳಿದ್ದ ವೇಳೆ ಮರಳಳ್ಳ ಶಿಬಿರದ ರಸ್ತೆ ಬದಿಯಲ್ಲೇ ಹುಲಿ ದಾಳಿ ನಡೆಸಿದ್ದು, ಜೊತೆಯಲ್ಲಿದ್ದವರು ಕೂಗಿಕೊಂಡಿದ್ದಾರೆ. ಆದರೆ ದಾಳಿಯಿಂದ ತೀವ್ರಗಾಯವಾಗಿ ಗಾಯಗೊಂಡ ಸಣ್ಣಹೈದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಂತರ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಅರಣ್ಯ ಇಲಾಖೆ ನೌಕರರು ಇಲಾಖೆ ವಾಹನದಲ್ಲೇ ಮೃತದೇಹವನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.
ಮೃತ ಸಣ್ಣಹೈದ ಬಂಡೀಪುರದ ರಾಂಪುರ ಆನೆ ಶಿಬಿರ, ಹುಣಸೂರಿನಲ್ಲಿ ಸಾಕಾನೆ ಶಿಬಿರದಲ್ಲಿ ಮಾವುತನಾಗಿ ಕೆಲಸ ನಿರ್ವಹಿಸಿದ್ದರು. ಎರಡು ವರ್ಷದ ಹಿಂದೆಯಷ್ಟೆ ಬಂಡೀಪುರಕ್ಕೆ ವರ್ಗವಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರಿಗೆ ಪತ್ನಿ, ಅರಣ್ಯ ಇಲಾಖೆ ನೌಕರ ಜಡೆಯ, ಸೇರಿ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ.
ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆ ಆವರಣಕ್ಕೆ ಆಗಮಿಸಿದ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ಮಾತನಾಡಿ, ಅರಣ್ಯ ಇಲಾಖೆಯಿಂದ ೩೦ ಲಕ್ಷ ಪರಿಹಾರ, ೧೦ ಲಕ್ಷ ಗುಂಪು ವಿಮೆ, ಮೃತರ ಕುಟುಂಬದ ಒಬ್ಬರಿಗೆ ಅನುಕಂಪದ ನೌಕರಿ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
