ಸುದ್ದಿ ಕನ್ನಡ ವಾರ್ತೆ
ಪೀಠಿಕೆ: ಒಂದು ಕಾಲದಲ್ಲಿ “ಚಿನ್ನದ ಹಕ್ಕಿ” (ಸೋನೆಯ ಕಿ ಚಿಡಿಯಾ) ಎಂದು ಕರೆಯಲ್ಪಡುತ್ತಿದ್ದ ಭಾರತವು ಕೇವಲ ತನ್ನ ಸಮೃದ್ಧಿಯಿಂದಾಗಿ ಶ್ರೇಷ್ಠವಾಗಿರಲಿಲ್ಲ, ಆದರೆ ತನ್ನ ಸನಾತನ ಸಂಸ್ಕೃತಿ, ಧರ್ಮನಿಷ್ಠ ಜೀವನಶೈಲಿ, ಶೌರ್ಯ ಮತ್ತು ವೀರತನದಿಂದ ಕೂಡಿದ ಆಡಳಿತದಿಂದಾಗಿ ಶ್ರೇಷ್ಠವಾಗಿತ್ತು. ಇಂದು ಭಾರತವು ತಂತ್ರಜ್ಞಾನ ಮತ್ತು ಯುದ್ಧತಂತ್ರದಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದೆ.‘ಆಪರೇಶನ್ ಸಿಂಧೂರ್’ ಮೂಲಕ ಭಾರತೀಯ ಸೇನೆಗಳು ತಮ್ಮ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಿವೆ, ಆದರೂ ದೇಶದ ಮುಂದಿರುವ ಸವಾಲುಗಳು ಕಡಿಮೆಯಾಗುತ್ತಿಲ್ಲ. ಭಾರತವು ಎಷ್ಟು ವೇಗವಾಗಿ ಮುಂದುವರೆಯುತ್ತಿದೆಯೋ, ಅಷ್ಟೇ ವೇಗವಾಗಿ ಬಾಹ್ಯ ಮತ್ತು ಆಂತರಿಕ ಶತ್ರುಗಳ ಸವಾಲುಗಳು ಉಲ್ಬಣಗೊಳ್ಳುತ್ತಿವೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ ಘಟನೆಯು ರಾಷ್ಟ್ರದ ಏಕತೆ, ಭದ್ರತೆ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ದುರ್ಬಲಗೊಳಿಸುವವರ ಬಗ್ಗೆ ಎಚ್ಚರದಿಂದ ಇರುವುದು ಅತ್ಯಂತ ಅವಶ್ಯಕವಾಗಿದೆ ಎಂದು ಸ್ಪಷ್ಟಪಡಿಸಿದೆ. ಇಂತಹ ಸಮಯದಲ್ಲಿ ಭಾರತದ ಹುಸಿ ಜಾತ್ಯತೀತತೆ ಮತ್ತು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಮಾಡಲಾಗುವ ತುಷ್ಟೀಕರಣವು ದೇಶವನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಆದ್ದರಿಂದ, ಭಾರತವು ಮತ್ತೆ ವಿಶ್ವ ಕಲ್ಯಾಣಕಾರಿ ‘ಸನಾತನ ರಾಷ್ಟ್ರ’ವಾಗಿ ನಿಲ್ಲುವುದು ಕಾಲದ ಅಗತ್ಯವಾಗಿದೆ. ಇದೇ ಉದ್ದೇಶದಿಂದ ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ಪ್ರಸ್ತುತಿ ಮತ್ತು ‘ಸನಾತನ ಸಂಸ್ಥೆ’ಯ ಆಯೋಜನೆಯಲ್ಲಿ ‘ಶಂಖನಾದ ಮಹೋತ್ಸವ’ವನ್ನು 2025 ರ ಡಿಸೆಂಬರ್ 13 ಮತ್ತು 14 ರಂದು ನವ ದೆಹಲಿಯಲ್ಲಿರುವ ‘ಭಾರತ ಮಂಟಪಂ’(ಇಂದ್ರಪ್ರಸ್ಥ) ನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ. ಈ ಆಯೋಜನೆಯು ಅಧ್ಯಾತ್ಮದ ತೇಜಸ್ವಿ ಪ್ರಸಾರ ಮಾಡುವ ‘ಸನಾತನ ಸಂಸ್ಥೆ’ಯ ರಜತ ಮಹೋತ್ಸವದ ವಿಶೇಷ ಸಂದರ್ಭವೂ ಆಗಿದೆ.
ನವ ದೆಹಲಿಯಲ್ಲಿ ಈ ಆಯೋಜನೆ ನಡೆಯುವುದು ಸಹ ಮಹತ್ವಪೂರ್ಣವಾಗಿದೆ, ಏಕೆಂದರೆ ದೆಹಲಿಯು ಕೇವಲ ಭಾರತದ ರಾಜಧಾನಿ ಮಾತ್ರವಲ್ಲದೇ, ರಾಜಕೀಯ, ಆಡಳಿತಾತ್ಮಕ ಮತ್ತು ಸಾಮಾಜಿಕ ನಿರ್ಧಾರಗಳ ಕೇಂದ್ರವಾಗಿದೆ. ಇಲ್ಲಿಂದ ಪ್ರಸಾರವಾಗುವ ಸನಾತನ ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯ ಸಂದೇಶವು ಇಡೀ ರಾಷ್ಟ್ರದಲ್ಲಿ ಪ್ರಭಾವಶಾಲಿ ಪ್ರತಿಧ್ವನಿಯನ್ನು ಉಂಟುಮಾಡುತ್ತದೆ. ಇದರ ಪರಿಣಾಮವು ರಾಷ್ಟ್ರೀಯ ಏಕತೆ, ಶೌರ್ಯ ಮತ್ತು ನಾಗರಿಕ ಪ್ರಜ್ಞೆಯ ಬಲವರ್ಧನೆಯ ರೂಪದಲ್ಲಿ ಹೊರಬರುತ್ತದೆ. ಈ ಮಹೋತ್ಸವವು ಧರ್ಮನಿಷ್ಠ ಜೀವನಮೌಲ್ಯಗಳ ಉತ್ಸವವಾಗಿರುವುದಲ್ಲದೆ, ಇತ್ತೀಚಿನ ಭಯೋತ್ಪಾದಕ ಘಟನೆಗಳ ಹಿನ್ನೆಲೆಯಲ್ಲಿ ಸಮಾಜಕ್ಕೆ ಜಾಗೃತಿ ಮತ್ತು ಸಾಮೂಹಿಕ ಭದ್ರತೆಯ ಸಂದೇಶವನ್ನೂ ನೀಡಲಿದೆ.
ಮುಖ್ಯ ಆಯೋಜನೆ ಮತ್ತು ಪ್ರದರ್ಶನ: ಮುಖ್ಯ ಕಾರ್ಯಕ್ರಮವು ಡಿಸೆಂಬರ್ 13 ಮತ್ತು 14 ರಂದು ಭಾರತ ಮಂಟಪಮನ ಮುಖ್ಯ ಕನ್ವೆನ್ಶನ್ ಸಭಾಂಗಣದಲ್ಲಿ ನಡೆಯಲಿದ್ದು, ಇದರಲ್ಲಿ “ಸನಾತನ ಸಂಸ್ಕೃತಿ ಸಂವಾದ”ದ ಅಡಿಯಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಕ್ಷಣಾತ್ಮಕ ವಿವಿಧ ಆಯಾಮಗಳ ಕುರಿತು ಚರ್ಚೆ ನಡೆಯಲಿದೆ. “ಎಕ್ಸಿಬಿಶನ್ ಹಾಲ್ 12- A” ನಲ್ಲಿ ಡಿಸೆಂಬರ್ 13 ರಿಂದ 15 ರವರೆಗೆ ಐತಿಹಾಸಿಕ ಶಸ್ತ್ರ ಪ್ರದರ್ಶನ ಮತ್ತು ಸಂಸ್ಕೃತಿ ಪ್ರದರ್ಶನವನ್ನು ಆಯೋಜಿಸಲಾಗುವುದು. ಈ ಪ್ರದರ್ಶನದಲ್ಲಿ ಮೊದಲ ಬಾರಿಗೆ ಛತ್ರಪತಿ ಶಿವಾಜಿ ಮಹಾರಾಜರ ‘ಭವಾನಿ ಖಡ್ಗ’ದ ಪ್ರತ್ಯಕ್ಷ ದರ್ಶನ ಲಭ್ಯವಾಗಲಿದೆ. ಇದರೊಂದಿಗೆ ಸಾಂಪ್ರದಾಯಿಕ ಯುದ್ಧಕಲೆಯ ಜೀವಂತ ಪ್ರಾತ್ಯಕ್ಷಿಕೆಗಳು ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿರುತ್ತವೆ.
ರಾಷ್ಟ್ರಪ್ರೇರಣೆಯ ಸ್ವರಗಳು: ಈ ಮಹೋತ್ಸವದ ಎರಡನೇ ದಿನದಂದು “ವಿಶ್ವ ಕಲ್ಯಾಣಕಾರಿ ಸನಾತನ ರಾಷ್ಟ್ರ” ಕುರಿತು ವಿಶೇಷ ಅಧಿವೇಶನ ನಡೆಯಲಿದ್ದು, ಇದರಲ್ಲಿ ನಕ್ಸಲ್‌ವಾದ, ಭಯೋತ್ಪಾದನೆ ಮತ್ತು ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಷಯಗಳ ಬಗ್ಗೆ ತಜ್ಞರು ವಿಮರ್ಶಿಸಲಿದ್ದಾರೆ. ಭಾರತದ ರಕ್ಷಣಾ ನೀತಿ, ಸಾಂಸ್ಕೃತಿಕ ಪುನರುಜ್ಜೀವನ ಮತ್ತು ರಾಷ್ಟ್ರೀಯ ಆತ್ಮಬಲವನ್ನು ಬಲಪಡಿಸುವ ಮಾರ್ಗೋಪಾಯಗಳ ಕುರಿತು ಗಹನ ಸಂವಾದಗಳು ನಡೆಯಲಿವೆ.
‘ಸನಾತನ ರಾಷ್ಟ್ರ’ದ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕರೆ: ಮಹಾಭಾರತ ಯುದ್ಧಕ್ಕೆ ಮುನ್ನ ಭಗವಾನ ಶ್ರೀಕೃಷ್ಣನು ಧರ್ಮಯುದ್ಧದ ಘೋಷಣೆಯನ್ನು ಶಂಖನಾದದ ಮೂಲಕ ಮಾಡಿದ್ದರು; ಅದೇ ಪ್ರೇರಣೆಯಿಂದ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಈಶ್ವರೀ ಅಧಿಷ್ಠಾನದ ಆಧಾರದ ಮೇಲೆ “ಸನಾತನ ರಾಷ್ಟ್ರ”ದ ನಿರ್ಮಾಣದ ಗುರಿಯನ್ನು ಇರಿಸಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಈ ‘ಶಂಖನಾದ ಮಹೋತ್ಸವ’ವು ಧರ್ಮನಿಷ್ಠ ಸಮಾಜಕ್ಕೆ ಆತ್ಮಶಕ್ತಿ, ನವಚೈತನ್ಯ ಮತ್ತು ರಾಷ್ಟ್ರಸೇವೆಯ ಶಕ್ತಿಯನ್ನು ಒದಗಿಸುತ್ತದೆ.
ಪ್ರತಿಯೊಬ್ಬ ಸನಾತನಿಯು ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್ಯ’ದ ಆದರ್ಶ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸನಾತನ ರಾಷ್ಟ್ರದ ಸಂಕಲ್ಪದಿಂದ ಪ್ರೇರಿತರಾದಾಗ, ಈ ಶಂಖನಾದ ಮಹೋತ್ಸವವು ಕೇವಲ ಒಂದು ಆಯೋಜನೆಯಾಗಿ ಉಳಿಯದೆ, ರಾಷ್ಟ್ರ ರಕ್ಷಣೆ, ಸಾಮಾಜಿಕ ಏಕತೆ ಮತ್ತು ದೈವಿಕ ಪುನರುತ್ಥಾನದ ದಿಕ್ಕಿನಲ್ಲಿ ಒಂದು ಸಶಕ್ತ ಹೆಜ್ಜೆಯಾಗಿ ಸಾಬೀತಾಗುತ್ತದೆ.
ತಮ್ಮ ಸವಿನಯ
ವಿನೋದ್ ಕಾಮತ್,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
