ಸುದ್ದಿ ಕನ್ನಡ ವಾರ್ತೆ
07.09.2025 ಭಾನುವಾರ
ಭಾದ್ರಪದ ಮಾಸದ ಹುಣ್ಣಿಮೆಯಂದು ರಾತ್ರಿ, ಆಗಸದಲ್ಲಿ ಖಗ್ರಾಸ ಚಂದ್ರಗ್ರಹಣ* ಸಂಭವಿಸಲಿದೆ.
ಈ ಚಂದ್ರ ಗ್ರಹಣ ನಮ್ಮ ಭಾರತ ದೇಶದಲ್ಲಿ ಸಂಪೂರ್ಣವಾಗಿ ಕಾಣಿಸುವುದರಿಂದ ಗ್ರಹಣ ಆಚರಣೆ ಮಾಡಬೇಕು.
ಭಾನುವಾರ ರಾತ್ರಿ 09.56 ಘಂಟೆಗೆ ಚಂದ್ರ ಗ್ರಹಣ ಆರಂಭವಾಗಲಿದೆ. ಇದನ್ನು ಸ್ಪರ್ಶಕಾಲ ಎನ್ನಲಾಗುತ್ತದೆ. ರಾತ್ರಿ 11-00 ಘಂಟೆಗೆ ಗ್ರಹಣ ನಿಮೀಲನ ಕಾಲ, ರಾತ್ರಿ 11-44 ಘಂಟೆಗೆ ಮಧ್ಯಕಾಲ, ರಾತ್ರಿ 12-23 ಘಂಟೆಗೆ ಉನ್ಮೀಲನ ಕಾಲ ಹಾಗೂ ರಾತ್ರಿ 01.28 ಘಂಟೆಗೆ ಗ್ರಹಣ ಮುಕ್ತಾಯ, ಮೋಕ್ಷ ಕಾಲ. ಒಟ್ಟು ಗ್ರಹಣದ ಸಮಯ 03 ಘಂಟೆ 29 ನಿಮಿಷ.
ಚಂದ್ರಗ್ರಹಣ ರಾತ್ರಿ 2ನೇ ಯಾಮದಲ್ಲಿ ಸಂಭವಿಸುತ್ತಿದ್ದು, ಗ್ರಹಣ ಸ್ಪರ್ಶಕ್ಕಿಂತ ಮೂರು ಯಾಮ ಮೊದಲೇ ವೇಧೆ ಆರಂಭವಾಗುತ್ತದೆ. ಹಾಗಾಗಿ ಭಾನುವಾರ ಮಧ್ಯಾಹ್ನ 12.55ಕ್ಕೆ ಗ್ರಹಣ ವೇಧೆ ಆರಂಭಗೊಳ್ಳಲಿದ್ದು, ಈ ಸಮಯದೊಳಗೆ ಆರೋಗ್ಯವಂತರು ಊಟ ಮುಗಿಸಬೇಕು. ಮಧುಮೇಹಿ ರೋಗಿಗಳು, 8 ವರ್ಷದೊಳಗಿನ ಮಕ್ಕಳು, ವೃದ್ಧರು, ಗರ್ಭಿಣಿ ಸ್ತ್ರೀಯರು, ಅಶಕ್ತರು ಸಂಜೆ ಸೂರ್ಯಾಸ್ತದವರೆಗೂ ಉಪಹಾರ ಸೇವಿಸಬಹುದು. ಆಹಾರ ನಿಯಮಗಳನ್ನು ತಮ್ಮ ತಮ್ಮ ಭಕ್ತಿ, ಆರೋಗ್ಯ ಮತ್ತು ಶಕ್ತ್ಯಾನುಸಾರ ಆಚರಿಸಬೇಕು.
ಕುಂಭರಾಶಿಯಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸುವುದರಿಂದ ಈ ರಾಶಿ ನಕ್ಷತ್ರದವರಿಗೆ ದೋಷವಿದೆ ಎನ್ನಲಾಗಿದೆ.
ಶಕ್ತಿಯಿದ್ದರೆ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಉತ್ತಮರಿಗೆ ದಕ್ಷಿಣಾ ಸಹಿತ ದಾನ ನೀಡಬಹುದು.
ಗ್ರಹಣ ಸಮಯದಲ್ಲಿ ಆ ಚರಣೆ ಮಾಡುವವರು ಗ್ರಹಣ ಆರಂಭವಾಗುತ್ತಿದ್ದಂತೆ ಉಟ್ಟಬಟ್ಟೆಯಲ್ಲೇ(ಸಚೇಲ) ಸ್ನಾನ ಮಾಡಿ ನಂತರ ಗ್ರಹಣ ಮೋಕ್ಷಾನಂತರ ಮತ್ತೆ ಸ್ನಾನ ಮಾಡಬೇಕು. ಗ್ರಹಣಾರಂಭದಿಂದ ಅಂತ್ಯದವರೆಗೆ ಜಪ, ತಪ ಮಾಡುವುದು ಉತ್ತಮ. ದಾನ, ಹೋಮ ಮಾಡುವುದು ಸಹ ವಿಹಿತ. ಪಿತೃಗಳಿಗೆ ತರ್ಪಣ ನೀಡುವ ಅಧಿಕಾರವುಳ್ಳವರು, ಅರ್ಧ ಕಾಲಾನಂತರದಲ್ಲಿ ತಿಲತರ್ಪಣ ನೀಡಬಹುದು.
ಗ್ರಹಣದ ವೇಳೆ ಹಾಲು, ಮೊಸರು ಮತ್ತಿತರ ಪದಾರ್ಥಗಳ ಮೇಲೆ ದರ್ಭೆ ಮುಚ್ಚಿಡುವುದು ವಾಡಿಕೆ. ಈ ಸಮಯದಲ್ಲಿ ನೀರು ಸಂಗ್ರಹಿಸುವುದಾಗಲಿ, ಅಡುಗೆ ಮಾಡುವುದಾಗಲಿ, ಅಡುಗೆಯನ್ನು ಮೊದಲೇ ಮಾಡಿಡುವುದಾಗಲಿ ಅಷ್ಟೊಂದು ಸೂಕ್ತವಲ್ಲ. ಗ್ರಹಣ ಮೋಕ್ಷಾನಂತರ ಮತ್ತೊಮ್ಮೆ ಸ್ನಾನ ಮಾಡಬೇಕು.
ಗ್ರಹಣದ ವೇಳೆ ನಿದ್ದೆ, ಊಟ, ತಿಂಡಿ, ಮಲಮೂತ್ರ ವಿಸರ್ಜನೆ ಹಾಗೂ ಮೈಥುನ ನಿಷಿದ್ಧ. ಗ್ರಹಣ ಮೋಕ್ಷ ಸ್ನಾನಾನಂತರ ಚಂದ್ರನ ಶುದ್ಧ ಬಿಂಬ ನೋಡಬೇಕು.
ಪುರಾಣಗಳ ಪ್ರಕಾರ ಗ್ರಹಣ ಎನ್ನುವುದು ಛಾಯ ಗ್ರಹಗಳು ಎನಿಸಿಕೊಂಡಿರುವ, ರಾಹು ಹಾಗೂ ಕೇತುಗಳು ಚಂದ್ರ ಅಥವಾ ಸೂರ್ಯನನ್ನು ಆವರಿಸುವ ಪ್ರಕ್ರಿಯೆ ಎಂದು ನಂಬಲಾಗಿದೆ.
ವೈಜ್ಞಾನಿಕ ದೃಷ್ಠಿ:
ವೈಜ್ಞಾನಿಕವಾಗಿ ಗ್ರಹಣ ಎಂಬುದು ಆಗಸದಲ್ಲಿ ನಡೆಯುವ ಒಂದು ಕೌತುಕಕ್ರಿಯೆ, ವಿಜ್ಞಾನದ ಪ್ರಕಾರ ಚಂದ್ರಗ್ರಹಣ ಎಂದರೆ ಸೂರ್ಯ, ಭೂಮಿ ಹಾಗೂ ಚಂದ್ರ ನೇರ ರೇಖೆಯಲ್ಲಿ ಬಂದಾಗ ಸಂಭವಿಸುವ ಒಂದು ಖಗೋಳ ಘಟನೆಯಾಗಿದೆ. ಇದು ಹುಣ್ಣಿಮೆಯ ದಿನದಂದು ಮಾತ್ರ ಸಂಭವಿಸುತ್ತದೆ. ಸೂರ್ಯ ಹಾಗೂ ಚಂದ್ರನ ಮಧ್ಯೆ ಅಡ್ಡ ಬರುವ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆಗ ಚಂದ್ರನು ಕಳಾ ಹೀನನಾಗಿ ಕಂದು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಹಾಗಾಗಿ ಚಂದ್ರ ಗ್ರಹಣ ಎಂಬುದು, ಸೂರ್ಯ ಹಾಗೂ ಚಂದ್ರನ ಭೂಮಿ ಹಾದು ಹೋಗುವಾಗ ನಡೆಯುವ ಬೆಳಕು ನೆರಳಿನಾಟ ಎನ್ನುತ್ತಾರೆ ವಿಜ್ಞಾನಿಗಳು.
ಆದರೆ ಸನಾತನ ಧರ್ಮದ ಪ್ರಕಾರ ಚಂದ್ರನಿಗೆ ರಾಹು ಗ್ರಹದಿಂದ ಉಪಟಳ.
ಇಲ್ಲಿ ಒಂದಂತೂ ನಾವು ಗಮನಿಸಬೇಕಾದ ಅಂಶವೆಂದರೆ, ಗ್ರಹನ ಸಂಭವಿಸುವ ವಿಚಾರವನ್ನು ವಿಜ್ಞಾನಿಗಳು ಗ್ರಹಣದ 3 ಅಥವಾ 6 ತಿಂಗಳ ಮೊದಲು ತಿಳಿಸಬಹುದಷ್ಟೇ. ವಿಜ್ಞಾನ ಎಷ್ಟೆಲ್ಲಾ ಮುಂದುವರೆದಿದ್ದರೂ, ಗ್ರಹಣದ ವಿಷಯ ಪ್ರಸ್ತುತ ಪಡಿಸಲು ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ದೂರದರ್ಶಕದಿಂದ ಗ್ರಹಗಳ ಚಲನೆಯನ್ನು ಗಮನಿಸಿ, ಅದರ ವೇಗ ಮತ್ತು ಚಲಿಸುವ ರೇಖಾಂಶವನ್ನು ಲೆಕ್ಕ ಹಾಕಿ ಹೇಳಬೇಕು. ಇಷ್ಟಾದರೂ ನಿರ್ಧಿಷ್ಠವಾಗಿ ಗ್ರಹಣದ ಸ್ಪರ್ಶ ಹಾಗೂ ಮೋಕ್ಷಕಾಲವನ್ನು ನಿರ್ಣಾಯಕವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಇದು ವಿಜ್ಞಾನಿಗಳಿಗೆ ಸವಾಲಾದ ವಿಷಯವೇ ಸರಿ.
ಆದರೆ ಹಿಂದೂ ಧರ್ಮದ ಪಂಚಾಂಗ ಬರೆಯುವ ಪರಿಣಿತರು, ಒಂದೆರಡು ವರ್ಷದ ಮೊದಲೇ ಗ್ರಹಣ ಸಂಭವಿಸುವ ಬಗ್ಗೆ ನಿಖರವಾಗಿ ಬರೆಯುತ್ತಾರೆ. ಗ್ರಹಣದ ಸ್ಪರ್ಶಕಾಲ, ಮಧ್ಯಕಾಲ ಹಾಗೂ ಮೋಕ್ಷಕಾಲವನ್ನು ಸ್ಪಷ್ಟವಾಗಿ ತಿಳಿಸುತ್ತಾರೆ. ಆಯಾ ಪ್ರದೇಶಗಳ ಸೂರ್ಯೋದಯ ಹಾಗೂ ಚಂದ್ರೋದಯದ ನಿಖರ ಸಮಯ ಮತ್ತು ಗ್ರಹಣದ ಸಮಯವನ್ನು ಯಾವುದೇ ವಿಜ್ಞಾನದ ಖಗೋಳದ ವಿಸ್ಮಯ ವೀಕ್ಷಿಸಲು ಬಳಸುವ ಉಪಕರಣ(ದೂರದರ್ಶಕ ಇತ್ಯಾದಿ) ಬಳಸದೇ ಹೇಳುವುದೇ ದೊಡ್ಡ ವಿಷಯ. ಇದು ಇದುವರೆಗೂ ಕಿಂಚಿತ್ತೂ ವ್ಯತ್ಯಾಸವಾಗದಿರುವುದು ನಮ್ಮ ಪಂಚಾಂಗ ಕತೃಗಳ ಮತ್ತೊಂದು ಹಿರಿಮೆ.
ಈ ಬಾರಿ ಚಂದ್ರ ಗ್ರಹಣ ಶತತಾರಾ(ಶತಭಿಷ) ನಕ್ಷತ್ರ, ಕುಂಭ ರಾಶಿಯಲ್ಲಿ ಸಂಭವಿಸುತ್ತಿದ್ದು, ಈ ರಾಶಿಯವರಿಗೆ ಅಶುಭವಾಗಲಿದೆ. ಪಂಚಾಂಗದ ಪ್ರಕಾರ, ಗ್ರಹಣ ಸಂಭವಿಸುವ ಕುಂಭರಾಶಿಯ ಜತೆಗೆ ಕರ್ಕಾಟಕ, ವೃಶ್ಚಿಕ ಹಾಗೂ ಮೀನರಾಶಿಯವರಿಗೆ ಅನಿಷ್ಟ ಫಲ.
ಸಿಂಹ, ಮಕರ, ತುಲಾ ಹಾಗೂ ಮಿಥುನ ರಾಶಿಯವರಿಗೆ ಮಿಶ್ರಫಲ. ಧನಸ್ಸು, ಕನ್ಯಾ, ವೃಷಭ ಹಾಗೂ ಮೇಷ ರಾಶಿಗಳವರಿಗೆ ಶುಭ ಫಲವಿದೆ.
ಕುಂಭ, ಕರ್ಕಾಟಕ, ವೃಶ್ಚಿಕ, ಮೀನ ರಾಶಿಯವರು ಗ್ರಹಣದ ವೇಳೆ ಈ ಮಂತ್ರ ಪಠಿಸುವುದು ಒಳಿತು.