ಸುದ್ದಿ ಕನ್ನಡ ವಾರ್ತೆ 

ಮುಧೋಳ: ನಗರದಾದ್ಯಂತ ರಾತ್ರಿವೇಳೆ ಕೆಲದಿನಗಳಿಂದ ಕಳ್ಳರ ಹಾವಳಿ ಹೆಚ್ಚಾಗಿರುವ ಹಿನ್ನೆಲೆ‌ ಜಯನಗರ ಬಡಾವಣೆಯಲ್ಲಿ ಮಹಿಳಾ‌ಮಣಿಗಳು ಕೈಯಲ್ಲಿ‌ ದೊಣ್ಣೆ ಹಿಡಿದು ರಾತ್ರಿ ಗಸ್ತು ನಡೆಸುವ ಮೂಲಕ ಸ್ವಯಂ ರಕ್ಷಣೆಗೆ ಮುಂದಾಗಿದ್ದಾರೆ.


ಹದಿನೈದು ದಿನಗಳಿಂದ ಮುಧೋಳ‌ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗದಲ್ಲಿ ಕಳ್ಳರ
ಹಾವಳಿ ಹೆಚ್ಚಾಗಿದೆ. ರಾತ್ರಿವೇಳೆ ಬೀಗ ಜಡಿದಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಮುಂದಾಗುವ ಚೋರರ ಹೆಡೆಮುರಿ ಕಟ್ಟಲು ನಗರ ನಿವಾಸಿಗಳು ವಿಷೇಶವಾಗಿ ಸ್ತ್ರೀಯರು ರಾತ್ರಿಪೂರ್ತಿ ತಮ್ಮ ತಮ್ಮ ಬಡಾವಣೆಗಳಲ್ಲಿ ಗಸ್ತು ನಡೆಸುತ್ತಿದ್ದಾರೆ.


*ಜಯನಗರದಲ್ಲಿ ಮಹಿಳೆಯರ ಗಸ್ತು :* ಜಯನಗರದಲ್ಲಿ ಎರಡ್ಮೂರು ದಿನದಿಂದ ಮಹಿಳೆಯರು ಗುಂಪು ಗುಂಪಾಗಿ ರಾತ್ರಿ ವೇಳೆ ಗಸ್ತು ನಡೆಸುತ್ತಿದ್ದಾರೆ. ಮಧ್ಯರಾತ್ರಿ 12:30ರಿಂದ ಬೆಳಗಿನ ಜಾವ 4ಗಂಟೆವರೆಗೆ ಗಸ್ತು ನಡೆಸುವ ನಾರಿಮಣಿಯರು ಕಳ್ಳರ ಹಾವಳಿ ತಡೆಗೆ ಮುಂದಾಗಿದ್ದಾರೆ. ಹೊಸ ಕುಮಕಾಲೆ ಕಾಲೇಜ್ ಸುತ್ತಮುತ್ತಲಿನ ಪ್ರದೇಶದಲ್ಲಿ ಗಸ್ತು ನಡೆಸುವ ನಾರಿಮಣಿಯರು ಆ ಮೂಲಕ ನಾಗರೀಕ ಜವಾಬ್ದಾರಿ ಮೆರೆಯುತ್ತಿದ್ದಾರೆ.


*ಪುರುಷರ ಗುಂಪು ಗಸ್ತು :* ನಾರಿಮಣಿಯರಷ್ಟೇ ಅಲ್ಲದೆ ಹಲವು ದಿನಗಳಿಂದ ಪುರುಷರು‌ ಸಹ ರಾತ್ರಿ ಗಸ್ತು ಹೆಚ್ಚಿಸಿದ್ದಾರೆ. ಕೊಡಗ ಪ್ಲಾಟ್, ಜಯನಗರ, ಸದಾಶಿವ ಕಾಲನಿ, ಯಡಹಳ್ಳಿ ಹಳೇ ಬೈ ಪಾಸ್ ರಸ್ತೆ ಸೇರಿದಂತೆ ಹಲವಾರು ಭಾಗಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಿ ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತಿದ್ದಾರೆ.


*ಸರದಿಯಲ್ಲಿ ಗಸ್ತು ನಿಯಮ :* ಗಸ್ತು ತಿರುಗುವ ವೇಳೆ ಕಾಲನಿ ಜನರೆಲ್ಲ ಸೇರಿ ಸರದಿ ಹಾಕಿಕೊಂಡಿದ್ದಾರೆ. ಒಂದೊಂದು ದಿನ ಐದರಿಂದ ಆರು ಜನರ ತಂಡವಾಗಿ ಗಸ್ತು ತಿರುಗುತ್ತಾರೆ. ಮರುದಿನ‌ ಮತ್ತೊಂದು ತಂಡ ಗಸ್ತು ನಡೆಸುವ ಮೂಲಕ‌ ಸಾಮೂಹಿಕ‌ ಪಾಲ್ಗೊಳ್ಳುವಿಕೆ‌ ಮೂಲಕ ಒಗ್ಗಟ್ಟಿನಿಂದ ಗಸ್ತು ಕಾರ್ಯದಲ್ಲಿ‌ ತೊಡಗಿದ್ದಾರೆ.
*ವಾಟ್ಸ್ ಆಪ್ ಗ್ರುಪ್‌ ರಚನೆ :* ಇನ್ನು ಕಳ್ಳರ ಹಾವಳಿ ತಡೆಗಟ್ಟಲು ಪಣತೊಟ್ಟಿರುವ ಸಾರ್ವಜನಿಕರು ತಮ್ಮ‌‌ ತಮ್ಮ ಬಡಾವಣೆಯಲ್ಲಿಯೇ ವಾಟ್ಸ್ ಆಪ್‌ ಗ್ರುಪ್ ರಚಿಸಿಕೊಂಡಿದ್ದಾರೆ. ರಾತ್ರಿವೇಳೆ ಗಸ್ತು ನಡೆಸುವ ತಂಡ ತಮ್ಮ ಫೋಟೊಗಳನ್ನು ರಾತ್ರಿ ವೇಳೆಯೇ ಗ್ರುಪ್ಪಿನಲ್ಲಿ ಅಪ್ಲೋಡ್ ಮಾಡಿ‌ ಬಡಾವಣೆಯಲ್ಲಿ ಧೈರ್ಯದ ವಾತಾವರಣ ನಿರ್ಮಿಸುತ್ತಾರೆ. ರಾತ್ರಿವೇಳೆ‌ ನಡೆಯುವ ಪ್ರತಿಯೊಂದು ಸೂಕ್ಷ್ಮ ವಿಚಾರಗಳು ಈ ಗ್ರುಪ್ಪಿನಲ್ಲಿ ಚರ್ಚೆಯಾಗುತ್ತವೆ. ಮರುದಿನ ಅವುಗಳಿಗೆ ಕೈಗೊಳ್ಳಬೇಕಾದ ಕ್ರಮಗಳ‌ ಕುರಿತೂ ಮಾತುಕತೆಗಳು ನಡೆಸುವ ಮೂಲಕ ಪ್ರತಿಯೊಬ್ಬರಲ್ಲೂ ಪರಸ್ಪರ ಸಂದೇಶ ವಿನಮಯಗಳಾಗುತ್ತಿವೆ.


*ಹಗಲಿನಲ್ಲಿ ಮೀಟಿಂಗ್ :* ರಾತ್ರಿವೇಳೆ‌ ಗಸ್ತು ನಡೆಸುವುದು ಒಂದು ಕಾರ್ಯವಾದರೆ ಸಂಜೆವೇಳೆ‌ ಮಹಿಳೆಯರು‌‌‌, ಮಕ್ಕಳಾದಿಯಾಗಿ ಒಂದೆಡೆ‌ ಸಭೆ ಸೇರಿ ಅಂದಿನ ರಾತ್ರಿ ಕೈಗೊಳ್ಳುವ ನಿರ್ಧಾರದ‌ ಬಗ್ಗೆ ಚರ್ಚಿಸುತ್ತಾರೆ.
*ಬೀಟ್ ಹೆಚ್ಚಿಸಿದ ಪೊಲೀಸ್ :* ಕಳ್ಳರ‌ ಹಾವಳಿ ಹೆಚ್ಚಾದಾಗಿನಿಂದ‌ ಹದ್ದಿನ ಕಣ್ಣಿಟ್ಟು ಕಾಯುತ್ತಿರುವ ಪೊಲೀಸ್ ಇಲಾಖೆ‌ ಪ್ರತಿಯೊಂದು ಬಡಾವಣೆಗೂ ನೈಟ್ ರೌಂಡ್ಸ್ ಹೆಚ್ಚಿಸಿದೆ.‌ ಸಾರ್ವಜನಿಕರ‌ ಸಹಕಾರದೊಂದಿಗೆ ಕಾರ್ಯಕ್ಕೆ ಇಳಿದಿರುವ ಇಲಾಖೆ‌ ಸಿಬ್ಬಂದಿ ಸಾರ್ವಜನಿರಿಗೆ ಅಗತ್ಯ ಸಲಹೆ ಸಹಕಾರ‌‌ ನೀಡುವುದರೊಂದಿಗೆ ರಾತ್ರಿವೇಳೆಯಲ್ಲಿ‌ ಗಸ್ತನ್ನು‌ ಹೆಚ್ಚಿಸಿದ್ದಾರೆ.
****
ಕಳ್ಳರ ಹಾವಳಿಯಿಂದ ನಮ್ಮಲ್ಲಿ ಭಯದ ವಾತಾವರಣ ಹೆಚ್ಚಾಗಿತ್ತು. ಇದೀಗ ನಮ್ಮ ಕಾಲನಿಯಲ್ಲಿಯೇ ಗಸ್ತು ನಡೆಸುತ್ತಿರುವುದರಿಂದ‌ ಮನಸ್ಸಿನಲ್ಲಿ‌ ನಿರಾಳಭಾವ ಮೂಡಿದೆ.
ಸುನಿತಾ ಬೆಳ್ಳುಬ್ಬಿ‌ ಜಯನಗರ ನಿವಾಸಿ
*****
ಕಳ್ಳರ ಹಾವಳಿ ತಡೆಗಟ್ಟಲು ಇಲಾಖೆ‌ ನಿರಂತರ‌ ಶ್ರಮವಹಿಸುತ್ತಿದೆ. ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಿ ಗಸ್ತು ನಡೆಸುತ್ತಿರುವುದು ಸ್ವಾಗತಾರ್ಹ. ಯಾವುದೇ ರೀತಿಯ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ಕೂಡಲೇ 112ಗೆ ಕರೆ ಮಾಡಿ ಮಾಹಿತಿ ನೀಡಿ.
ಮಹಾದೇವ ಶಿರಹಟ್ಟಿ ಆರಕ್ಷಕ ವೃತ್ತ ನಿರೀಕ್ಷಕರು‌ ಮುಧೋಳ