ಸುದ್ದಿ ಕನ್ನಡ ವಾರ್ತೆ
ಯರಗಟ್ಟಿ : ರಸ್ತೆಯಲ್ಲಿ ಸಂಯುಮದ ವರ್ತನೆಯ ಕೊರತೆ ಹಾಗೂ ಅತಿ ವೇಗದ ಚಾಲನೆ ಕಾರಣದಿಂದ ಅಪಘಾತಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿದ್ದು ಸಂಚಾರ ನಿಯಮಗಳ ಪಾಲನೆ ಅತಿ ಅಗತ್ಯ ಎಂದು ಯರಗಟ್ಟಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ವೈ.ಎಂ. ಕಡಕೋಳ ಅವರು ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸ್ವಯಂಸೇವಾ ಯೋಜನೆ ಘಟಕದ ವತಿಯಿಂದ
ಸಮೀಪದ ಯರಗಣವಿ ಗ್ರಾಮದಲ್ಲಿ ಆಯೋಜಿಸಿದ ವಿಶೇಷ ವಾರ್ಷಿಕ ಶಿಬಿರದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಯುವಕರು ವಿದ್ಯಾರ್ಥಿ ಜೀವನದಲ್ಲಿ ರಸ್ತೆ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ಪಾಲಿಸುವುದರ ಜೊತೆಗೆ ಇತರರಿಗೂ ಆ ನಿಯಮಗಳನ್ನು ತಿಳಿಸುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಇನ್ನೊರ್ವ ಮುಖ್ಯ ಅತಿಥಿ ವಿಜಯವಾಣಿ ಪತ್ರಿಕೆಯ ವರದಿಗಾರ ಸಿದ್ದು ಪೂಜೇರ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಅಧ್ಯಯನದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ರಾಜಶೇಖರ ಬಿರಾದಾರ ಅವರು ಜಗತ್ತಿನಲ್ಲಿ ರಸ್ತೆ ಅಪಘಾತದಿಂದಾಗಿ ಪ್ರತಿ ವರ್ಷ 12 ಲಕ್ಷಕ್ಕೂ ಅಧಿಕ ಜನ ಮರಣ ಹೊಂದುತ್ತಿದ್ದಾರೆ. ಇವರ ಪೈಕಿ ಶೇಕಡ 92 ರಷ್ಟು ಯುವಜನತೆಯೇ ಆಗಿರುವುದು ಖೇದಕರವಾಗಿದೆ. ಜೀವ ಇದ್ದರೆ ಮಾತ್ರ ಜೀವನ. ಆದ್ದರಿಂದ ಯುವಕರು ರಸ್ತೆಯಲ್ಲಿ ಸಂಚರಿಸುವಾಗ ಸಂಯಮದ ವರ್ತನೆಯನ್ನು ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಪತ್ರಕರ್ತ ಈರಣ್ಣ ಹುಲ್ಲೂರ, ಶಿಬಿರದ ಸಂಯೋಜಕ ಚಿಕ್ಕಹನುಮಯ್ಯ, ಪ್ರಾಧ್ಯಾಪಕರಾದ ಶಂಕರ ಲಗಳಿ, ಮಹಾಂತೇಶ ಕೆ.ವೈ, ಮಹಾಂತೇಶ ತಳವಾರ, ಡಾ. ಸುನಿತಾ ಸೊಪ್ಪಡ್ಲ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
