ಸುದ್ದಿ ಕನ್ನಡ ವಾರ್ತೆ
ಹುಬ್ಬಳ್ಳಿ:ನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಜಮ್ಮು ಕಾಶ್ಮೀರ 477 ರನ್‌ಗಳ ಭಾರೀ ಮುನ್ನಡೆ ಪಡೆದಿದ್ದು ನಾಳೆ ಏನಾದರೂ ಪವಾಡ ನಡೆದರೆ ಮಾತ್ರ ಕರ್ನಾಟಕ ಚಾಂಪಿಯನ್ ಆಗಬಹುದು.
ಮೂರನೇ ದಿನ 5 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿದ್ದ ಕರ್ನಾಟಕ ಇಂದು 73 ರನ್ ಸೇರಿಸಿ 93.3 ಓವರ್‌ಗಳಲ್ಲಿ 293 ರನ್‌ಗಳಿಗೆ ಆಲೌಟ್ ಆಯ್ತು. ನಿನ್ನೆ ಔಟಾಗದೇ ಇದ್ದ ಮಯಾಂಕ್ ಅಗರ್‌ವಾಲ್ 160 ರನ್ ಹೊಡೆದರೆ ಕೃತಿಕ್ ಕೃಷ್ಣ 36 ರನ್, ವಿಜಯ್ ಕುಮಾರ್ ವೈಶಾಕ್ ಔಟಾಗದೇ 17 ರನ್ ಹೊಡೆದರು. 291 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಜಮ್ಮು-ಕಾಶ್ಮೀರ ತಂಡವು
57 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್ ಹೊಡೆದಿದೆ.ಖಮ್ರಾನ್ ಇಕ್ಬಾಲ್ ಔಟಾಗದೇ 94 ರನ್, ಅಬ್ದುಲ್ ಸಮಾದ್ 32 ರನ್, ಸಾಹಿಲ್ ಲೂತ್ರಾ ಔಟಾಗದೇ 16 ರನ್ ಹೊಡೆದು
ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನಾಳೆ ಕೊನೆಯ ದಿನವಾಗಿದ್ದು ಜಮ್ಮು ಕಾಶ್ಮೀರವನ್ನು ಬೇಗನೇ ಆಲೌಟ್ ಮಾಡಿ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದರೆ ಮಾತ್ರ ಕರ್ನಾಟಕ ಜಯಗಳಿಸಬಹುದು. ಈ ರೀತಿ ಫಲಿತಾಂಶ ಬರಬೇಕಾದರೆ ಪವಾಡವೇ ನಡೆಯಬೇಕು.
ಒಂದು ವೇಳೆ ಮಧ್ಯಾಹ್ನದವರೆಗೆ ಜಮ್ಮು ಕಾಶ್ಮೀರ ಬ್ಯಾಟಿಂಗ್ ಮಾಡಿ ನಂತರ ಕರ್ನಾಟಕ ಬ್ಯಾಟಿಂಗ್ ಮಾಡಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಜಮ್ಮು ಕಾಶ್ಮೀರದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ. ಚೊಚ್ಚಲ ರಣಜಿ ಚಾಂಪಿಯನ್ ಆಗುವ ಹೊಸ್ತಿಲಿನಲ್ಲಿರುವ ಜಮ್ಮು ಕಾಶ್ಮೀರದ ಕೊನೆಯ ದಿನದ ಆಟವನ್ನು ವೀಕ್ಷಿಸಲು ಸಿಎಂ ಒಮರ್ ಅಬ್ದುಲ್ಲಾ ಹುಬ್ಬಳ್ಳಿಗೆ ಬರುತ್ತಿದ್ದಾರೆ.
