ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ- ನಾಡಿನ ಹೆಮ್ಮೆಯ ಕನ್ನಡದ ಶಕ್ತಿ ಕೇಂದ್ರ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಮುದ್ರಿಸಿದ *೨೦೨೬* ರ ಕನ್ನಡ ಅಂಕಿಗಳುಳ್ಳ ದಿನದರ್ಶಿಕೆಯನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಮಾಸ್ತಮ್ಮನವರ ಚಿಕ್ಕ ಮಕ್ಕಳ ಆಸ್ಪತ್ರೆಯ ನವಜಾತ ಶಿಶು ಮತ್ತು ಚಿಕ್ಕ ಮಕ್ಕಳ ತಜ್ಞ ವೈದ್ಯರಾದ ಡಾ.ಮಡಿವಾಳೇಶ ದೊಡ್ಡಬಸಪ್ಪ ಮಾಸ್ತಮ್ಮನವರ ಅವರಿಗೆ ಬೈಲಹೊಂಗಲ ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ಗ್ಯಾಲಾಕ್ಸಿ ಗಾರ್ಡನದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು,ಉದಯೋನ್ಮುಖ ಬರಹಗಾರ,ಕನ್ನಡ ಕಟ್ಟಾಳು,ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಮಹಾಂತೇಶ ಶಿವಪ್ಪ ಮುದಕನಗೌಡರ ( ಬೈಲವಾಡ)ರವರು ಅರ್ಪಿಸಿದರು.
ದಿನದರ್ಶಿಕೆ ಅರ್ಪಿಸಿ ಮಾತನಾಡಿದ ಮಹಾಂತೇಶ ಶಿವಪ್ಪ ಮುದಕನಗೌಡರ ಅವರು ಕರ್ನಾಟಕದ ಚರಿತ್ರೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯು ಕನ್ನಡ – ಕನ್ನಡಿಗ- ಕರ್ನಾಟಕತ್ವದ ಅನಧಿಕೃತ ಶಾಸನ ಸಭೆಯ ಸ್ಥಾಪನೆಯೆಂದೇ ಗುರುತಿಸಲಾಗಿದೆ.ಹಲವಾರು ಸಂಸ್ಥಾನ ಮತ್ತು ಬ್ರಿಟಿಷ್ ಆಡಳಿತಗಳಲ್ಲಿ ಹಂಚಿ ಹೋಗಿದ್ದ ವಿಶಾಲ ಕರ್ನಾಟಕ ರಚನೆಯ ಬೀಜ ಮೊಳಕೆಯೊಡೆದದ್ದೇ ಸಂಘದ ಸ್ಥಾಪನೆಯಿಂದ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯ ಪೂರ್ವದಲ್ಲಿ ಈ ಭಾಗವನ್ನು ಬ್ರಿಟಿಷ್ ಸರ್ಕಾರ ದಕ್ಷಿಣ ಮಹಾರಾಷ್ಟ್ರವೆಂದೇ ಗುರುತಿಸುತ್ತಿತ್ತು ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕನ್ನಡ ಭಾಷಿಕರ ಪ್ರದೇಶಗಳು ಮರಾಠಿ ಪೇಶ್ವಗಳ,ಪಾಳೇಗಾರರ, ಸುಲ್ತಾನರ , ನವಾಬರ ಆಳ್ವಿಕೆಯಲ್ಲಿ ಹಂಚಿಹೋಗಿ ಕನ್ನಡದ ನೆಲದಲ್ಲಿಯೇ ಕನ್ನಡ ಮಾತನಾಡುವ ಜನ ದ್ವಿತೀಯ ದರ್ಜೆಯ ಪ್ರಜೆಗಳಾಗಿ ಬದುಕುವ ಶೋಚನೀಯ ಸ್ಥಿತಿ ನಿರ್ಮಾಣವಾಗಿತ್ತು ಎಂದರು.
ಖ್ಯಾತ ಹೋಟೆಲ ಉದ್ಯಮಿ ಮಹಾಂತೇಶ ಎಸ್.ಪಾಟೀಲ ಅವರು ಮಾತನಾಡಿ ಮೈಸೂರು ಅರಸರ ನೆರವಿನೊಂದಿಗೆ ೧೯೦೫ ರಲ್ಲಿ ಸ್ವಂತ ಕಟ್ಟಡ ಹೊಂದಿದ ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಯ ನೂರಾರು ಸಮ್ಮೇಳನಗಳನ್ನು, ಸಾವಿರಾರು ಸಭೆಗಳನ್ನು ನಡೆಸಿ, ಕನ್ನಡ ಸಾಹಿತ್ಯ ಪರಿಷತ್ತಿನ,ಹುಟ್ಟಿಗೆ ಕಾರಣವಾಗಿ, ಬ್ರಿಟಿಷ್ ಕರ್ನಾಟಕ ಪ್ರತ್ಯೇಕ ಪ್ರಾಂತ್ಯ ರಚನೆಗೆ ಪ್ರಯತ್ನ ಮಾಡುತ್ತ ಅಖಂಡ ಕರ್ನಾಟಕ ರಚನೆಗೆ ಪ್ರೇರಣೆ ನೀಡಿತು. ಮುಂದೊಂದು ದಿನ ಕರ್ನಾಟಕ ಏಕೀಕರಣದ ನೇತೃತ್ವ ವಹಿಸಿ ಕೋಟ್ಯಾಂತರ ಕನ್ನಡಿಗರ ಆಜೀವ ಕನಸಾಗಿದ್ದ ಕರ್ನಾಟಕ ಏಕೀಕರಣಕ್ಕೆ ಕಾರಣವಾಗಿ ಭಾರತದ ಭೂಪಟದಲ್ಲಿ ಕರ್ನಾಟಕ ರಾಜ್ಯದ ನಕಾಶೆ ಮೂಡಲು ಕಾರಣವಾಯಿತು ಎಂದರು.
ದಿನದರ್ಶಿಕೆ ಸ್ವೀಕರಿಸಿ ಮಾತನಾಡಿದ ಡಾ.ಮಡಿವಾಳೇಶ ದೊಡ್ಡಬಸಪ್ಪ ಮಾಸ್ತಮ್ಮನವರ ಅವರು ಮಾತನಾಡಿ ಐತಿಹಾಸಿಕ ಗೋಕಾಕ ಚಳುವಳಿಯ ನೇತೃತ್ವವಹಿಸಿದ ಕರ್ನಾಟಕ ವಿದ್ಯಾವರ್ಧಕ ಸಂಘ ನೆರೆರಾಜ್ಯ ಮತ್ತು ಪರ ಸಂಸ್ಕೃತಿಯಿಂದ ಆಪತ್ತು ಬಂದಾಗೆಲ್ಲಾ ಸಿಂಹ ಘರ್ಜನೆಯಿಂದ ಕನ್ನಡಿಗರನ್ನು ಬಡಿದೆಬ್ಬಿಸಿದೆ. ದೆಹಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ, ಉತ್ತರ ಪ್ರದೇಶ, ಗೋವಾ, ಪಾಂಡಿಚೇರಿ, ರಾಜ್ಯವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚಾರಿತ್ರಿಕ ಸಮೇಳನಗಳನ್ನು ನಡೆಸಿ ಕನ್ನಡ ಪರವಾದ ಕೆಚ್ಚು ತೋರಿದೆ. ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಮಹಾಮೇಳಗಳನ್ನು ಆಯೋಜಿಸುತ್ತಾ ಅಖಂಡ ಭಾರತದಲ್ಲಿರುವ ಕನ್ನಡಿಗರ ಹೃದಯದಲ್ಲಿ ಕನ್ನಡ ಸದಾ ಅಗ್ರಸ್ಥಾನದಲ್ಲಿ ಇಟ್ಟುಕೊಳ್ಳುವಂತೆ ಮಾಡಿದ ಕೀರ್ತಿ ಸಂಘಕ್ಕಿದೆ. ಇಂದಿಗೂ ಕನ್ನಡ ಪರ ಧ್ವನಿ ಮೊಳಗಿಸುವ ಮೂಲಕ ಕರ್ನಾಟಕದ ಸಾಕ್ಷಿ ಪ್ರಜ್ಞೆಯಂತೆ ಕರ್ನಾಟಕ ವಿದ್ಯಾವರ್ಧಕ ಸಂಘ ಕಾರ್ಯ ನಿರ್ವಹಿಸುತ್ತಲಿದೆ ಎಂದು ಹೇಳಿದರು.
