ಸುದ್ದಿ ಕನ್ನಡ ವಾರ್ತೆ
ಯರಗಟ್ಟಿ : ಬಸವಾದಿ ಶರಣರು ತಮ್ಮ ಕಾಯಕದೊಂದಿಗೆ ಆಧ್ಯಾತ್ಮಿಕ ಚಿಂತನೆಯನ್ನು ರೂಢಿಸಿಕೊಂಡಿದ್ದರು. ಆದ್ದರಿಂದ ನೆಮ್ಮದಿಯುತ ಜೀವನ ಅವರಿಗೆ ಸಾಧ್ಯವಾಗಿತ್ತು. ಆಧುನಿಕ ಒತ್ತಡದ ಬದುಕಿನಲ್ಲಿ ಮಾನಸಿಕ ನೆಮ್ಮದಿಗೆ ಆಧ್ಯಾತ್ಮಿಕ ಚಿಂತನೆ ಅಗತ್ಯ ಎಂದು ಬೈಲಹೊಂಗಲದ ಮೂರು ಸಾವಿರ ಮಠದ ಪ್ರಭು ನೀಲಕಂಠ ಮಹಾಸ್ವಾಮಿಗಳು ಹೇಳಿದರು.

ಯರಗಟ್ಟಿಯ ದುರದುಂಡೇಶ್ವರ ಮಠದಲ್ಲಿ ನಡೆದ 230 ನೆಯ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿದ ಅವರು ಶರಣರು ಸಂತರು ದಾರ್ಶನಿಕರ ಹಾದಿಯಲ್ಲಿ ನಡೆದರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಪ್ರತಿಪಾದಿಸಿದರು.
ಇದಕ್ಕೂ ಮೊದಲು ಕಾಯಕಯೋಗಿ ಶರಣ ಮೇದಾರ ಕೇತಯ್ಯನವರ ಜೀವನ ಹಾಗೂ ಸಾಧನೆಗಳನ್ನು ಕುರಿತು ಉಪನ್ಯಾಸ ನೀಡಿದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಅವರು, ಕೇತಯ್ಯ ಶರಣರು ಬಿದಿರಿನಿಂದ ಮರ ಬುಟ್ಟಿ ತೊಟ್ಟಿಲುಗಳನ್ನು ಮಾಡಿ ಮಾರಾಟ ಮಾಡಿ ಅವುಗಳಿಂದ ಬಂದ ಪ್ರತಿಫಲದಿಂದ ದಾಸೋಹ ಸೇವೆಯನ್ನು ಮಾಡುತ್ತಿದ್ದರು ಅವರ ಧರ್ಮಪತ್ನಿ ಸಾತವ್ವೆಯು ಪತಿಗೆ ತಕ್ಕ ಸತಿಯಾಗಿದ್ದು ಪತಿಯ ಕಾಯಕ ದಾಸೋಹ ಕಾರ್ಯಗಳಿಗೆ ಹೆಗಲೆಣೆಯಾಗಿ ದುಡಿಯುತ್ತಿದ್ದಳು. ಈ ದೃಷ್ಟಿಯಲ್ಲಿ ಅವರದು ಅನುರೂಪದ ದಾಂಪತ್ಯವಾಗಿತ್ತು. ಕೇತಯ್ಯನವರು ಕಾಯಕದಲ್ಲಿ ಕೈಲಾಸವನ್ನು ಕಂಡ ನಿಜ ಶರಣರಾದರೆ ಸಾಧ್ಯ ತಾಯಿಯು ದಾಸೋಹದಲ್ಲಿ ಕೈಲಾಸವನ್ನು ಕಂಡ ಮಹಾತಾಯಿ ಎನಿಸಿದ್ದಳು. ಈ ದಂಪತಿಗಳ ಬದುಕು ಅನುಕರಣೀಯವಾದುದಾಗಿತ್ತು ಎಂದು ಪ್ರತಿಪಾದಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗೋಕಾಕದ ನಿವೃತ್ತ ಪ್ರಾಧ್ಯಾಪಕರಾದ ಎಂ.ಜಿ. ದೇವಡಿಯವರು ಮಾತನಾಡಿದರು.

ಅಶೋಕ ಹಾದಿಮನಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾಂತೇಶ ಜಕಾತಿ, ಮಹಾಬಳೇಶ ಹಾದಿಮನಿ ರಾಜೇಂದ್ರ ವಾಲಿ ಉಪಸ್ಥಿತರಿದ್ದರು. ಜಮಾದಾರ ಗುರುಗಳ ಮಕ್ಕಳು ದಾಸೋಹ ಸೇವೆಯನ್ನು ಅರ್ಪಿಸಿದರು. ಪೂರ್ಣಿಮಾ ಕತ್ತಿಶೆಟ್ಟಿ ನಿರೂಪಿಸಿದರು, ಕುಮಾರ್ ಜಕಾತಿ ಸ್ವಾಗತಿಸಿದರು, ಶಿವಾನಂದ ಪಟ್ಟಣಶೆಟ್ಟಿ ವಂದಿಸಿದರು.