ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ: ಕ್ರಿಯಾಶೀಲತೆ ಮತ್ತು ಸೃಜನಶೀಲತೆ ವ್ಯಕ್ತಿಯ ಸಾಧನೆಗೆ ಸಹಕಾರಿ ಎಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ರಾಘವೇಂದ್ರ ಹುಲಕುಂದ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ವಿಚಾರ ಸಾಹಿತ್ಯ ವೇದಿಕೆಯ ಸಂಚಾಲಕರಾಗಿ ನೇಮಕಗೊಂಡ ಪ್ರೊ. ಮಂಜುನಾಥ ಎಂ. ಅವರಿಗೆ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಕೇಂದ್ರ ಬಸವ ಸಮಿತಿ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು. ಸಾಹಿತ್ಯ, ಕಲೆಯಲ್ಲಿ ಅಪಾರ ಆಸಕ್ತಿ ಹೊಂದಿದ ಮಂಜುನಾಥ ಅವರಿಗೆ ಅಕಾಡೆಮಿಯ ಹುದ್ದೆ ಲಭಿಸಿರುವುದು ನಮ್ಮ ಮಹಾವಿದ್ಯಾಲದ ಹೆಮ್ಮೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿಕೊಂಡು ಮಂಜುನಾಥ ಅವರು ಅನೇಕ ರಾಷ್ಟ್ರೀಯ ವಿಚಾರ ಸಂಕಿರಣ, ಗೋಷ್ಠಿ, ಕಾರ್ಯಾಗಾರ ಹಾಗೂ ಸಮ್ಮೇಳನಗಳಲ್ಲಿ ಭಾಗಿಯಾಗಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿದ್ದಾರೆ ಎಂದರು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಮಂಜುನಾಥ ಅವರ ವ್ಯಕ್ತಿತ್ವ ಮತ್ತು ಪ್ರತಿಭೆಗೆ ತಕ್ಕ ಗೌರವ ಸನ್ಮಾನಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ದೊರಕುವಂತಾಗಲಿ ಎಂದು ಶುಭಕೋರಿದರು. ಸರಳ ಸಜ್ಜನಿಕೆಯ ಗುಣ ಹೊಂದಿದ ಅವರು ಪ್ರಯತ್ನವಾದಿಗಳು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಮಾರುತಿಗೌಡ ಹಿತಾರಗೌಡರ ಅವರು ಮಾತನಾಡಿ ಚಕೋರ ವಿಚಾರ ಸಾಹಿತ್ಯ ವೇದಿಕೆಯ ಸಂಚಾಲಕರಾಗಿ ನೇಮಕಗೊಂಡಿರುವುದು ಕನ್ನಡ ವಿಭಾಗದ ಗೌರವದ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು. ಪತ್ರಕರ್ತರಾದ ಮಹಾಂತೇಶ ರಾಜಗೋಳಿ ಮಾತನಾಡಿ ಮಂಜುನಾಥ ಅವರ ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಲಿ ಮತ್ತು ಅವರ ಸೇವೆ ಬೈಲಹೊಂಗಲ ನಾಡಿಗೂ ಲಭಿಸುವಂತಾಗಲಿ ಎಂದು ಅವರು ಅಭಿಪ್ರಾಯಪಟ್ಟರು.
ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಮಂಜುನಾಥ ಸನ್ಮಾನ ಸ್ವೀಕರಿಸಿ ಮಾತನಾಡಿ ಅಕಾಡೆಮಿ ನಂಬಿಕೆಯಿಟ್ಟು ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸುವುದಾಗಿ ಭರವಸೆ ನೀಡಿದರು. ಪ್ರೀತಿಯಿಂದ ಗೌರವಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಮಹಾಂತೇಶ ಬಡಿಗೇರ, ಗಿರೆಪ್ಪ ಕಸಾಳೆ, ಸವಿತಾ ಪಾಟೀಲ, ಡಾ. ಭಾರತಿ ತೆಗ್ಯಾಳ, ಪಾರವ್ವ ಕರಡಿಗುದ್ದಿ, ಡಾ. ವಿಜಯಲಕ್ಷ್ಮಿ ಡೊಂಬರ, ಡಾ. ಮುದ್ದನಗೌಡ ಪಾಟೀಲ, ಮಲ್ಲಿಕಾರ್ಜುನ ದಾಸೋಗ ಹಾಗೂ ಬೆಳವಡಿಯ ವಿದ್ಯಾರ್ಥಿ ಮುಖಂಡ ಶಿವಾನಂದ ಸಂಭೋಜಿ ಉಪಸ್ಥಿತರಿದ್ದರು.