ಸುದ್ದಿ ಕನ್ನಡ ವಾರ್ತೆ

ಬೆಂಗಳೂರು : “ಪ್ರಪಂಚದ ಎಲ್ಲ ಖಂಡಗಳಲ್ಲಿಯೂ ಇಸ್ಲಾಂ ಹಾಗೂ ಕ್ರೈಸ್ತ ಧರ್ಮಗಳ ಉಪಸ್ಥಿತಿಯಿದೆ. ಆದರೆ ಹಿಂದುತ್ವದ ಉಪಸ್ಥಿತಿಯಿರುವ ಒಂದೇ ಒಂದು ದೇಶ ಭಾರತ. ಜಗತ್ತಿಗೆ ನಿಜವಾದ ಜ್ಞಾನ ಮತ್ತು ಪ್ರಕಾಶವನ್ನು ನೀಡಿರುವ ದೇಶವೇ ಭಾರತ. ಎಲ್ಲ ಪಂಥಗಳು ಹಾಗೂ ಮತಪಂಥಗಳು ಹಿಂದೂ ಧರ್ಮವೆಂಬ ವಿಶಾಲವಾದ ವೃಕ್ಷದ ಶಾಖೆಗಳಷ್ಟೇ ಎಂದು ದಿ ಧರ್ಮ ಡಿಸ್ಪ್ಯಾಚ್ ಸಂಸ್ಥಾಪಕರಾದ ಶ್ರೀ. ಸಂದೀಪ್ ಬಾಲಕೃಷ್ಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಮತ್ತು ಯುವ ಬ್ರಿಗೇಡ್ ನ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ ಬರೆದ ”ಗೌರಿ ಲಂಕೇಶ್ ಹತ್ಯೆ ಮತ್ತು ಹಿಂದೂ ವಿರೋಧಿ ಷಡ್ಯಂತ್ರ” ಈ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ. ಪಿ. ಕೃಷ್ಣ ಭಟ್,, ಸಂವಾದ ಟಿವಿಯ ಸಂಪಾದಕರಾದ ಶ್ರೀ. ವೃಷಾಂಕ ಭಟ್, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ, ವಿಶ್ವ ಹಿಂದೂ ಪರಿಷತ್ ನ ರಾಜ್ಯಾಧ್ಯಕ್ಷರಾದ ಶ್ರೀ. ದೀಪಕ್ ರಾಜಗೋಪಾಲ್ , ಸ್ಟ್ರಿಂಗ್ ರಿವಿಲ್ಸ್ ನ ಶ್ರೀ. ವಿನೋದ್ ಸೇರಿದಂತೆ 500ಕ್ಕೂ ಅಧಿಕ ರಾಷ್ಟ್ರ- ಧರ್ಮ ಪ್ರೇಮಿ ಹಿಂದೂಗಳ ಉಪಸ್ಥಿತಿ.

ಸಂದೀಪ್ ಬಾಲಕೃಷ್ಣ ಅವರು ಮಾತನ್ನು ಮುಂದುವರಿಸಿ ನೆಹರೂ ಅವರ ಕಾಲದಿಂದ ಇಸ್ಲಾಂ ಮತ್ತು ಕ್ರೈಸ್ತ ಮತಗಳನ್ನು ಧರ್ಮ ಎಂದು ಕರೆಯುವ ಪ್ರವೃತ್ತಿ ಬೆಳೆಯಿತು. ವಾಸ್ತವದಲ್ಲಿ ಅವು ಪಂಥಗಳು ಮಾತ್ರ. ನಿಜವಾದ ಧರ್ಮವೆಂದರೆ ಸನಾತನ ಹಿಂದೂ ಧರ್ಮವಷ್ಟೇ. ಭಾರತೀಯತೆ ಎಂದರೆ ಈ ಸನಾತನ ಧರ್ಮದ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವುದು ಎಂದರು.

ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಮೋಹನ್ ಗೌಡ ಇವರು ಮಾತನಾಡಿ ಸನಾತನ ಧರ್ಮವು ಶತಮಾನಗಳಿಂದ ವಿವಿಧ ರೀತಿಯ ಆಕ್ರಮಣಗಳನ್ನು ಎದುರಿಸುತ್ತಲೇ ಬಂದಿದೆ. ಮುಸ್ಲಿಂ ಆಕ್ರಮಣಕಾರರಿಂದ ಪ್ರತ್ಯಕ್ಷ ದಾಳಿಗಳು ನಡೆದರೆ, ಆಂಗ್ಲರ ಕಾಲದಲ್ಲಿ ವೈಚಾರಿಕ ಆಕ್ರಮಣಗಳು ನಡೆದವು. ಆದರೆ ಸ್ವಾತಂತ್ರ್ಯಾನಂತರ ನಮ್ಮದೇ ದೇಶದಲ್ಲಿ ಕೆಲವು ಅರ್ಬನ್ ನಕ್ಸಲರು ಧರ್ಮ, ಇತಿಹಾಸ ಮತ್ತು ನಮ್ಮ ಶ್ರದ್ಧಾಸ್ಥಾನಗಳ ಮೇಲೆ ನಿರಂತರವಾಗಿ ವೈಚಾರಿಕ ಆಕ್ರಮಣ ನಡೆಸುತ್ತಿದ್ದಾರೆ ಎಂದರು.ವ್ಯಕ್ತಿಯ ಧರ್ಮ ಶ್ರದ್ಧೆಯ ಮೇಲೆ ಆಕ್ರಮಣ ನಡೆದರೆ, ಅವನು ಧರ್ಮಹೀನನಾಗಿ ನಂತರ ಹಿಂದೂ ವಿರೋಧಿಯಾಗುತ್ತಾನೆ. ಆದ್ದರಿಂದ ಇಂತಹ ಆಕ್ರಮಣಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದರು.

ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ. ಪಿ. ಕೃಷ್ಣ ಭಟ್ ಇವರು ಮಾತನಾಡುತ್ತ “ಹಿಂದೂ ಜೀವನಶೈಲಿ ಎಲ್ಲವನ್ನೂ ರಕ್ಷಿಸುವ ಚಿಂತನೆಯಾಗಿದೆ. ಆದರೆ ಇಂದಿನ ಕಾಲದಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆ ತರುವ ಚಿಂತನೆಗಳನ್ನು ಪೋಷಿಸಲಾಗುತ್ತಿದೆ. ಇತರ ಪಂಥಗಳಿಗೆ ಧಾರ್ಮಿಕ ಸ್ವಾತಂತ್ರ್ಯವಿರುವಂತೆ ತೋರಿಸಲಾಗುತ್ತಿದೆಯಾದರೂ, ಸನಾತನ ಧರ್ಮದ ನಾಶಕ್ಕೆ ಕಾನೂನಿನ ಸಹಕಾರವಿದೆಯೇ ಎಂಬ ಪ್ರಶ್ನೆ ಎದ್ದಿದೆ. ಹಿಂದೂ ಧರ್ಮವು ಮತವಲ್ಲ. ಮತಗಳು ಸಂಕುಚಿತ ಪರಿಕಲ್ಪನೆಯಾಗಿವೆ; ಕೆಲ ಪಂಥಗಳಲ್ಲಿ ಬದಲಾವಣೆಗೇ ಅವಕಾಶವಿಲ್ಲ. ಆದರೆ ಭಾರತದ ಚಿಂತನೆ ಈ ಸಂಕುಚಿತ ಪರಿಕಲ್ಪನೆಗಳಿಗೆ ವಿರುದ್ಧ. ಹಿಂದೂ ಧರ್ಮವು ಎಲ್ಲವನ್ನೂ ಅಳವಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಅದಕ್ಕಾಗಿ ಇದನ್ನು ವಿಶಾಲ ಆಲದ ಮರವೆಂದು ಕರೆಯಬಹುದು ಎಂದರು.