ಲೇಖನ:ಡಾ.ಪ್ರಕಾಶ ಗ.ಖಾಡೆ , ಬಾಗಲಕೋಟ
(ಭಾರತ ಸರಕಾರದ ರಾಷ್ಟ್ರಪತಿ, ಉಪರಾಷ್ಟ್ರಪತಿ , ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾಗಿದ್ದ ಮರೆಯಲಾಗದ ಕನ್ನಡಿಗ ಡಾ.ಬಿ.ಡಿ.ಜತ್ತಿ ಅವರ ಬದುಕು ಮತ್ತು ಕವಿಗಳು ಕಂಡ ವ್ಯಕ್ತಿತ್ವ ದರ್ಶನ ಈ ಲೇಖನ, ಸಪ್ಟಂಬರ್ ೧೦ ಜನ್ಮದಿನದ ಪ್ರಯುಕ್ತ ತನ್ನಿಮಿತ್ತ ಲೇಖನ.)

ಭಾರತ ಒಕ್ಕೂಟದಲ್ಲಿ ಬಹುದೊಡ್ಡ ಹುದ್ದೆ ಹಾಗೂ ಗೌರವದ ಸಂಕೇತವಾದುದು ರಾಷ್ಟçಪತಿ ಸ್ಥಾನ. ಈ ಸ್ಥಾನಕ್ಕೆ ಗ್ರಾಮೀಣ ಪ್ರದೇಶದ ಕಾಯಕ ಜೀವಿಗಳು ಬರಬೇಕೆಂಬುದು ಗಾಂಧೀಜಿಯವರ ಆಶಯವಾಗಿತ್ತು. ಗಾಂಧೀಜಿಯವರ ಆಶಯಕ್ಕೆ ಒಂದು ಸ್ಪಷ್ಟ ನಿದರ್ಶನವೆಂಬAತೆ ಹಿಂದೆ ಮರಾಠಿ ಆಡಳಿತದಲ್ಲಿ ಸೇರಿ ಹೋಗಿದ್ದ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಸಾಮಾನ್ಯ ಮನೆತನದ ಧೀರ ಬಾಲಕನೊಬ್ಬ ರಾಷ್ಟçಪತಿ ಹುದ್ದೆ ಅಲಂಕರಿಸಿದ್ದು ಸಾಮಾನ್ಯವೇನಲ್ಲ. ಬಸವಣ್ಣನವರು ಸಾರಿದ ಕಾಯಕ ನಿಷ್ಠೆ, ಸತ್ಯ, ಪ್ರಾಮಾಣಿಕತೆ, ವಕೀಲಿ ಕಲಿಕೆಯಿಂದ ಬಂದ ನ್ಯಾಯ ನಿಷ್ಠುರತೆ, ತಂದೆ ತಾಯಿ ಗುರುಗಳು ಕಲಿಸಿದ ಮಾನವೀಯತೆ ಈ ಎಲ್ಲವನ್ನೂ ರಕ್ತಗತ ಮಾಡಿಕೊಂಡಿದ್ದ ಸಾವಳಗಿಯ ಬಸಪ್ಪ ದಾನಪ್ಪ ಜತ್ತಿ ಅವರು ದೆಹಲಿಯ ಆಡಳಿತದ ಇತಿಹಾಸದಲ್ಲಿ ತಮ್ಮ ಹೆಸರನ್ನು ಅಜರಾಮರಗೊಳಿಸಿದರು.

ಜಮಖಂಡಿ ಸಂಸ್ಥಾನಕ್ಕೆ ಸೇರಿದ್ದ ಜಮಖಂಡಿಯಿAದ ೩೪ ಕಿ.ಮೀ. ದೂರದಲ್ಲಿರುವ ಸಾವಳಗಿಯು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅಗ್ರಹಾರವಾಗಿತ್ತು. ಈಗ ಈ ಊರಿನ ಜನಸಂಖ್ಯೆ ಹದಿನೈದು ಸಾವಿರ. ಈ ಊರಿನಲ್ಲಿ ಸಂಗಮೇಶ್ವರ, ಶಿವಲಿಂಗೇಶ್ವರ, ಸೋಮೇಶ್ವರ, ಬ್ರಹ್ಮದೇವರ, ಕಲ್ಮೇಶ್ವರ, ಬಸವಣ್ಣ, ವಿಠ್ಠಲ ಮಂದಿರ ಮೊದಲಾದವು ಪ್ರಮುಖ ದೇವಾಲಯಗಳು. ಸಾವಳಗಿಯ ಸೋಮೇಶ್ವರ ದೇವಾಲಯದ ವೈಶಿಷ್ಟö್ಯವೆಂದರೆ ಕಾರ್ತಿಕಮಾಸದ ದೀಪಾವಳಿಯ ನಂತರ ಪಾಡ್ಯ ಹಾಗೂ ಯುಗಾದಿಯ ಪಾಡ್ಯಗಳೆರಡೂ ದಿನಗಳು ಸೂರ್ಯನ ಕಿರಣವು ಶಿವಲಿಂಗದ ಮೇಲೆ ಬೀಳುತ್ತದೆ ಎಂಬ ಪ್ರತೀತಿ ಇದೆ. ಶ್ರಾವಣ ಮಾಸದ ಕೊನೆಯ ಸೋಮವಾರ ನಡೆಯುವ ಜಾತ್ರೆಯಲ್ಲಿ ಸಹಸ್ರಾರು ಜನ ಸೇರುತ್ತಾರೆ. ಸೋಮೇಶ್ವರ ಗುಡಿಯ ಸಮೀಪ ಮಸ್ಕಿನ್‌ಸಾಬ ಎಂಬ ಪೀರನ ದರ್ಗಾ ಇದ್ದು, ವಾರ್ಷಿಕವಾಗಿ ಮೊಹರಂ ತಿಂಗಳಲ್ಲಿ ಉರುಸು ನಡೆಯುತ್ತದೆ. ಸಾವಳಗಿಯು ಮೊದಲಿನಿಂದಲೂ ಧಾರ್ಮಿಕ ಭಾವೈಕ್ಯತೆಯ ನೆಲೆವೀಡು ಎನಿಸಿದೆ.

ಒಂದು ಸಣ್ಣ ಹಳ್ಳಿ ಸಾವಳಗಿಯಲ್ಲಿ ೧೦-೯-೧೯೧೨ ರಲ್ಲಿ ದಾನಪ್ಪ ಭಾಗ್ಯವ್ವ ದಂಪತಿಗಳಿಗೆ ಜತ್ತಿ ಅವರು ಜನಿಸಿದರು. ಸಾವಳಗಿಯಲ್ಲಿ ೫ನೇ ತರಗತಿ ಮುಗಿಸುವ ಹೊತ್ತಿಗೆ ಇವರಿಗೆ ವಿಜಾಪುರ ತಾಲೂಕು ಬಾಬಾನಗರದ ಸಂಗಮ್ಮನವರೊAದಿಗೆ ಬಾಲ್ಯ ವಿವಾಹವಾಯಿತು. ಮುಂದೆ ೧೯೨೯ ರಲ್ಲಿ ವಿಜಾಪುರದ ಸಿದ್ದೇಶ್ವರ ಹೈಸ್ಕೂಲಿನಲ್ಲಿ ಮೆಟ್ರಿಕ್ ಪರೀಕ್ಷೆ ಪಾಸು ಮಾಡಿಕೊಂಡರು. ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ೧೯೩೪ ರಲ್ಲಿ ಬಿ. ಎ. ಪದವಿ ತೇರ್ಗಡೆ ಹೊಂದಿದರು. ಇಲ್ಲಿಯೇ ವಿದ್ಯಾರ್ಥಿಗಳ ಸಂಘ ಕಟ್ಟಿ `ಬಸವನ ಬಳಗದ’ ಹೆಸರಿನಲ್ಲಿ ಸಾಹಿತ್ಯಿಕ ಚರ್ಚೆ ಮಾಡುತ್ತಿದ್ದರು. ತಮ್ಮ ಜೊತೆಯಲ್ಲಿದ್ದ ಡಾಂಗೆ ಎಂಬವರ ಕವನಗಳ `ಪೂಗೊಂಚಲು’ ಎಂಬ ಸಂಕಲನವನ್ನು ಪ್ರಕಟಿಸಿ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಂಡರು. ಕಾಲೇಜಿನಿಂದ ಪ್ರಕಟವಾಗುತ್ತಿದ್ದ `ರಾಜಾ ರಾಮಿಯನ್’ ಮಾಸಿಕಕ್ಕೆ ಕಥೆ, ಕವಿತೆ ಬರೆಯುತ್ತಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೇ ಬಸವಣ್ಣನವರ ಚರಿತ್ರೆ ಮತ್ತು ಅವರ ವಿಚಾರಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದರು. ಕಾಲೇಜಿನಲ್ಲಿ ನಡೆದ ಅಂತರ್‌ಕಾಲೇಜು ಚರ್ಚಾ ಸ್ಪರ್ಧೆಯಲ್ಲಿ `ಕನ್ನಡಿಗರ ಏಳು-ಬೀಳು’ ಎಂಬ ವಿಷಯದ ಕುರಿತು ಮಾತನಾಡಿ ಪ್ರಥಮ ಸ್ಥಾನ ಪಡೆದರು. ಭಾಷಣ ಮಾಡುವ ಕಲೆಯನ್ನು ಇಲ್ಲಿಂದಲೇ ಕರಗತ ಮಾಡಿಕೊಂಡರು. ೧೯೩೫ ರಲ್ಲಿ ಸಾಯಿಕ್ಸ್ ಲಾ ಕಾಲೇಜಿನಲ್ಲಿ ಎಲ್. ಎಲ್. ಬಿ. ಗೆ ಸೇರಿದರು. ೨೯-೧-೧೯೩೬ ರಲ್ಲಿ ತಂದೆ ದಾನಪ್ಪನವರ ನಿಧನಾನಂತರ ಕಲಿಕೆಯನ್ನು ನಿಲ್ಲಿಸಿ ಸಾವಳಗಿಗೆ ಮರಳಿದರು. ಊರಲ್ಲಿಯೇ ಪಂಚಾಯತಿಯನ್ನು ಸ್ಥಾಪಿಸಿ ಕಾರ್ಯಕಾರಿ ಮಂಡಳಿಯ ಚೇರಮನ್‌ರಾಗಿ ಚುನಾಯಿತರಾದರು. ಜಮಖಂಡಿ ಸರಕಾರದ ಯಾವ ನೆರವಿಲ್ಲದೆಯೆ ಗ್ರಾಮ ಜನರ ಸಹಕಾರದಿಂದ ಕುಡಿಯುವ ನೀರು, ರಸ್ತೆ, ನಾನಾ ತರದ ಸಾರ್ವಜನಿಕ ಕಲ್ಯಾಣ ಕಾಮಗಾರಿ ಕೈಕೊಂಡರು. ಇದು ಕೊಲ್ಲಾಪುರದ ಪೊಲಿಟಿಕಲ್ ಎಜೆಂಟರ ಗಮನ ಸೆಳೆದು ಸ್ವತ: ಅವರು ಸಾವಳಗಿಗೆ ಭೇಟಿ ನೀಡಿ `ಸ್ವಶ್ರಮದಿಂದ ಇಷ್ಟೊಂದು ಕೆಲಸ ಮಾಡಿದರೂ ಸರಕಾರದವರು ಪಂಚಾಯತಿಗೆ ಧನ ಸಹಾಯ ಮಾಡದಿರುವುದು ದುರಾದೃಷ್ಟಕರ’ ಎಂದು ಸಂದರ್ಶನ ಪುಸ್ತಕದಲ್ಲಿ ಬರೆದರು. ಜತ್ತಿಯವರು ಶ್ರೀ ಟಕ್ಕೆಕರ್ (ಮಾಮಲೆದಾರರು) ಪ್ರೇರಣೆಯಿಂದ ವಕೀಲಿ ವಿದ್ಯಾಭ್ಯಾಸವನ್ನು ಮುಂದುವರೆಸಿ ೧೯೪೧ ರಲ್ಲಿ ಜಮಖಂಡಿಯಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಜಮಖಂಡಿ ಪುರಸಭೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ೫-೧-೧೯೪೩ ರಂದು ನಗರ ಸಭೆ ಚೇರಮನ್‌ರಾಗಿ ಆಯ್ಕೆಯಾದರು. ೧೯೪೫ ರಲ್ಲಿ ಜಮಖಂಡಿ ಸಂಸ್ಥಾನದ ಚುನಾವಣೆಯಲ್ಲಿ ಆರಿಸಿ ಬಂದು ೧೮-೪-೧೯೪೫ ರಲ್ಲಿ ಮಂತ್ರಿಗಳಾದರು. ವಿದ್ಯಾಖಾತೆಯ ಮಂತ್ರಿಗಳಾಗಿ ಕನ್ನಡ ಮಾತೃಭಾಷೆ ವಿದ್ಯಾರ್ಥಿಗಳು ಕನ್ನಡ ಕಲಿಯುವಂತೆ ಪ್ರೋತ್ಸಾಹಿಸಿ ಶಾಲೆಗಳಲ್ಲಿ ಕನ್ನಡ ಕಲಿಕೆಯ ವಾತಾವರಣ ನಿರ್ಮಾಣ ಮಾಡಿದರು. ದೇಶಕ್ಕೆ ಸ್ವಾತಂತ್ರö್ಯ ಬಂದಾದ ಮೇಲೆ ಇಡೀ ದೇಶದಲ್ಲಿಯೇ ಜಮಖಂಡಿ ಸಂಸ್ಥಾನವು ೮-೩-೧೯೪೮ ರಲ್ಲಿ ಮುಂಬೈ ರಾಜ್ಯದಲ್ಲಿ ವಿಲೀನಗೊಂಡು ಸೇರ್ಪಡೆಯಾದ ಮೊದಲ ಸಂಸ್ಥಾನವೆನಿಸಿತು. ಮುಂಬೈ ಸರಕಾರದವರು ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಕಮಿಟಿಯ ಅಭಿಪ್ರಾಯದಂತೆ ೯-೯-೧೯೪೯ ರಂದು ಮುಂಬೈ ರಾಜ್ಯದ ವಿಧಾನ ಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಿದರು. ೫-೧೦-೧೯೪೯ ರಲ್ಲಿ ಮುಂಬೈ ಸರಕಾರದಲ್ಲಿ ಬಿ. ಜಿ. ಖೇರ್ ಅವರಿಗೆ ಪಾರ್ಲಿಮೆಂಟರಿ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿ ಮುರಾರ್ಜಿ ದೇಸಾಯಿ ಅವರ ಸಂಪರ್ಕಕ್ಕೆ ಬಂದರು. ೧೯೫೨ ಮಾರ್ಚ ತಿಂಗಳಲ್ಲಿ ಜರುಗಿದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಉಮೇದುವಾರರಾಗಿ ಜಮಖಂಡಿ ಯಿಂದ ಸ್ಪರ್ಧಿಸಿ ಆಯ್ಕೆಯಾಗಿ ಬಂದರು. ಮುರಾರ್ಜಿ ದೇಸಾಯಿ ಅವರ ಮಂತ್ರಿ ಮಂಡಲದಲ್ಲಿ ಉಪಮಂತ್ರಿಯಾಗಿ ಮುಂಬೈ ಕರ್ನಾಟಕ ಭಾಗದಲ್ಲಿ ಜನೋಪಯೋಗಿ ಮತ್ತು ಕನ್ನಡಪರ ಅನೇಕ ಕಾರ್ಯಗಳನ್ನು ಕೈಕೊಂಡರು.
ಭಾಷಾವಾರು ಪ್ರಾಂತ ರಚನೆಯಂತೆ ೧೯೫೬ ನವೆಂಬರ್ ೧ ರಂದು ಕನ್ನಡವನ್ನು ಮಾತನಾಡುವ ಪ್ರದೇಶವನ್ನೆಲ್ಲಾ ಒಂದುಗೂಡಿಸಿ ಭಾರತ ಸರಕಾರವು ನವ ಮೈಸೂರು ರಾಜ್ಯ ರಚಿಸಿತು. ಮುಂಬೈ ಕರ್ನಾಟಕದ ಬೆಳಗಾವಿ, ಧಾರವಾಡ, ವಿಜಾಪುರ ಮತ್ತು ಕಾರವಾರ ಜಿಲ್ಲೆಗಳು ನವ ಮೈಸೂರು ರಾಜ್ಯಕ್ಕೆ ಸೇರಿದವು. ಮೈಸೂರು ಸರಕಾರದಲ್ಲಿ ಜತ್ತಿಯವರು ಭೂಸುಧಾರಣಾ ಕಮಿಟಿಯ ಅಧ್ಯಕ್ಷರಾಗಿ ರೈತರ ಗೇಣಿದಾರರ ಕಲ್ಯಾಣದ ಪರ ವರದಿ ನೀಡಿದರು. ಮುಂದೆ ೧೬-೫-೧೯೫೮ ರಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಮ್ಮ ಅವಧಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಏಕೀಕರಣ ಕರ್ನಾಟಕದಲ್ಲಿ ಕೈಗಾರಿಕಾ ಕ್ರಾಂತಿ ಮಾಡಿದರು. ನಿಜಲಿಂಗಪ್ಪನವರ ಸಂಪುಟದಲ್ಲಿ ೨-೬-೧೯೬೨ ರಂದು ಅರ್ಥಮಂತ್ರಿಯಾಗಿ ಸೇರಿದರು. ೧೯೬೫ ರಲ್ಲಿ ಭಾರತ ದೇಶದಲ್ಲೆಲ್ಲಾ ಆಹಾರದ ತುಟಾಗ್ರತೆ ಉಂಟಾದ ವೇಳೆಯಲ್ಲಿ ಆಹಾರ ಇಲಾಖೆ ಮಂತ್ರಿಗಳಾಗಿ ಆಹಾರ ಧಾನ್ಯ ಹಂಚಿಕೆ ಸುಗಮಗೊಳಿಸಿದರು. ರಾಜ್ಯ ರಾಜಕೀಯದಲ್ಲಿರುವಷ್ಟು ಕಾಲವೂ ಜನಸೇವೆಗಾಗಿ ತಮ್ಮ ಇಡೀ ವೇಳೆಯನ್ನು ವ್ಯಯಿಸಿದರು.
ಬಿ. ಡಿ. ಜತ್ತಿಯವರೊಳಗಿನ ಪಾಂಡಿತ್ಯ, ಅಪಾರ ಸಾಮರ್ಥ್ಯ, ವಿನಮ್ರತೆ, ಸ್ನೇಹಪರತೆಗಳು ರಾಷ್ಟçಜೀವನದ ಆಡಳಿತಕ್ಕೆ ದಿಕ್ಸೂಚಿಯಾಗಿ ಬಂದವು. ೧೪-೧೦-೧೯೬೮ ರಂದು ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ ಆಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅವರ ರಾಜಕೀಯ ಆಡಳಿತ ಕ್ಷೇತ್ರ ವಿಸ್ತರಿಸಿತು. ಅರವಿಂದರ ತತ್ವಜ್ಞಾನ, ಮಾತಾಜಿ ಅವರ ಅನುಗ್ರಹ ಧಾರ್ಮಿಕ ಮನೋವೃತ್ತಿಯು ಜತ್ತಿಯವರಲ್ಲಿ ಮಾನವತಾವಾದಿ ಗುಣಕ್ಕೆ ಪುಷ್ಟಿ ದೊರೆತಂತಾಯಿತು. ಮುಂದೆ ೮-೧೧-೧೯೭೨ ರಲ್ಲಿ ಒರಿಸ್ಸಾ ರಾಜ್ಯದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿ ಅಲ್ಲಿನ ರಾಷ್ಟಾçಧ್ಯಕ್ಷರ ಆಳ್ವಿಕೆಯಲ್ಲಿ ಆದಿವಾಸಿ ಮತ್ತು ಪರಿಶಿಷ್ಟ ಜನಾಂಗದ ಅಭಿವೃದ್ಧಿಗಾಗಿ ಅಭಿವೃದ್ದಿ ಮಂಡಲ ನಿರ್ಮಿಸಿ ಅವರ ಬಾಳಿನಲ್ಲಿ ಹೊಸ ಆಶಾಕಿರಣ ಮೂಡಿಸಿದರು. ಮುಂದೆ ಇಡೀ ಕರ್ನಾಟಕವೇ ಅಚ್ಚರಿಪಡುವಂತೆ ೨೭-೮-೧೯೭೪ ರಲ್ಲಿ ಭಾರತ ದೇಶದ ಉಪರಾಷ್ಟçಪತಿಗಳಾಗಿ ಚುನಾಯಿತರಾಗಿ ೩೧ನೇ ತಾರೀಖು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಅದೇ ದಿವಸ ರಾಜ್ಯ ಸಭೆಯ ಚೇರಮನ್‌ರಾಗಿಯೂ ಅಧಿಕಾರವಹಿಸಿಕೊಂಡರು. ದಿನಾಂಕ ೧೧-೨-೧೯೭೭ ರಂದು ರಾಷ್ಟçಪತಿಗಳಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಅವರು ನಿಧನರಾದಾಗ ಅಂದೇ ಹಂಗಾಮಿ ರಾಷ್ಟçಪತಿಗಳಾಗಿ ಅಧಿಕಾರವಹಿಸಿಕೊಂಡರು. ಮುಂದೆ ಸಂಜೀವÀ ರೆಡ್ಡಿ ಅವರು ರಾಷ್ಟçಪತಿಗಳಾಗಿದ್ದ ಅವಧಿಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆಗಾಗಿ ಅವರು ಅಮೇರಿಕಾಕ್ಕೆ ಹೋದಾಗ ಪುನ: ಹಂಗಾಮಿ ರಾಷ್ಟçಪತಿಗಳಾಗಿ ಜತ್ತಿಯವರು ಕಾರ್ಯ ನಿರ್ವಹಿಸಿದರು. ಈ ಹೊತ್ತಿಗೆ ದೇಶದ ಮೂರು ವಿಶ್ವವಿದ್ಯಾಲಯಗಳು ಧಾರವಾಡ ವಿ.ವಿ. (೧೯೭೪ ರಲ್ಲಿ) ಗುರುನಾನಕದೇವ ವಿ.ವಿ. (೧೯೭೬ ರಲ್ಲಿ) ಹಾಗೂ ಬೆಹ್ರಾಮ್‌ಪುರ ವಿ.ವಿ. (೧೯೭೭ ರಲ್ಲಿ) ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದವು.
ಡಾ. ಬಿ.ಡಿ.ಜತ್ತಿಯವರು ತಮ್ಮ ಬದುಕನ್ನು ಬಸವ ಚಿಂತನೆಗಾಗಿ ಮುಡುಪಿಟ್ಟರು. `ಆಧುನಿಕ ಬಸವಣ್ಣ’ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದ ಜತ್ತಿಯವರು ಬಸವಣ್ಣನವರ ವಚನಗಳಿಗೆ ವಿಶ್ವವ್ಯಾಪಕತೆಯನ್ನು ತಂದರು. ಮಹಾರಾಷ್ಟç ನಾಗಪುರ ದಲ್ಲಿದ್ದ ವಚನಗಳ ಕಟ್ಟನ್ನು ಸಂಗ್ರಹಿಸಿ ಪ್ರಕಟಿಸಿದರು. ತಾವು ಮುಖ್ಯ ಮಂತ್ರ‍್ರಿಗಳಾಗಿದ್ದ ಅವಧಿಯಲ್ಲಿ ಕಿಲ್ಲೆ ಕಲ್ಯಾಣ ಎಂಬ ಹೆಸರಿನ ಗ್ರಾಮವನ್ನು `ಬಸವ ಕಲ್ಯಾಣ’ ಎಂದು ಬದಲಿಸಿ ತಾಲೂಕು ಸ್ಥಳವನ್ನಾಗಿ ಮಾಡಿದರು. ೨೬-೯-೧೯೬೪ ರಂದು `ಬಸವ ಸಮಿತಿ’ ಯನ್ನು ಸ್ಥಾಪಿಸಿ ೧೯೬೫ ಮೇ ತಿಂಗಳಲ್ಲಿ ಭಾರತ ದೇಶದ ವಿವಿಧಡೆ ಬಸವ ಜಯಂತಿಯನ್ನು ಆಚರಿಸಲಾಯಿತು. ಇಂದು ಜತ್ತಿಯವರು ನೆಟ್ಟ `ಬಸವ ಸಮಿತಿ’ ಹೆಮ್ಮರವಾಗಿ ವಿಶ್ವವ್ಯಾಪಿಯಾಗಿದೆ. ಜತ್ತಿಯವರ ಪುತ್ರ ಅರವಿಂದ ಜತ್ತಿಯವರು ಬಸವ ಸಮಿತಿ ಅಧ್ಯಕ್ಷರಾಗಿದ್ದು ತಮ್ಮ ಇಡೀ ಬದುಕನ್ನು ಬಸವಣ್ಣವರ ತತ್ವಕ್ಕೆ, ಪ್ರಚಾರಕ್ಕೆ ಅರ್ಪಿಸಿಕೊಂಡಿದ್ದಾರೆ. ತಂದೆಯವರ ಆದರ್ಶವನ್ನು ಮುಂದುವರಿಸಿದ್ದಾರೆ.

ತಮ್ಮ ವಿಶ್ರಾಂತ ಜೀವನವನ್ನು ಬೆಂಗಳೂರಿನಲ್ಲಿ ಕಳೆದ ಜತ್ತಿಯವರು ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆಧ್ಯಾತ್ಮಿಕ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಂತೃಪ್ತ ಜೀವನ ಸಾಗಿಸಿ ೭-೬-೨೦೦೨ ರಲ್ಲಿ ಲಿಂಗೈಕ್ಯರಾದರು. ಅಂದು ಭಾರತದ ಶ್ರೇಷ್ಠ ಹಾಗೂ ಸುವಿಖ್ಯಾತ ಪುತ್ರನೋರ್ವ ತಾಯ ಒಡಲ ಸೇರಿ ಅಜರಾಮರರಾದರು. ಡಾ. ಬಿ.ಡಿ.ಜತ್ತಿಯವರ ಅಪೂರ್ವ ಸಾಧನೆ. ಕಾಯಕನಿಷ್ಠೆ, ಪ್ರಾಮಾಣಿಕತೆ, ಕ್ರಿಯಾಶೀಲತೆ ಹಾಗೂ ಜನಾನುರಾಗಿ ಮನೋಭಾವದ ಕುಶಲತೆಯನ್ನು ಕನ್ನಡ ಕವಿಗಳು ಕಂಡಿದ್ದಾರೆ. ರಾಜಕಾರಣಿಯಾಗಿದ್ದರೂ ಜತ್ತಿಯವರು ನಮ್ಮ ಕವಿಗಳಿಗೆ ಒಬ್ಬ ಶ್ರೇಷ್ಠ ದಾರ್ಶನಿಕರಾಗಿದ್ದರು. ಡಾ. ಜತ್ತಿಯವರಿಗೆ ಕನ್ನಡ ಮತ್ತು ಭಾರತೀಯ ಭಾಷಾ ಕವಿಗಳೊಂದಿಗೆ ಆತ್ಮೀಯವಾದ ಒಡನಾಟವಿತ್ತು. ಬೇಂದ್ರೆ, ಕುವೆಂಪು, ಸಿದ್ದಯ್ಯ ಪುರಾಣಿಕ, ಶಾಂತರಸ ಮೊದಲಾದವರ ಒಡನಾಡಿಗಳಾಗಿದ್ದರು. ಸಾಹಿತಿಗಳು ಜತ್ತಿಯವರನ್ನು ಕಂಡ ಬಗೆ ಹೀಗಿದೆ-
ಬಂದುದನು ಬಂದAತೆ ಒಪ್ಪಿದಿರಿ ಅಪ್ಪಿದಿರಿ
ಅರಿವು-ಕ್ರಿಯೆಯಿಂದದನು ಸಿಂಗಾರ ಗೈದಿರಿ
`ಶಿವ’ದ ಕುಡಿಯೊಡೆಯಿತ್ತು
ಹೂ ಹಣ್ಣು ತಳೆಯಿತ್ತು
ನಾಡ ಮೈಯಲಿ ಬೆಳಕು- ನೆತ್ತರನು ಹರಿಯಿಸಿತು
ಕೆಚ್ಚು ನಚ್ಚಿನ ನವ್ಯ ಮಾರ್ಗವನು ನಿರ್ಮಿಸಿತು
– ಶಾಂತರಸ
“ಬಸವಣ್ಣನವರ ವಚನಗಳನ್ನು ಕಂಠಪಾಠ ಮಾಡಿದವರು ಅನೇಕರಿರಬಹುದು. ಅವರ ಬಗೆಗೆ ಗಂಟೆಗಳ ಕಾಲ ಭಾಷಣ ಮಾಡಬಲ್ಲವರು ಅನೇಕ ರಿರಬಹುದು. ಕುಳಿತಾಗ, ನಿಂತಾಗ, ನಡೆದಾಗ, ಬಸವ ಬಸವ ಎಂದು ಜಪಿಸುವವರೂ ಅನೇಕರಿರಬಹುದು. ಆದರೆ ಬಸವಣ್ಣವರ ವಚನಗಳನ್ನು ಅರಿತು, ಅರಗಿಸಿಕೊಂಡವರು, ಅನುದಿನದ ವ್ಯವಹಾರದಲ್ಲೂ ಸಹ ಅಣ್ಣನವರ ಆದೇಶದಂತೆ ನಡೆದುಕೊಂಡು ಬರುವವರು ವಿರಳ. ಅಂಥ ಕೆಲವೇ ವಿರಳ ವ್ಯಕ್ತಿಗಳಲ್ಲಿ ನಮ್ಮ ಜತ್ತಿಯವರೂ ಒಬ್ಬರು.”
– ಬಸವರಾಜ ಕಟ್ಟೀಮನಿ.
“ಶ್ರೀ ಜತ್ತಿಯವರ ಮೇಲ್ನೋಟದ ತಾಳ್ಮೆ, ಸಂಯಮಗಳು ಒಳಗಿನ ಧೃಡತೆಯ ಸಂಕೇತ”
– ಎಂ. ಚಿದಾನಂದಮೂರ್ತಿ.

ಆಳೀತ ನೀಳಲ್ಲ; ಆಳ ನೀಳವ ಬಲ್ಲ;
ಏಳು ಬೀಳುಗಳಲ್ಲಿ ತಾಳ್ಮೆಯಿಂದಿರಬಲ್ಲ
ಕಾಳು ಬಾಳಿಗೆ ಸಲ್ಲ; ಮೇಲು ಬಾಳಿನ ಮಲ್ಲ
ನಾಳಿನಡಕಿಲಿನಲ್ಲಿ ಮೇಲೆರುವಾ ಕುಳ್ಳ
– ಜೋಳದರಾಶಿ ದೊಡ್ಡನಗೌಡರು

ನೂರು ಪೌಂಡಿನ ತೂಕದೀತನೇ ಜಗಜಟ್ಟಿ
ಹೃದಯ ಶ್ರೀಮಂತಿಕೆಯ ಬಸಪ್ಪ ದಾ. ಜತ್ತಿ
– ಡಾ. ಸಾ. ಶಿ. ಮರುಳಯ್ಯ

ಶರಣರಂಗಣದ ಶಿಶು ಈಗ ವಿಶ್ವಪೌರ
ಒಳಗಣ್ಣಿಗಷ್ಟೇ ಗೋಚರ; ಆ ಎತ್ತರ
– ಗೊ. ರು. ಚನ್ನಬಸಪ್ಪ

ಭಕ್ತಿ ಬಲ್ಲಿದರು, ಶಕ್ತಿ ಸಂಪನ್ನರು ಜತ್ತಿಯವರು
ಜಗದ ಜೀವನದಲಿ ಜೋಕೆಯನರಿತವರು
ರಾಷ್ಟç ಜೀವನದಿ ಸೋಲರಿಯದ ವೀರರು
– ಜ.ಚ.ನಿ.
“ಜತ್ತಿಯವರ ಸಾಧಾರಣತೆಯಲ್ಲಿ ಒಂದು ವಿಧದ ಅಸಾಧಾರಣತೆ ಇದೆ. ತಮ್ಮಲ್ಲಿರುವ ಸಾಮರ್ಥ್ಯವನ್ನು ಕುರಿತು ಅವರೆಂದೂ ಯಾರೆದುರೂ ಹೇಳಿಕೊಂಡವರಲ್ಲ. ಅವರು ತಾವು ದೊಡ್ಡವರಲ್ಲಿಯೂ ಸಣ್ಣವರು, ಸಣ್ಣವರಲ್ಲಿಯೂ ಸಣ್ಣವರು ಎನ್ನುವ ಭಾವನೆ ಇರಿಸಿಕೊಂಡು ಬೆಳೆದು ಬಂದಿದ್ದಾರೆ. “ಎನಗಿಂತ ಕಿರಿಯರಿಲ್ಲ” ಎನ್ನುವ ಈ ಭಾವನೆ ಅವರನ್ನು ಮೇಲಕ್ಕೆ ತಂದು ನಿಲ್ಲಿಸಿದೆ”
– ಪಾಟೀಲ ಪುಟ್ಟಪ್ಪ.
ಹೀಗೆ ಬಿ. ಡಿ. ಜತ್ತಿಯವರ ವ್ಯಕ್ತಿತ್ವದ ಗುಣಗಾನವನ್ನು ನಮ್ಮ ಅನೇಕ ಹಿರಿಯ ಕವಿ ಸಾಹಿತಿಗಳು ತಮ್ಮ ಲೇಖನಿಯಿಂದ ಬಣ್ಣಿಸಿದ್ದಾರೆ.

ಸದುವಿಯನವೇ ಸದಾ ಶಿವನೊಲುಮೆ
ಬಸವ ವಚನಕೆ ನೀವೆ ನಿತ್ಯೋಪಮೆ
– ಡಾ. ಸಂಗಮೇಶ ಹಂಡಗಿ

ದೊರೆತವೆಲ್ಲ ಉನ್ನತ ಪದವಿ ಪುರಸ್ಕಾರ
ಸುಳಿಯಲಿಲ್ಲ ನಿಮ್ಮೆಡೆಗೆ ಇನಿತು ಅಹಂಕಾರ
– ಪುಷ್ಪಾ ಬಿ. ಬಣಕಾರ

ಬಸವತತ್ವಕೆ ಶರಣ ಸಂಪದಕೆ ಹೆಗಲುಕೊಟ್ಟು
ಧಾರ್ಮಿಕತೆಯ ಭಾವ ಹೆಚ್ಚಿಸಿದವರಿವರು
– ವಸಂತ ಅಗಸಿಮನಿ

ಶಿರದಿ ಗಾಂಧಿ ಟೊಪ್ಪಿಗೆ, ಶ್ವೇತ ಖಾದಿ ವಸನ
ಸೀದಾ ಸಾದಾ ಜೀವನ, ಶರಣ ಮಾರ್ಗವೇ ಸಾಧನ
– ಸುನಂದಾ ಹಾಲಭಾವಿ
`ಜತ್ತಿ’ ಎಂದರೆ……
ಬಸವ ಸಮಿತಿ.
ಅಲ್ಲಿ ಸದಾ ಬೆಳಗುತ್ತಿರುವ
ಬಸವ ಜ್ಯೋತಿ
– ಜರಗನಹಳ್ಳಿ ಶಿವಶಂಕರ

ಚಾಣಾಕ್ಷ ಚಾಣಕ್ಯ ಮುತ್ಸದ್ದಿ ಮಂತ್ರಿ ಕರ್ಮಯೋಗಿ ನಿರಭಿಮಾನಿ ಮಹಾಶಕ್ತಿ
– ಕೊತ್ತಲ ಮಹಾದೇವಪ್ಪ
ಕಿರಿಯ ನಿಲುವಿನ ಶರೀರದವರು ಇವರು
ಹಿರಿಯ ಸ್ಥಾನವ ಗಳಿಸಿದರ
ಧರೆಯೊಳು ಮಹಾತ್ಮಾ ಬಸವಣ್ಣನವರ ತತ್ವ ಪಾಲಿಸಿದರ
– ಹುಲಕುಂದಕAದ ಭೀಮಕವಿ ಲಾವಣಿ
ಹೀಗೆ ಡಾ. ಜತ್ತಿಯವರ ಬದುಕು ಸಾಧನೆ ಕುರಿತು ನಮ್ಮ ಕವಿಗಳು ತುಂಬಾ ಆಪ್ತವಾಗಿ ಕವಿತೆ ರಚಿಸಿದ್ದಾರೆ.ಕನ್ನಡ ಕಾವ್ಯ ಲೋಕದಲ್ಲಿ ಹೀಗೆ ಕಾವ್ಯಪ್ರೀತಿ ಇಟ್ಟುಕೊಂಡ ಗಣ್ಯರೊಬ್ಬರ ಕುರಿತಾಗಿ ನಮ್ಮ ಕವಿಗಳು ಕಟ್ಟಿಕೊಟ್ಟ ಈ ಕವಿತೆಗಳು ಜತ್ತಿಯವರ ಹಿರಿದಾದ ವ್ಯಕ್ತಿತ್ವಕ್ಕೆ ಮಾದರಿಯಾಗಿವೆ.
#

ವಿಳಾಸ ;
ಡಾ. ಪ್ರಕಾಶ ಗ. ಖಾಡೆ
‘ಶ್ರೀ ಗುರು ನಿಲಯ’ಮನೆ ನಂ.ಎಸ್.೧೩೫
.ಸರಸ್ವತಿ ಬಡಾವಣೆ, ಸೆಕ್ಟರ್ ನಂ. ೬೩, ನವನಗರ, ಬಾಗಲಕೋಟ