ಸುದ್ದಿಕನ್ನಡ ವಾರ್ತೆ
ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭಾರಿ ಪ್ರಮಾಣದ ಪ್ರವಾಹ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡು ಹಲವಾರು ಮನೆಗಳಿಗೆ ನೀರು ನುಗ್ಗಿದ ಘಟನೆ ನಡೆದಿದೆ. ರಾತ್ರಿ ನೇಕಾರ್ ನಗರದ ನಿವಾಸಿಯೊಬ್ಬರು ಈ ಪ್ರವಾಹದ ಚರಂಡಿಗೆ ಜಾರಿ ಬಿದ್ದು ಮೃತಪಟ್ಟಿರಬಹುದು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಈ ಘಟನೆಯ ಮಾಹಿತಿಯ ಆಧಾರದ ಮೇಲೆ ಅಗ್ನಿಶಾಮಕ, ವಾಹನ ಸೇವೆ ಮತ್ತು ಪೆÇಲೀಸರ ಸಿಬ್ಬಂದಿ ಈತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ ಸುಮಾರು 45ರಿಂದ 50 ವರ್ಷ ವಯಸ್ಸಿನ ಹುಸೇನ್ ಕಲಾಸ್ ತನ್ನ ಸ್ನೇಹಿತನೊಂದಿಗೆ ಹಿಂಬದಿ ಸವಾರರಾಗಿ ಹೋಗುತ್ತಿದ್ದರು. ಸ್ಥಳೀಯರ ಎಚ್ಚರಿಕೆಯ ಹೊರತಾಗಿಯೂ, ಇಬ್ಬರೂ ಈ ಭಾರಿ ಮಳೆಯ ಪ್ರವಾಹದಲ್ಲಿ ಮುಂದೆ ಹೋದರು. ಸವಾರ ಗುಂಡಿಗೆ ಜಾರಿದಾಗ ಸಮತೋಲನ ತಪ್ಪಿ ಹುಸೇನ್ ಚರಂಡಿಗೆ ಬಿದ್ದರು ಎನ್ನಲಾಗಿದ್ದು, ಸ್ಥಳೀಯರಿಂದ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಗುರುವಾರ ಸಾಯಂಕಾಲ ಮಳೆ ಪ್ರಾರಂಭವಾಗಿ ಮಧ್ಯರಾತ್ರಿಯವರೆಗೆ ಮುಂದುವರೆಯಿತು. ಹುಬ್ಬಳ್ಳಿಯ ಉಣಕಲ್ ಕೆರೆಯ ಉದ್ದಕ್ಕೂ ಇರುವ ಹಳೆಯ ಪುಣೆ ಬೆಂಗಳೂರು ಹೆದ್ದಾರಿಯಲ್ಲಿ ಹಲವಾರು ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದರಿಂದ ಹೆಚ್ಚು ಹಾನಿಗೊಳಗಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಹಲವು ಪ್ರಯಾಣಿಕರು ತಮ್ಮ ಕಾರೊಳಗೆಯೇ ಸಿಕ್ಕಿಹಾಕಿಕೊಂಡರು. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿ ವಾಹನಗಳು ಬೇರೆಡೆಗೆ ದಾರಿ ಬದಲಿಸುವಂತಾಯಿತು.
ಹಲವೆಡೆ ನೆಲ ಮಹಡಿಯಲ್ಲಿರುವ ಮನೆಗಳ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು, ಹಲವಾರು ಮನೆಗಳಿಗೆ ನೀರು ನುಗ್ಗಿತು. ನಿವಾಸಿಗಳು ನೀರನ್ನು ಹೊರಹಾಕಲು ನಿದ್ರೆಯಿಲ್ಲದೆ ರಾತ್ರಿ ಕಳೆದರು. ಅನೇಕ ಅಪಾರ್ಟ್‍ಮೆಂಟ್‍ಗಳ ನೆಲಮಾಳಿಗೆಗಳು ಸಹ ಜಲಾವೃತಗೊಂಡ ಘಟನೆ ನಡೆದಿದ್ದು, ನೀರನ್ನು ಹೊರಹಾಕಲು ಪ್ರಯತ್ನಗಳು ನಡೆಯುತ್ತಿವೆ.
ಈ ರಣಭೀಕರ ಮಳೆಯಿಂದಾಗಿ ಬೆನ್ನಿ ಹಾಲ್ ಹೊಳೆ ಹರಿಯುವ ಯಮನೂರ್ ಗ್ರಾಮದ ಮನೆಯೊಂದರಲ್ಲಿ ನಾಲ್ಕು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಅತಿಯಾದ ಮಳೆಯಿಂದಾಗಿ ಬೆನ್ನಿ ಹಳ್ಳ ಹೊಳೆಯ ನೀರಿನ ಮಟ್ಟದಲ್ಲಿ ತೀವ್ರ ಏರಿಕೆಯಾಗಿದ್ದು, ಗ್ರಾಮದ ಹಲವಾರು ಮನೆಗಳು ತೊಂದರೆಗೊಳಗಾಗಿವೆ. ದೋಣಿಗಳ ಮೂಲಕ ಸಿಲುಕಿರುವ ಪ್ರವಾಸಿಗರನ್ನು ತಲುಪಲು ಪ್ರಯತ್ನಗಳು ನಡೆಯುತ್ತಿವೆ.
ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಮುಂದಿನ 24 ಗಂಟೆಗಳ ಕಾಲ ತೀವ್ರ ಮಳೆಯಾಗುವ ನಿರೀಕ್ಷೆಯಿದೆ ಎಂದು ಸ್ಥಳೀಯಾಡಳಿತ ತಿಳಿಸಿದೆ.