ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ- ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಟಿಪ್ಪು ನಗರದ ನಿವಾಸಿ ತಬಲಾ, ಡೋಲಕ, ಹಾರ್ಮೋನಿಯಂ, ಕಾರ್ನೆಟ್, ಸಾಕ್ಸ್ ಒನ್, ನಾಟಕ, ಕವಾಲಿ, ಜಾನಪದ, ರಸಮಂಜರಿ, ಆರ್ಕೆಸ್ಟ್ರಾ, ಆಕಾಶವಾಣಿ ಮತ್ತು ಚಲನಚಿತ್ರಗಳಲ್ಲಿ ಹಿನ್ನೆಲೆ ತಬಲವಾದಕರಾಗಿ ಐದು ದಶಕಗಳಿಂದ ಸೇವೆ ಸಲ್ಲಿಸಿದ ಖ್ಯಾತ ಕಲಾವಿದ ನೂರುದ್ದೀನ್ ಇಮಾಮಹುಸೇನ್ ಗೋರೆಖಾನ್ ಅವರನ್ನು ಭಾರತ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ, ಕನ್ನಡತಿ, ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಅವರ ಬೈಲಹೊಂಗಲದಲ್ಲಿರುವ ಐಕ್ಯ ಸ್ಥಳದಲ್ಲಿ ಭಾರತದ ಘನತೆವೆತ್ತ ಮಾಜಿ ರಾಷ್ಟ್ರಪತಿಗಳ ಪುತ್ರರು ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಬಸಪ್ಪ ಜತ್ತಿ ಅವರು ಬಸವ ಸಮಿತಿಯ ವತಿಯಿಂದ ಸನ್ಮಾನ ಪತ್ರ ಅರ್ಪಿಸಿ, ಫಲ ಪುಷ್ಪ ನೀಡಿ ಸನ್ಮಾನಿಸಿ ಗೌರವಿಸಿದರು.
ಖ್ಯಾತ ಕಲಾವಿದ ನೂರುದ್ದೀನ್ ಅವರನ್ನು ಸನ್ಮಾನಿಸಿ ಮಾತನಾಡಿದ ಡಾ. ಅರವಿಂದ ಜತ್ತಿ ಅವರು ಅರ್ಧ ಶತಮಾನಗಳಿಂದ ಕಲಾವಿದನಾಗಿ ನೂರುದ್ದೀನ್ ಅವರು ರಾಜ್ಯದ ವಿವಿಧ ಭಾಗಗಳಲ್ಲಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸಿದ್ದಾರೆಂದರು. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಎಲೆ ಮರೆಯ ಕಾಯಿಯಂತಿರುವ ಇಂಥ ಕಲಾವಿದರನ್ನು ಗುರುತಿಸಿ ಗೌರವಿಸಬೇಕೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಬೆಂಗಳೂರು ಬಸವ ಸಮಿತಿಯ ಕೇಂದ್ರ ಸಮಿತಿಯ ಸದಸ್ಯರಾದ ಮಹಾದೇವಪ್ಪ ಗುರುಲಿಂಗಪ್ಪ ವಾಲಿ, ಖ್ಯಾತ ಉದ್ದಿಮೆದಾರರಾದ ಮಿಥುನ ವಿಠ್ಠಲ ಹುಗ್ಗಿ, ಸಮಾಜ ಸೇವಕ, ಬಡವರ ಬಂಧು ರಫೀಕ್ ಬಡೇಘರ, ಖ್ಯಾತ ಸಾಹಿತಿ ಟಿ. ಎಚ್. ಎಂ. ಶೇಖರಯ್ಯ ಉಪಸ್ಥಿತರಿದ್ದರು.