ಸುದ್ದಿ ಕನ್ನಡ ವಾರ್ತೆ

ಕೊಲ್ಹಾರ: ಹಲವು ರಂಗಗಳಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದ ಮಸೂತಿ ಗ್ರಾಮ ಪ್ರಸ್ತುತ ಯುಪಿಎಸ್‌ಸಿ (ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್) ಪರೀಕ್ಷೆಯಲ್ಲಿ ತಮ್ಮೂರಿನ ಮಗ ರಾಹುಲ್ ಯರಂತೇಲಿ 462 ನೇ ರ‍್ಯಾಂಕ್ ತಂದು ಕೊಡುವ ಮೂಲಕ ಮತ್ತೊಮ್ಮೆ ಹೆಸರುವಾಸಿಯಾಗಿದೆ.

ಮಸೂತಿ ಗ್ರಾಮದ ಒಂದು ಬಡ ರೈತ ಕುಟುಂಬದಲ್ಲಿ ಜನಿಸಿದ್ದ ಚನ್ನಪ್ಪ ಯರಂತೇಲಿ ತಮ್ಮ ಸ್ವಪ್ರಯತ್ನದಿಂದ ಶಿಕ್ಷಕರಾಗಿ ಪ್ರಸ್ತುತ ಮುದ್ದೇಬಿಹಾಳ ತಾಲೂಕಿನ ಗೋನಾಳ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗಿರುವ ಮೂವರು ಮಕ್ಕಳಲ್ಲಿ ಚೊಚ್ಚಲ ಪುತ್ರ ರಾಹುಲ್ ಯರಂತೇಲಿ ಪ್ರಸ್ತುತ ಯುಪಿಎಸ್‌ಸಿ ಪರೀಕ್ಷೆಯಲ್ಲಿ462 ನೇ ರ‍್ಯಾಂಕ್ ಪಡೆಯುವ ಮೂಲಕ ಹೆತ್ತವರ, ಹುಟ್ಟಿ ಬೆಳೆದ ಮಸೂತಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ರಾಹುಲ್ ಶಿಕ್ಷಣದ ಹೆಜ್ಜೆ
ಒಂದರಿಂದ ಐದನೇ ತರಗತಿಯನ್ನು ಮುದ್ದೇಬಿಹಾಳ ತಾಲೂಕಿನ ಇನಚಗಲ್ ಗ್ರಾಮದಲ್ಲಿ ಪೂರೈಸಿದ ರಾಹುಲ್ ೬ ರಿಂದ ಪಿಯೂಸಿವರೆಗೆ ಆಲಮಟ್ಟಿಯ ನವೋದಯ ವಿದ್ಯಾಲಯದಲ್ಲಿ ಮುಗಿಸಿ ನಂತರ ಬೆಂಗಳೂರಿನ ಎಂ.ವಿ. ಜವರಾಮ್ ಕಾಲೇಜಿನಲ್ಲಿ ಬಿಇ ಪದವಿ ಮುಗಿಸಿದ್ದಾರೆ. ಆ ಬಳಿಕ ಡಾ.ರಾಜಕುಮಾರ್ ಅಕಾಡೆಮಿ ಸಿವಿಲ್ ಸರ್ವೀಸ್‌ನಲ್ಲಿ ಐಎಎಸ್ ಕೋಚಿಂಗ್ ತರಬೇತಿ ಪಡೆದಿದ್ದಾರೆ.

ಮಸೂತಿಯಂತ ಪುಟ್ಟ ಗ್ರಾಮದಲ್ಲಿ ಜನಿಸಿದ್ದರೂ ದಟ್ಟವಾದ ಕನಸಿನ ಮೂಟೆಯನ್ನು ಹೊತ್ತುಕೊಂಡಿದ್ದ ರಾಹುಲ್ ಇಂದು ಅಗಾಧವಾದ ಸಾಧನೆಯನ್ನು ಮೆರೆದಿದ್ದನ್ನು ಕಂಡು ಶಿಕ್ಷಕ ಚನ್ನಪ್ಪನವರಿಗೆ ಚಿನ್ನದಂತ ಮಗ ಹುಟ್ಟಿ ಮಸೂತಿ ಗ್ರಾಮದ ಹೆಸರು ನಾಡಿನಾದ್ಯಂತ ಪಸರಿಸುವಂತೆ ಮಾಡಿದ್ದನ್ನು ಕಂಡು ಇಡೀ ಮಸೂತಿ ಗ್ರಾಮದಲ್ಲಿ ಎಲ್ಲೆಲ್ಲೂ ಸಂತಸ ಮನೆ ಮಾಡಿದೆ.

———————–
ನಮ್ಮೂರಿನ ಯುವಕ ರಾಹುಲ್ ಯರಂತೇಲಿ ಯುಪಿಎಸ್‌ಸಿಯಲ್ಲಿ ೪೬೨ ನೇ ರ‍್ಯಾಂಕ್ ಗಳಿಸಿರುವುದು ನಮಗೆಲ್ಲ ಖುಷಿ ತಂದಿರುವ ವಿಚಾರ. ಈ ಅಭೂತಪೂರ್ವ ಪ್ರತಿಭೆಯಿಂದ ನಮ್ಮೂರಿನ ಕೀರ್ತಿ ಪತಾಕೆ ನಾಡಿನಾಧ್ಯಂತ ಮೊಳಗಿದಂತಾಗಿದೆ.
-ವಿಶ್ವನಾಥ ಹಿರೇಮಠ ಮಸೂತಿ ಗ್ರಾಮಸ್ಥರು.